ಹುಬ್ಬಳ್ಳಿ.
ನಾಡು ನುಡಿ ಜಲ ವಿಷಯ ಬಂದಾಗ ಹೋರಾಟದ ಮುಂಚೂಣಿಯಲ್ಲಿದ್ದವರು ಎಂದರೆ ಉತ್ತರ ಕರ್ನಾಟಕದ ಕಲಿಗಳು.
ಒಮ್ಮೆ ಹೋರಾಟಕ್ಕೆ ಇಳಿದರೆ ಸಾಕು ಅದರಿಂದ ಹಿಂದೆ ಸರಿದ ಮಾತೇ ಇಲ್ಲ. ಈಗ ಅದೇ ಉತ್ತರ ಕರ್ನಾಟಕದ ರೈತರು ಕಾವೇರಿ ಪರ ಹೋರಾಟಕ್ಕೆ ಧುಮುಕುವ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಬೆಂಗಳೂರು, ಮೈಸೂರು ಭಾಗದವರು ಎಷ್ಟರ ಮಟ್ಟಿಗೆ ಸ್ಪಂದನೆ ಮಾಡಿದ್ದಾರೆ ಎನ್ನುವುದು ಬೇರೆ ಮಾತು..ಆದರೆ ಕಾವೇರಿ ಪರ ಹೋರಾಟಕ್ಕೆ ನಾವ್ ರೆಡಿ ಎಂದಿದ್ದು ಈ ಭಾಗದ ರೈತರ ಮನಸ್ಸು ಎಂತಹುದನ್ನು ತಿಳಿಯಬಹುದು.

ರತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎನ್ನುವ ಆದೇಶ ರಾಜ್ಯದ ರೈತ ಸಮುದಾಯವನ್ನು ಬಡಿದೆಬ್ಬಿಸಿದೆ.

. ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂದು ಧಾರವಾಡದ ಮಹದಾಯಿ ಹೋರಾಟಗಾರರು ಆಗ್ರಹಿಸಿದ್ದಾರೆ.

ಮಹದಾಯಿ ನೀರಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ಉತ್ತರ ಕರ್ನಾಟಕ ಭಾಗದ ರೈತರು ಇದೀಗ ಕಾವೇರಿ ನೀರಿಗಾಗಿಯೂ ಅಲ್ಲಿನ ರೈತರಿಗೆ ಬೆಂಬಲ ಸೂಚಿಸುವುದರೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಮಹದಾಯಿ ಮತ್ತು ಕಾವೇರಿ ವಿಚಾರದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ತಮ್ಮ ರಾಜಕೀಯ ಲೆಕ್ಕಾಚಾರದ ಪ್ರಕಾರ ಕೆಲವೊಂದಿಷ್ಟು ತಪ್ಪು ಮಾಹಿತಿಗಳನ್ನು ಕೊಟ್ಟಿದ್ದಾರೆ. ಕಾವೇರಿ ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ಕೊಟ್ಟು ಸುಪ್ರೀಂ ಎದುರು ಕೈಕಟ್ಟಿಸಿಕೊಳ್ಳುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದರಿಂದ ಕಾವೇರಿ ಅಚ್ಚುಕಟ್ಟಿನ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ಕಿಡಿಕಾರಿದ್ದಾರೆ.


ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ಕೊಟ್ಟಿದೆ. ಆದರೆ, ರಾಜ್ಯದಲ್ಲಿರುವ ನೀರಿನ ಬರದ ಕುರಿತು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು. ಕಾನೂನು ಹೋರಾಟದಲ್ಲಿ ನಮ್ಮ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಮ್ಮ ರಾಜ್ಯದಲ್ಲೇ ಬರಗಾಲ ಎದುರಾಗಿ ನೀರಿಗಾಗಿ ಪರಿತಪಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಖಂಡನೀಯ.

ಕೂಡಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಮ್ಮ ರಾಜ್ಯದಲ್ಲಿರುವ ಬರಗಾಲದ ಕುರಿತು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.
