ಎನ್‍ಇಪಿಯಿಂದ ಬಡ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಸಾಧ್ಯ


ಬೆಳಗಾವಿ:

ಗ್ರಾಮೀಣ ಭಾಗದ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಿಶ್ವಮಾನ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಸಂಕಲ್ಪ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ ಎಂದು .ಉನ್ನತ ಶಿಕ್ಷಣದ ಮಾಜಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು
ನಗರದ ಲಿಂಗರಾಜ ಮಹಾವಿದ್ಯಾಲಯದ ಸಭಾಭವನದಲ್ಲಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ನೇತೃತ್ವದಲ್ಲಿ ಮಂಗಳವಾರ ಜರುಗಿದ ಎನ್‍ಇಪಿ 2020 ಮತ್ತು ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು


ಎನ್‍ಇಪಿಯಿಂದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದು ಎಂದು ಮಾತ್ರ ಸಾಧ್ಯ ಎಂದರು
ಖಾಸಗಿ ಶಿಕ್ಷಣ ಸಂಸ್ಥೆಗಳು ಸಹಜವಾಗಿ ಕೇಂದ್ರದ ಸಿಬಿಎಸ್‍ಸಿ ಪಠ್ಯಕ್ರಮ ಅಳವಡಿಸಿಕೊಂಡು ಎನ್‍ಇಪಿ ಶಿಕ್ಷಣ ಒದಗಿಸುತ್ತದೆ. ಆದರೆ ಸಂಕುಚಿತ ರಾಜಕೀಯ ಮನಸ್ಥಿತಿ ಹೊಂದಿದ ರಾಜ್ಯದ ಸರ್ಕಾರದ ನಾಯಕರಿಂದ ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವ ಧೋರಣೆ ಹೊಂದಿರುವುದು ಖಂಡನೀಯ. ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎನ್‍ಇಪಿ ರದ್ದು ಮಾಡುತ್ತಿರುವ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಔದ್ಯೋಗಿಕ, ಕೃಷಿ, ಶಿಕ್ಷಣ, ಗುಡಿ ಕೈಗಾರಿಕೆ, ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಕ್ರೀಡೆ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಮೂಲಾಗ್ರ ಶಿಕ್ಷಣ ನೀಡುವ ಯೋಜನೆ ಎನ್‍ಇಪಿ-2020 ಹೊಂದಿದೆ.

ಎನ್‍ಇಪಿಯಲ್ಲಿ ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗೆ ಅವಕಾಶವಿದೆ ಮತ್ತು ವಿದ್ಯಾರ್ಥಿಗಳ ಕೇಂದ್ರಿತವಾಗಿದೆ. ಆದ್ದರಿಂದ ಶಿಕ್ಷಣ ಸಂಸ್ಥೆ ಮಾಲೀಕರು, ಪಾಲಕರು ಮತ್ತು ಶಿಕ್ಷಣ ತಜ್ಞರು ಎನ್‍ಇಪಿ ಸಾಧಕಗಳನ್ನು ಅರಿತು ಅದರ ರದ್ದುಗೊಳಿಸುವ ಕ್ರಮದ ವಿರುದ್ಧ ಹೋರಾಡಲು ಮುಂದಾಗಬೇಕು ಎಂದು ಕರೆ ನೀಡಿದರು.


ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ಕೆಎಲ್‍ಇ ನಿರ್ದೇಶಕರು ಮಹಾಂತೇಶ ಕವಟಗಿಮಠ ಮಾತನಾಡಿ, ಹಿಂದುಳಿದ ಉತ್ತರ ಕರ್ನಾಟಕದ ಭಾಗದಲ್ಲಿ ಅನೇಕ ಮಠಗಳು ಮತ್ತು ಹಲವಾರು ಸಂಸ್ಥೆಗಳು ಶಿಕ್ಷಣ ದಾಸೋಹ ನೀಡಿದ ಫಲವಾಗಿ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ಉಂಟಾಗಿದೆ. ಈ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಎನ್‍ಇಪಿ-2020 ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ. ಅದರ ಫಲವಾಗಿ ಉತ್ತರ ಕರ್ನಾಟಕದ ಬಹುತೇಕ ಅನುದಾನಿತ ಶಾಲೆ ಮತ್ತು ಕಾಲೇಜುಗಳಿಗೆ ದೊಡ್ಡ ವರದಾನವಾದ ಎನ್‍ಇಪಿಯನ್ನು ರದ್ದುಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ ರಾಜ್ಯದ ಶಿಕ್ಷಣದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಹೇಳಿದರು.


ಖ್ಯಾತ ಪತ್ರಕರ್ತ ಮತ್ತು ನಿವೃತ್ತ ಪ್ರಾಧ್ಯಾಪಕ ರವೀಂದ್ರ ರೇಷ್ಮೆ, ಭಾರತೀಯ ಶಿಕ್ಷಣ ಮಂಡಲನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಮೃಣಾಲ ಜೋಶಿ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಮಾತನಾಡಿದರು. ಬಳ್ಳಾರಿಯ ಕೃಷ್ಣದೇವರಾಯ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಸಿದ್ದು ಅಲಗೂರು ಅಧ್ಯಕ್ಷತೆ ವಹಿಸಿದ್ದರು.


ಡಾ.ಕೆ.ಆರ್. ಅಲಗವಾಡಿ, ಶಾಸಕರಾದ ಧುರ್ಯೋಧನ ಐಹೊಳೆ, ಹನುಮಂತ ನಿರಾಣಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಲಾ ಅಂಗಡಿ ಸೇರಿದಂತೆ ಮತ್ತಿತರರು ಇದ್ದರು.
ಪರಮೇಶ್ವರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಎಂ. ಚನ್ನಪ್ಪಗೊಳ ನಿರೂಪಿಸಿದರು. ಆನಂದ ಹೊಸುರು ವಂದಿಸಿದರು.

.

Leave a Reply

Your email address will not be published. Required fields are marked *

error: Content is protected !!