ಇದು ಲೂಟಿ ಸರ್ಕಾರ

ಬೆಳಗಾವಿ : ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಇದು ಲೂಟಿ ಸರ್ಕಾರ, 80 ಪರ್ಸೆಂಟ್ ಕಮಿಷನ್ ಸರ್ಕಾರ, ಎಟಿಎಂ ಸರ್ಕಾರ ಎಂದೆಲ್ಲ ಆರೋಪಿಸಿ ತಮ್ಮ ಸಿಟ್ಟನ್ನು ಹೊರ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದೆ ಮಂಗಲಾ ಅಂಗಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದಾರು ತಿಂಗಳಾಯ್ತು. ಆದರೆ, ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅನುದಾನ ನೀಡುತ್ತಿಲ್ಲ ಎಂದು ಅವರದೇ ಪಕ್ಷದ ಶಾಸಕರು ಅಸಮಾಧಾನಗೊಂಡಿದ್ದಾರೆ.

ಬರಗಾಲ, ವಿದ್ಯುತ್ ಕೊರತೆಯಿಂದ ರೈತರು ಆತ್ಮಹತ್ಯೆಯ ಹಾದಿ‌ ಹಿಡಿಯುತ್ತಿದ್ದಾರೆ. ರೈತರಿಗೆ 7 ಗಂಟೆ ನಿರಂತರ ವಿದ್ಯುತ್ ನೀಡಬೇಕು ಎಂದು ಇದೇ ವೇಳೆ ಪ್ರತಿಭಟನಾಕಾರರು ಆಗ್ರಹಿಸಿದರು. ಮುಂದುವರಿದು ಐಟಿ ದಾಳಿಯಲ್ಲಿ ಸಿಕ್ಕ ಕೋಟಿ ಹಣದ ಬಗ್ಗೆ ಪ್ರತಿಕ್ರಿಯಿಸಿ ಇದು ಪಂಚರಾಜ್ಯಗಳ ಚುನಾವಣೆಗೆ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗ್ಯಾರಂಟಿಗಳು ವಿಫಲ ಎಂದು ಮಾಜಿ ಶಾಸಕ: ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಭಿವೃದ್ದಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಎಲ್ಲ ಶಾಸಕರೂ ಅನುದಾನ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ‌. ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಮನೆಯಲ್ಲಿ ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಸಿಗುತ್ತೆ. ಇದೆಲ್ಲವೂ ಕಾಂಗ್ರೆಸ್ ದುಡ್ಡು, ಇದೇ ದುಡ್ಡಿನ ಮೇಲೆ ಪಂಚ ರಾಜ್ಯಗಳ ಚುನಾವಣೆ ಮಾಡಲಿದ್ದಾರೆ.‌ ರಾಜ್ಯದಿಂದ ಹಣ ಸಂಗ್ರಹಿಸಿ ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ಕಳಿಸುತ್ತಿದ್ದಾರೆ. ಅಲ್ಲಿಂದ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹಣ ಹೋಗಲಿದೆ. ಇನ್ನು ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿವೆ. ಐದನೇ ಗ್ಯಾರಂಟಿ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಇನ್ನು ಪ್ರತಿಭಟನೆಯಲ್ಲಿ ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿಗಳಾದ ಮುರುಘೇಂದ್ರಗೌಡ ಪಾಟೀಲ, ದಾದಾಗೌಡ ಬಿರಾದಾರ, ನಗರಸೇವಕರಾದ ವೀಣಾ ವಿಜಾಪುರೆ, ವಾಣಿ ಜೋಶಿ, ಗಿರೀಶ ಧೋಂಗಡಿ, ಜಯತೀರ್ಥ ಸವದತ್ತಿ, ಬಿಜೆಪಿ ಮುಖಂಡರಾದ ಎಫ್.ಎಸ್.ಸಿದ್ದನಗೌಡರ, ಲೀನಾ ಟೋಪಣ್ಣವರ, ವಿಜಯಾ ಹಿರೇಮಠ ಸೇರಿ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!