Headlines

ಬೆಳಗಾವಿಯ ಸಂಕಟಗಳ ‘ಪ್ಯಾಕೇಜ್’: ಕೆಡಿಪಿ ಸಭೆಗೆ ನಿರೀಕ್ಷೆಯ ತೂಕ


ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೆಡಿಪಿ ಸಭೆ.

ದಿ.13 ರಂದು ಸುವರ್ಣ ವಿಧಸನಸೌಧದಲ್ಲಿ ನಡೆಯಲಿರುವ. ಸಭೆ.

ಪಾಲಿಕೆ ಕಂದಾಯ ಶಾಖೆಯ ತೆರಿಗೆ ವಂಚನೆ ಪ್ರಕರಣ, ಇ ಖಾತಾದಲ್ಲಿ ಏಜೆಂಟರ ಹಾವಳಿ,

ಕುಡಿಯುವ ನೀರಿನ‌ ಹಾಹಾಕಾರ, ಕುಸಿತಗೊಂಡ SSLC ಫಲಿತಾಂಶ..

ಬೆಳಗಾವಿ:
ಗಡಿನಾಡ ಬೆಳಗಾವಿ ಜಿಲ್ಲೆ ಆಡಳಿತದ ದೃಷ್ಟಿಯಿಂದ ಮಹತ್ವಪೂರ್ಣ, ರಾಜಕೀಯವಾಗಿ ಚಟುವಟಿಕೆಗಳ ಕೇಂದ್ರ, ಅಭಿವೃದ್ಧಿಯ ನಾಮದಲ್ಲಿ ಅನೇಕ ಯೋಜನೆಗಳು ರೂಪವಾಗುತ್ತಿರುವ ಪ್ರದೇಶ.

ಆದರೆ ಕೆಳಮಟ್ಟದಲ್ಲಿ ನಡೆಯುತ್ತಿರುವ ವಾಸ್ತವವೊಂದು ಮಾತ್ರ ಸರ್ಕಾರದ ಪ್ರಗತಿ ಧ್ವನಿಗೆ ಪೂರಕವಾಗಿಲ್ಲ. ಕುಡಿಯುವ ನೀರಿನ ಬಿಕ್ಕಟ್ಟು, ನದಿಗಳ ನಾಶ, ಭ್ರಷ್ಟಾಚಾರ ಉರಿತಿರುವ ಸರ್ಕಾರಿ ವ್ಯವಸ್ಥೆಗಳು, ಶಿಕ್ಷಣದಲ್ಲಿ ಕುಸಿತ, ಆರ್ಥಿಕ ವ್ಯತ್ಯಾಸ… ಇವೆಲ್ಲವೂ ಸೇರಿ ಜಿಲ್ಲೆಗೆ ಸಮಸ್ಯೆಗಳ ‘ಪ್ಯಾಕೇಜ್’ ರೂಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ನಾಳೆ (ಮೇ 13) ನಡೆಯಲಿರುವ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ (ಕೆಡಿಪಿ) ಕೆಲ ತೀವ್ರ ನಿರೀಕ್ಷೆಗಳತ್ತ ಕಣ್ಣು ಹರಿಸಿರಿಸುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆ, ಕೇವಲ ಅಂಕಿ ಅಂಶಗಳ ಓದಿನಲ್ಲಿ ಮುಕ್ತಾಯವಾಗದೇ, ಬೆಳೆದ ಸಮಸ್ಯೆಗಳ ಸುಧಾರಣೆಯತ್ತ ನೇರ ಚುರುಕು ತರುವ ವಿಚಾರ ಸಭೆಯಾಗಿ ಬದಲಾಗಬೇಕಾಗಿದೆ.


ಶಿಕ್ಷಣ ವ್ಯವಸ್ಥೆ: ಎಸ್ಎಸ್ಎಲ್ಸಿ ಕುಸಿತ ಸರ್ಕಾರಕ್ಕೆ ಎಚ್ಚರಿಕೆ

ಬೆಳಗಾವಿಯ ವಿದ್ಯಾ ಕ್ಷೇತ್ರಕ್ಕೆ ಈ ಬಾರಿಗೆ ಬಂದಿರುವ ಎಸ್ಎಸ್ಎಲ್ಸಿ ಫಲಿತಾಂಶ ಗಂಭೀರ ಎಚ್ಚರಿಕೆಯ ಘಂಟೆ ಬಾರಿಸಿದೆ. ಶೇಕಡಾವಾರು ಕುಸಿತ ದಾಖಲಾಗಿದ್ದು, ಬಹುತೇಕ ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯದ ಕೊರತೆ ಪ್ರಧಾನ ಕಾರಣ.
ಅಂಗನವಾಡಿಯಿಂದ ಪ್ರೌಢಶಾಲೆವರೆಗೆ, ಮಕ್ಕಳು ನಿರ್ಗತಿಕ ಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕರನ್ನು ಬೇರೆಯ ವಿವಿಧ ಆಡಳಿತ ಕಾರ್ಯಗಳಿಗೆ ಬಳಸುತ್ತಿರುವುದು ವಿದ್ಯಾರ್ಥಿ ಭವಿಷ್ಯದ ಮೇಲೆ ಹೊರೆ ಬೀರಿದೆ. ಕೆಲ ಶಿಕ್ಷಕರ ಮಾತು ಪ್ರಕಾರ, ಶಾಲೆಗಳಲ್ಲಿ ಶಿಕ್ಷಕರಿಲ್ಲದ ಪರಿಸ್ಥಿತಿ ಅನೇಕ ಕಡೆಗಳಲ್ಲಿ ಸಾಮಾನ್ಯವಾಗಿದೆ.


ಬಳ್ಳಾರಿ ನಾಲಾ: ಶಾಶ್ವತ ಪರಿಹಾರ ಎಲ್ಲಿ?

ಬೆಳಗಾವಿ ನಗರ ಹೊರವಲಯದಲ್ಲಿ ಹರಿಯುವ ಬಳ್ಳಾರಿ ನಾಲಾ ಮಳೆಗಾಲದಲ್ಲಿ ಪ್ರತಿವರ್ಷ ಮನೆಗಳಿಗೆ ನುಗ್ಗಿ ಜನರ ನಿದ್ದೆ ಕೆಡಿಸುತ್ತದೆ. ಕಳೆದ ವರ್ಷದಂತೆಯೇ ಈ ಬಾರಿಯೂ ತಾತ್ಕಾಲಿಕ ರೀತಿಯಲ್ಲಿ ಎತ್ತುವ ಕಾರ್ಯ ನಡೆದರೂ, ಯಾವುದೇ ಶಾಶ್ವತ ಯೋಜನೆ ರೂಪಿಸಲ್ಪಟ್ಟಿಲ್ಲ. ನೆಲೆಹರಿಯದ ಯೋಜನೆಗಳು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿವೆ.


ಇ-ಖಾತಾ ಯೋಜನೆ: ಏಜೆಂಟರ ಹಾವಳಿ.

ರಾಜ್ಯ ಸರ್ಕಾರದ ಮಹತ್ವದ ಡಿಜಿಟಲ್ ಯೋಜನೆ ‘ಇ-ಖಾತಾ’ ಜನತೆಗೆ ಪಾರದರ್ಶಕತೆ ತರಬೇಕಾಗಿತ್ತು. ಆದರೆ ಬೆಳಗಾವಿಯಲ್ಲಿ ಈ ಯೋಜನೆ ಏಜೆಂಟರ ಲಾಭದ ಹಾದಿಗೆ ತಿರುಗಿಬಿಟ್ಟಿದೆ.
ವಲಯ ಆಯುಕ್ತರ ಕಚೇರಿಗಳಲ್ಲಿ ಕಾಣಸಿಗುವ ಏಜೆಂಟರ ಅಡ್ಡೆಗಳು ಈಗ ಸಾರ್ವಜನಿಕವಾಗಿ ಗೊತ್ತಾಗಿದ್ದು, ಕೆಲ ನಗರಸೇವಕರೇ ಈ ದಂಧೆಯಲ್ಲಿ ತೊಡಗಿರುವ ಆರೋಪಗಳು ಕೇಳಿಬರುತ್ತಿವೆ. ಇತ್ತೀಚಿನ ಪಾಲಿಕೆ ಸಭೆಯಲ್ಲಿಯೇ ಶಾಸಕ ಅಭಯ ಪಾಟೀಲ ಈ ವಿಚಾರವನ್ನು ಬಹಿರಂಗ ಪಡಿಸಿದರು. ಆಯುಕ್ತೆ ಶುಭಾ ಬಿ. ಅಕ್ಕಸ್ಮಿಕ ಪರಿಶೀಲನೆ ನಡೆಸಿದಾಗ ಹಲವಾರು ಏಜೆಂಟರ ಹೆಸರುಗಳ ಪಟ್ಟಿ ಸಿದ್ಧವಾಯಿತು.


ತೆರಿಗೆ ವಂಚನೆ – ತನಿಖೆಗೆ ತಡ ಏಕೆ?

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೆಲೆಸಿರುವ ಬಹುಕೋಟಿ ತೆರಿಗೆ ವಂಚನೆ ಪ್ರಕರಣ, ಕೆಲವರ ಅನುಮಾನದಂತೆ, ಕೇವಲ ಕಡತದ ಮಟ್ಟದಲ್ಲೇ ಉಳಿಯುವ ಸಂಕೇತ ನೀಡುತ್ತಿದೆ. ಕಾನೂನು ಪ್ರಕಾರ ಆಯುಕ್ತರು 7 ಕೋಟಿ ರೂಪಾಯಿ ತೆರಿಗೆ ಪಾವತಿ ಆದೇಶಿಸಿರುವ ಈ ಪ್ರಕರಣದಲ್ಲಿ, ಮೇಯರ್ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದ್ದರೂ ಅದು ಇನ್ನೂ ನಡೆಯದೇ ಇರುವುದು ಸ್ಥಳೀಯ ರಾಜಕೀಯದ ಅಪಾರದರ್ಶಕತೆಗೆ ಸಾಕ್ಷಿಯಾಗಿದೆ.


ನೀರು ಇಲ್ಲ, ಬಕೆಟ್ ಹಿಡಿದು ಕಾಯುವ ಜನ!

ಅಥಣಿ, ಸವದತ್ತಿ, ರಾಮದುರ್ಗ, ಖಾನಾಪುರ ಸೇರಿದಂತೆ ಹಲವಾರು ತಾಲೂಕುಗಳಲ್ಲಿ ಕುಡಿಯುವ ನೀರಿನ ಗಂಭೀರ ಕೊರತೆ ಉಂಟಾಗಿದೆ. ಕೆಲವು ಗ್ರಾಮಗಳಲ್ಲಿ ಹತ್ತು ಹದಿನೈದು ದಿನಗಳ ಕಾಲ ಸರಬರಾಜು ಅಸ್ತಿತ್ವದಲ್ಲಿಲ್ಲ. ಟ್ಯಾಂಕರ್‌ಗಳ ನೀರೇ ಇಲ್ಲದ ಜೀವದ ಆಸರೆ.
ಇದಕ್ಕೂ ಹೆಚ್ಚಾಗಿ, ಬತ್ತಿ ಹೋಗಿರುವ ಜಮೀನಿನ ನಡುವೆ ಹಾಲು ಉತ್ಪಾದಕರಿಗೆ ಜಾನುವಾರುಗಳಿಗೆ ನೀಡಬೇಕಾದ ಮೇವು ಇಲ್ಲ. ಇದು ಮಿಶ್ರ ಕೃಷಿ ಆಧಾರಿತ ಜಿಲ್ಲೆಯಲ್ಲಿ ಬೇರೊಂದು ಆರ್ಥಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಿದೆ.


ಸಭೆಗೆ ನೋಟವಲ್ಲ, ನಿರ್ಧಾರವಿರಲಿ!

ಜಿಲ್ಲೆಯ ಈ ಎಲ್ಲ ಸಮಸ್ಯೆಗಳು ಸರಕಾರದ ಹಾಗೂ ಆಡಳಿತದ ನೀತಿಗಳಲ್ಲಿ ಎಷ್ಟು ಕಾರ್ಯಪಟುತೆ ಇಲ್ಲ ಎಂಬುದನ್ನು ಪ್ರತಿಬಿಂಬಿಸುತ್ತವೆ. ನಾಳೆ ನಡೆಯಲಿರುವ ಕೆಡಿಪಿ ಸಭೆ, ಕೇವಲ ವರದಿಗಳ ಓದುವ ವೇದಿಕೆಯಾಗದೇ, ಸಾರ್ವಜನಿಕ ಸಮಸ್ಯೆಗಳ ನಿವಾರಣೆಗೆ ತೀವ್ರ ಹಾಗೂ ಶಾಶ್ವತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯಿದೆ.

ಬೆಳಗಾವಿಯ ಜನತೆ ಈ ಸಭೆಯತ್ತ ಕಣ್ಣಿಟ್ಟಿದ್ದಾರೆ. ಅವರಿಗೆ ಪ್ರಶ್ನೆಗಳೂ ಸಾಕಾಗಿವೆ. ಈಗ ಉತ್ತರಗಳು ಬೇಕು.
ಇದು ಒಂದಷ್ಟು ಕಡತ ಓದಿ ಕೈ ಚಲಿಸುವ ಸಭೆ ಮಾತ್ರವಾಗಬಾರದು — ಇದು ಬೆಳಗಾವಿ ಸಮಸ್ಯೆಗಳ ಆಳಕ್ಕೆ ಇಳಿದು ಬಗೆಹರಿಸುವ ಸಭೆಯಾಗಬೇಕು.

Leave a Reply

Your email address will not be published. Required fields are marked *

error: Content is protected !!