3 ದಿನ ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ:
ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಮುಂಗಾರು ಮಳೆ ತೀವ್ರ ಕೊರತೆಯಿಂದ ಜಿಲ್ಲೆಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದಕಾರಣ ಮಳೆಗಾಗಿ ನಾಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮೂರು ದಿನ ಬೆಳಗಾಂ ಶುಗರ್ಸ್‌ನಿಂದ ಮೋಡ ಬಿತ್ತನೆ ಮಾಡಲಾಗುತ್ತಿದ್ದು, ರಾಜ್ಯ, ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಡ ಬಿತ್ತನೆಗೆ ಬಳಸುವ ವಿಮಾನಗಳು ಸಾಂಬ್ರಾ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಇನ್ನು, ಮೋಡಗಳ ಲಭ್ಯತೆಯ ಅನುಗುಣವಾಗಿ ಅಲ್ಲಲ್ಲಿ ಮೋಡ ಬಿತ್ತನೆ ಮಾಡಲಾಗುವುದು. ಈ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮೋಡಗಳು ಸಿಗಲಿವೆ ಎನ್ನುವ ಮಾಹಿತಿಯಿದೆ. ಮೋಡ ಬಿತ್ತನೆ ಕಾರ್ಯ ಬೆಳಗಾವಿ ಜಿಲ್ಲೆಗೆ ಅಷ್ಟೇ ಸೀಮಿತವಾಗಿದ್ದು, ಮೂರು ದಿನಕ್ಕಾಗುವ ಖರ್ಚು ವೆಚ್ಚವನ್ನು ಬೆಳಗಾಂ ಶುಗರ್ಸ್‌ನಿಂದ ಭರಿಸಲಾಗುವುದು ಎಂದು ಹೇಳಿದರು.
ತಮಿಳುನಾಡಿಗೆ ಎಲ್ಲಾ ಸರ್ಕಾರಗಳು ನೀರು ಬಿಟ್ಟಿವೆ:
ಕಾವೇರಿ ನೀರು ತಮಿಳುನಾಡಿಗೆ ಎಲ್ಲಾ ಸರ್ಕಾರಗಳು ಬಿಟ್ಟಿವೆ. ನಾವು ತಮಿಳುನಾಡಿನ ಜತೆ ಹೊಂದಾಣಿಕೆ ಮಾಡಿಲ್ಲ, ಈ ನಾಡು, ನುಡಿ, ಜಲವನ್ನು ಕಾಪಾಡಲು ಬದ್ದರಾಗಿದ್ದೇವೆ. ಆದರೆ ನ್ಯಾಯಾಲಯದ ಆದೇಶ ಪಾಲಿಸಲೇಬೇಕು. ಯಾವ ಯಾವ ಸರ್ಕಾರಗಳು ಎಷ್ಟು ನೀರು ಬಿಟ್ಟಿದ್ದಾರೆ. ಬೊಮ್ಮಾಯಿಯವರು ಸಿಎಂ ಇದ್ದಾಗ ಎಷ್ಟು ನೀರು ಬಿಟ್ಟಿದ್ದಾರೆ ಎಂಬುವುದನ್ನು ನಿವೇ ಬೆಳಕು ಚೆಲ್ಲಿ ಎಂದು ಮಾಧ್ಯಮದವರಿಗೆ ತಿಳಿಸಿದರು.
ಕಳೆದ ಬಾರಿ ಮಳೆ ಅಭಾವ ಇರಲ್ಲಿಲ್ಲ. ಸಮಸ್ಯೆವೂ ಇರಲ್ಲಿಲ್ಲ. ಸಮಸ್ಯೆ ಬರುವುದು ನೀರು ಇಲ್ಲದಾಗ ಮಾತ್ರ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳು ಇದ್ದಾಗ ಕಾವೇರಿ ನೀರನ್ನು ತಮಿಳುನಾಡಿಗೆ ಎಷ್ಟು ಹರಿಸಿದ್ದಾರೆಂಬ ಮಾಹಿತಿ ನೋಡಿ, ತಮಿಳುನಾಡಿನವರು ಮೊದಲಿನಿಂದಲೂ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ನೀರು ಬಿಡಲು ಒತ್ತಾಯಸುತ್ತಾರೆ. ಆದರೆ ರಾಜ್ಯದ 25 ಬಿಜೆಪಿ ಸಂಸದರು ಕಾವೇರಿ ಬಗ್ಗೆ ಧ್ವನಿ ಎತ್ತಲ್ಲ ಎಂದು ದೂರಿದರು.
ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ನೀರು ಬಿಡಬೇಕಾದ ಪ್ರಮಾಣದ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಆದರೆ ಸಂಕಷ್ಟದ ಸಮಯದಲ್ಲಿ ಆ ರಾಜ್ಯಕ್ಕೆ ನೀರು ಬಿಡುವ ಪ್ರಮಾಣ ತಿಳಿಸುವ ಸಂಕಷ್ಟ ಸೂತ್ರ ಇನ್ನೂ ನಿರ್ಧಾರವಾಗಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಸೌಹಾರ್ದ ಇತ್ಯರ್ಥಕ್ಕೆ ಬರುವುದೇ ಉತ್ತಮ. ಆದ್ದರಿಂದ ಕಾವೇರಿ ವಿವಾದದ ಇತ್ಯರ್ಥಕ್ಕೆ ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿಗೆ ನಷ್ಟವಿಲ್ಲ:
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಯಾವುದೇ ನಷ್ಟವಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಜೆಡಿಎಸ್ ಜತೆ ಕೈ ಜೋಡಿಸಿದ್ದರಿಂದ ನಮಗೆ ನಷ್ಟವಾಯಿತು. ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಯಿಂದ ಕಾಂಗ್ರೆಸ್ ಪೂರ್ಣ ಬಹುಮತದ ಸರ್ಕಾರ ಬಂದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಲಾಭ, ನಷ್ಟವಾಗುತ್ತೆ ಕಾಯ್ದು ನೋಡೋಣ ಎಂದರು.
ವಾರಕ್ಕೊಮ್ಮೆ ಜನ ಸಂಪರ್ಕ ಸಭೆ:
ಈಗಾಗಲೇ ನಾವು ವಾರಕ್ಕೊಮ್ಮೆ ಜನ ಸಂಪರ್ಕ ಸಭೆ ಮಾಡಿದ್ದು, ಇಲಾಖೆವಾರು ಸಭೆ ಮಾಡಿದ್ದೇವೆ, ಮೊನ್ನೆ ನಡೆದ ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿಗಳು 760 ಅರ್ಜಿಗಳನ್ನು ಸ್ವೀಕಾರ ಮಾಡಿದ್ದಾರೆ. ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ಮಾಡಲಾಗುವುದು ಎಂದು ತಿಳಿಸಿದರು.
:ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯ ಕಿರಣ ಸಾಧುನ್ನವರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು.