‘ಬೆಳಗಾವಿ : ಭಾರತೀಯ ಸಂಸ್ಕೃತಿ-ಪರAಪರೆಯನ್ನು ಎತ್ತಿಹಿಡಿದು, ವಿವಿಧತೆಯಲ್ಲಿ ಏಕತೆ ಸಾಧಿಸಬೇಕೆನ್ನುವ ನಮ್ಮ ನೆಲದ ಮೂಲ ಮಂತ್ರದ ನೆಲೆಯಲ್ಲಿ ಎಲ್ಲರಿಗೂ ಲೇಸು ಬಯಸಿದ ಜಗದ್ಗುರು ಪಂಚಾಚಾರ್ಯರು ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ನಗರದ ಹುಕ್ಕೇರಿ ಶ್ರೀಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಯುಗಾದಿ ಪರ್ವ ಕಾಲದಲ್ಲಿ ಶ್ರೀಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವದ ನೆನಪಿನಲ್ಲಿ ತಮ್ಮ ಶ್ರೀಮಠದಿಂದ ಕೊಡಮಾಡುವ ‘ಪಂಚಾಚಾರ್ಯ ಶ್ರೀ’ ಪ್ರಶಸ್ತಿಯನ್ನು ಈ ಬಾರಿ ಧಾರವಾಡ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ಆ ಮಠದ ಹಿರಿಯ ಶ್ರೀಗಳಾದ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿಯವರಿಗೆ ಮಂಗಳವಾರ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಶ್ರೀಜಗದ್ಗುರು ಪಂಚಾಚಾರ್ಯ ಗುರುಪರಂಪರೆಯ ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖಾಮಠವಾಗಿರುವ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠವು ಸುಮಾರು ೧೦ನೇ ಶತಮಾನದ ಪ್ರಾಚೀನ ಮಠವಾಗಿದ್ದು, ಈ ಮಠದ ಶಿವಾಚಾರ್ಯ ಶ್ರೀಗಳವರಿಗೆ ಬಹುದೊಡ್ಡ ಘನತೆ-ಗೌರವ ಇದ್ದದ್ದು ಮಠದಲ್ಲಿ ಲಭ್ಯವಿರುವ ಹಳೆಯ ಕಡತಗಳಿಂದ ವೇದ್ಯವಾಗುತ್ತದೆ ಎಂದರು.
ಸಾಂದರ್ಭಿಕ ವ್ಯವಸ್ಥೆಗೆ ಅನುಗುಣವಾಗಿ ಕೇವಲ ತಮ್ಮ ೫ನೇ ವಯಸ್ಸಿನಲ್ಲಿಯೇ ಸನ್ಯಾಸವನ್ನು ಸ್ವೀಕರಿಸಿರುವ ಶ್ರೀಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಈ ತನಕ ತಮ್ಮ ೯೦ ವಸಂತಗಳ ಸುದೀರ್ಘ ಬದುಕಿನಲ್ಲಿ ಕೇವಲ ಧರ್ಮ ಜಾಗೃತಿ ಮತ್ತು ಇಷ್ಟಲಿಂಗಾನುಷ್ಠಾನಕ್ಕೆ ಮಾತ್ರ ಆದ್ಯತೆ ನೀಡದೇ ವಿದ್ಯಾವಿಕಾಸಕ್ಕೂ ಶ್ರಮಿಸಿ, ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದ್ದಾರೆ ಎಂದೂ ಹುಕ್ಕೇರಿ ಶ್ರೀಗಳು ನುಡಿದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಆಚರಣೆಯನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ನಾಡಿನ ಹಿರಿಯ ಮಠಾಧೀಶರನ್ನು ಗುರುತಿಸಿ ಅವರಿಗೆ ಯುಗಾದಿಯ ಪರ್ವಕಾಲದಲ್ಲಿ ‘ಪಂಚಾಚಾರ್ಯ ಶ್ರೀ’ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ ನಮ್ಮ ಗುರುಗಳಿಗೆ ಈ ಪ್ರಶಸ್ತಿ ಲಭಿಸಿದ್ದು ಬಹಳ ಖುಷಿ ಕೊಟ್ಟಿದೆ ಎಂದರು.
ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಕಳೆದ ಸುಮಾರು ೩೦ ವರ್ಷಗಳಿಂದ ಸಂಪರ್ಕದಲ್ಲಿರುವ ಹುಕ್ಕೇರಿಯ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಹೊಸ ಹೊಸ ವಿಧಾಯಕ ಅಂಶಗಳನ್ನು ಕೇಂದ್ರೀಕರಿಸಿ ಜನಪರವಾದ ಹೊಸತು ಕಾರ್ಯಕ್ರಮಗಳನ್ನು ಆಯೋಜಿಸಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು. ಬಿ.ಸಿ. ಕೊಳ್ಳಿ, ವ್ಹಿ.ಬಿ.ಕೆಂಚನಗೌಡರ, ಟಿ.ಎಂ.ದೇಸಾಯಿ, ಶಿವಾನಂದ ತಡಕೋಡ, ಸಂಗಯ್ಯ ಓದಿಸುಮಠ, ರವಿ ಇಂದೂರ, ಬಸವರಾಜ ಬೆಣ್ಣಿ, ನಾಗಮ್ಮ ಕುಶಲಾಪೂರ, ಚೆನ್ನಮ್ಮ ಮಡಿವಾಳರ, ಪಾರ್ವತೆವ್ವ ಇಟಗಿ, ನಾಗಮ್ಮ ಹಂಚಿನಾಳ, ನಾಗಪ್ಪ ದೊಡವಾಡ, ಸಿದ್ಧಾರೂಢ ತೇಗೂರ, ಮೃತ್ಯುಂಜಯ ಹಿರೇಮಠ, ಈರಯ್ಯ ಹಿರೇಮಠ ಇತರರು ಇದ್ದರು.