ಬೆಳಗಾವಿಯಲ್ಲೇ ಅಂಗನವಾಡಿ ಕೇಂದ್ರದಲ್ಲಿ ಗೋಲ್ ಮಾಲ್ ಮಾತು.
ಹಾಜರಾತಿಯಲ್ಲಿ ಎಲ್ಲಾ ಡಬಲ್ ತ್ರಿಬಲ್ ಹೆಚ್ಚಳ. ಆದರೆ ಹಾಜರಾತಿ ತೀರಾ ಕಡಿಮೆ.
ಹಸಿಬಿಸಿ ಬೇಯಿಸಿದ ಆಹಾರ ಪೂರೈಕೆ. ಆ ಮಕ್ಕಳ ಪಾಲಕರ ಮಾತು ಕೇಳಿದರೆ ಹೌಹಾರುವ ಸ್ಥಿತಿ.
ಸಚಿವರು ಅಧಿಕಾರಿಗಳ ಬದಲು ಮೊದಲು ತಾಯಂದಿರ ಮಾತು ಕೇಳಬೇಕು.
ತಾಯಂದಿರ ವಿಡಿಯೋ ಸಾಕ್ಷಿ ಇಟ್ಟುಕೊಂಡೇ ವರದಿ ಮಾಡಿದ ಇಬೆಳಗಾವಿ.ಡಾಟ್ಕಾಂ
ಇ ಬೆಳಗಾವಿ ವಿಶೇಷ
ಬೆಳಗಾವಿ. ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಖ ಸ್ಥಿತಿಗತಿ ಹೇಗಿವೆ ಎಂದು ತಿಳಿದು ಕೊಳ್ಳುವುದಕ್ಜೆ ಹೆಚ್ಚು ಶ್ರಮ ಪಡಬೇಕಾದ ಅವಶ್ಯಕತೆಯಿಲ್ಲ. ಬದಲಾಗಿ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಪಾಲಕರನ್ನು ವಿಚಾರಿಸಿದರೆ ಸಾಕು. ಅಲ್ಲಿನ ಕರಾಳ ಮುಖ ಒಂದೊಂದಾಗಿ ತೆರೆದುಕೊಳ್ಳುತ್ತದೆ. ಇಲ್ಲಿ ಅಂಗನವಾಡಿ ಕೇಂದ್ರ ಗಳ ಬಗ್ಗೆ ಬರೀ ಅಧಿಕಾರಿಗಳು ಹೇಳಿದ್ದನ್ನೇ ಸತ್ಯ ಎಂದು ತಿಳಿದುಕೊಳ್ಳುವ ಬದಲು ಸಚಿವರು ಆಕಸ್ಮಿಕ ಭೆಟ್ಟಿ ನೀಡಬೇಕಾದ ಅವಶ್ಯಕತೆವಿದೆ. ಇಲ್ಲಿ ಇಡೀ ರಾಜ್ಯದ ಅಂಗನವಾಡಿ ಕೇಂದ್ರ ಗಳ ಕಥೆ ಬಿಡಿ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ತವರು ಜಿಲ್ಲೆ ಮತ್ತು ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಕೂಗಳತೆ ದೂರದಲ್ಲಿರುವ ಅಂಗನವಾಡಿ ಕೇಂದ್ರದ ಪರಿಸ್ಥಿತಿ ಗಮನಿಸಿದರೆ ಇನ್ನುಳಿದವುಗಳು ಹೇಗಿರಬಹುದು ಎನ್ನುವ ಕಲ್ಪನೆ ಬರಬಹುದು. ಸಚಿವರು ಯಾವುದರ ಬಗ್ಗೆಯೂ ಪೂರ್ವಾಗ್ರಹ ಪೀಡಿತರಾಗದೇ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ವರದಿಯನ್ನು ಗಂಭೀರವಾಗಿ ಪರಿಗಣಿಸ ಬೇಕಾದ ಅವಶ್ಯಕತೆ ಇದೆ. ಇಲ್ಲದಿದ್ದರೆ, ಮಕ್ಕಳ ಪಾಲಕರ ಶಾಪ ತಟ್ಟದೇ ಇರದು.
ಬರೋರು 6 ದಾಖಲೆಯಲ್ಲಿ 24 ಬೆಳಗಾವಿಯಲ್ಲಿ ಬಹುತೇಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹಾಜರಾತಿಯಲ್ಲಿ ಮೋಸ ಮಾಡಲಾಗುತ್ತಿದೆ, ಅಂದರೆ ಇಲ್ಲಿ ಮಕ್ಕಳ ಹಾಜರಾತಿಯನ್ನು ಹೆಚ್ಚಿಗೆ ತೋರಿಸಿ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರದಲ್ಲಿ ಗೋಲ್ಮಾಲ್ ಮಾಡುವ ಕೆಲಸ ನಡೆಯುತ್ತಿದೆ ಎನ್ನುವ ಅನುಮಾನ ಬಹುತೇಕರಿಂದ ವ್ಯಕ್ತವಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೂಗಳತೆಯಲ್ಲಿರುವ ಶಿವಾಜಿ ನಗರದ ಅಂಗನವಾಡಿ ಕೇಂದ್ರದಲ್ಲಿ ನಿತ್ಯ ಬರುವ ಮಕ್ಕಳ ಸಂಖ್ಯೆ 6 ರಿಂದ 8.! ಆದರೆ ದಾಖಲಾತಿಯಲ್ಲಿ ಮಕ್ಕಳ ಸಂಖ್ಯೆಯನ್ನು 24 ಎಂದು ತೋರಿಸಲಾಗುತ್ತಿದೆ ಯಂತೆ.
ಇಲ್ಲಿ ಇಲಾಖೆಯ ಅಧಿಕಾರಿಗಳು ಭೆಟ್ಟಿ ನೀಡುವ ಮುನ್ಸೂಚನೆ ಸಿಕ್ಕ ತಕ್ಷಣ ಪಕ್ಕದ ಮನೆಗಳಲ್ಲಿರುವ ಮಕ್ಕಳನ್ನು ತಂದು ಕೇಂದ್ರದಲ್ಲಿ ಕುಳ್ಳಿರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇದೆಲ್ಲ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಅವರು ಅಲ್ಲಿರುವ ಹಾಜರಾತಿಯನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ.
ಸಾಂದರ್ಭಿಕ ಚಿತ್ರ
ಮಕ್ಕಳ ಹೆತ್ತವರಿಗೆ ಅವಮಾನ…? ಆಘಾತಕಾರಿ ಸಂಗತಿ ಎಂದರೆ, ಅಂಗನವಾಡಿ ಕೇಂದ್ರಗಳಿಗೆ ಬರುವ ಬಡ ಮಕ್ಕಳ ಪಾಲಕರಿಗೆ ಅವಮಾನ ಮಾಡುವ ಕೆಲಸವನ್ನು ಕೆಲ ಕಾರ್ಯಕರ್ತರು ಮಾಡುತ್ತಿದ್ದಾರೆ ಎನ್ನುವ ದೂರು ಸರ್ವೇ ಸಾಮಾನ್ಯವಾಗಿದೆ. ಬೆಳಗಾವಿ ಶಿವಾಜಿ ನಗರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಹೋಗುವ ಮಕ್ಕಳ ಬಡಪಾಯಿ ತಾಯಿಗೆ, `ಮನೆಯಲ್ಲಿ ಊಟ ಇಲ್ಲ ಅಂತ ಇಲ್ಲಿಗೆ ತಂದು ಬಿಡುತ್ತಿದ್ದಿರಾ ಎನ್ನುವ ಕುಹಕದ ಮಾತುಗಳನ್ನು ಆಡುವ ಮೂಲಕ ಅವಮಾನಿಸುವ ಕೆಲಸ ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ನೋಂದ ಮಗುವಿನ ತಾಯಿ ನೇರವಾಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲ ಇನ್ನು ಮುಂದೆ ನಿನ್ನ ಮಕ್ಕಳನ್ನು ಅಂಗನವಾಡಿಗೆ ತೆಗೆದುಕೊಳ್ಳುವುದಿಲ್ಲ ಎನ್ನುವ ಬೆದರಿಕೆ ಮಾತುಗಳು ಆ ತಾಯಿಗೆ ಕೇಳಿ ಬರುತ್ತಿವೆ ಎಂದು ಗೊತ್ತಾಗಿದೆ,
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕೂಡ ಅದನ್ನು ನಿಯಂತ್ರಿಸಲು ಸರ್ಕಾರ ಮಾಡಿದ ಪ್ರಯತ್ನಗಳೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತಿದೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರ ಕೊಡುವ ಸೌಲಭ್ಯವನ್ನು ಗಮನಿಸಿದರೆ ಭೇಷ್ ಎನ್ನಬೇಕು. ಆದರೆ ಅದರ ರಿಯಾಲಿಟಿ ಚೆಕ್ ಮಾಡಲು ಹೊರಟರೆ ಬೆಚ್ಚಿ ಬೀಳಿಸುವ ಸಂಗತಿಗಳು ಬೆಳಕಿಗೆ ಬರುತ್ತಿವೆ, ಗಡಿನಾಡಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಜೀವನದ ಜೊತೆ ಇಲಾಖೆ ಚೆಲ್ಲಾಟ ಆಡುತ್ತಿದೆ, ದೂರು ಕೊಡಲು ಹೋದರೆ ಡೋಂಟ್ ಕೇರ್ ಎನ್ನುವ ಲೆಕ್ಕದಲ್ಲಿ ಅಧಿಕಾರಿಗಳಿದ್ದಾರೆ,