ಸಿಟೀಜ್ 2.0 ಸುತ್ತ ರಾಜ್ಯ–ಕೇಂದ್ರ ಕಾದಾಟ ತೀವ್ರ.
ಬೆಳಗಾವಿ:
ಗಡಿನಾಡು ಬೆಳಗಾವಿಗೆ ಮಂಜೂರಾದ ಸಿಟೀಜ್ 2.0 ಯೋಜನೆ ಈಗ ಅಭಿವೃದ್ಧಿ ಅಜೆಂಡಾಗಿಂತ ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿದೆ.
₹135 ಕೋಟಿ ಮೌಲ್ಯದ ಯೋಜನೆಗೆ ರಾಜ್ಯ ತನ್ನ ಪಾಲಿನ ಶೇ 40 ರಷ್ಟು ಅನುದಾನ ನೀಡುವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದ ಹಿನ್ನೆಲೆ, ನಗರದಲ್ಲಿ ರಾಜ್ಯ–ಕೇಂದ್ರ ಹೊಣೆಗಾರಿಕೆ ಯಾರು? ಎಂಬ ಪ್ರಶ್ನೆ ರಾಜಕೀಯ ಕಾವು ಹೆಚ್ಚಿಸಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ವಿರೋಧ ಪಕ್ಷಗಳು “ಗಡಿಭಾಗದ ನಗರವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ” ಎಂದು ಆರೋಪ ಹೊರಿಸುತ್ತಿದ್ದರೆ, ಆಡಳಿತಪಕ್ಷದ ವಲಯಗಳು “ಕೇಂದ್ರದ ಯೋಜನೆಗಳೇ ಅಸ್ಪಷ್ಟ, ಪಾಲಿಕೆ ತಾಂತ್ರಿಕ ದೋಷ ಸರಿಪಡಿಸಲಿ” ಎಂದು ಪ್ರತಿಯಾಗಿ ಸಿಡಿದೆದ್ದಿವೆ.

ಮಹಾನಗರ ಪಾಲಿಕೆ ಮುಂದೆ ಇಂದು ನಡೆದ ಪ್ರತಿಭಟನೆಗೂ ಸ್ಪಷ್ಟ ರಾಜಕೀಯ ಬಣ್ಣ ತಗುಲಿದೆ. ಅಲ್ಲಿ ಸೇರಿದ್ದವರು ಕೇಂದ್ರ ಸರ್ಕಾರಕ್ಕೆ ಧಿಕ್ಕಾರಹಾಕಿದರು. ಆದರೆ ಅನುದಾನ ಕೊಡಲು ಹಿಂದೇಟು ಹಾಕಿದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ತುಟಿಪಿಟಕ್ಕೆನ್ನಲಿಲ್ಲ.ಹೀಗಾಗಿ ಇದು ಮುಂದಿನ ಚುನಾವಣೆಗೆ ಅಸ್ತ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಗಡಿ, ಭಾಷೆ, ಅಸ್ತಿತ್ವದ ರಾಜಕೀಯದ ನಡುವೆ ಸದಾ ಸಂವೇದನಾಶೀಲವಾಗಿರುವ ಬೆಳಗಾವಿಯಲ್ಲಿ ಅಭಿವೃದ್ಧಿ ಯೋಜನೆಗಳ ವಿಳಂಬ ರಾಜಕೀಯ ಪರಿಣಾಮ ಉಂಟುಮಾಡುವುನಶ ಅನ್ಯಾಯ ಎಂಬ ಭಾವನೆ ಜನಮನದಲ್ಲಿ ಮೂಡಿದರೆ ಅದು ಮತಪೆಟ್ಟಿಗೆಯವರೆಗೂ ತಲುಪುವ ಸಾಧ್ಯತೆ ಇದೆ.
ಈ ನಡುವೆ ಪಾಲಿಕೆಯ ಆರ್ಥಿಕ ಸಾಮರ್ಥ್ಯ, ಡಿಪಿಆರ್ ತಿದ್ದುಪಡಿ, ಅನುದಾನ ಹಂಚಿಕೆ—all ಸೇರಿ ಗೊಂದಲ ಗಾಢವಾಗಿದೆ. ಕೊನೆಗೆ ಪ್ರಶ್ನೆ ಒಂದೇ: ಸಿಟೀಜ್ 2.0 ಬೆಳಗಾವಿಗೆ ಅಭಿವೃದ್ಧಿಯ ದಾರಿಯೇ? ಅಥವಾ ರಾಜಕೀಯದ ಮತ್ತೊಂದು ಬಲಿಯಾಗುವ ಕನಸೇ?

