ಬೆಳಗಾವಿ ಮಹಾನಗರ ಪಾಲಿಕೆ. ಅಧೀನ ಅಧಿಕಾರಿಗಳಲ್ಲಿ ಹಿಡಿತವೇ ಇಲ್ಲ. ಕ್ರಮಕ್ಕೆ ಹಿಂಜರಿಕೆ ಏಕೆ?.
ಪಾಲಿಕೆ ಆರ್ಥಿಕ ಕುಸಿತಕ್ಕೆ ಯಾರು ಹೊಣೆ?. ದೊಡ್ಡವರ ರಾಜಕಾರಣಕ್ಕೆ ಸಣ್ಣವರು ಅಪ್ಪಚ್ಚಿ.
ಆಯುಕ್ತರ ಕೋರ್ಟ್ ಗೆ ಗೌರವ ಬೇಡವೇ,? ಕೌನ್ಸಿಲ್ ಠರಾವಿನ ಪಾಲನೆ ಯಾರ ಹೊಣೆ?.
ಅಕ್ರಮ ಕಟ್ಟಡದಲ್ಲಿಯೇ ವಾಣಿಜ್ಯಮಳಿಗೆ ತೆರೆಯಲು ಅನುಮತಿ ಕೊಟ್ಟವರು ಯಾರು?
ಬೆಳಗಾವಿ..
ಗಂಡ ಹೆಂಡಿರ ಜಗಳದಲ್ಲಿ ಕೂಸು ಘಾಸಿ ಎನ್ನುವ ರೂಢಿ ಮಾತು ಕೇಳಿರಬಹುದು. ಅದು ಈಗ ಬೆಳಗಾವಿ ಮಹಾನಗರ ಪಾಲಿಕೆಗೆ ಸರಿ ಹೊಂದುತ್ತದೆ.
ಬೆಳಗಾವಿ ಪಾಲಿಕೆಯಲ್ಲಿ ಈಗ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ನಡುವೆ ದೊಡ್ಡ ಮಟ್ಟದ ರಾಜಕೀಯ ಜಂಗೀ ಕುಸ್ತಿ ನಡೆದಿದೆ.
ಅದು ಈಗ ಆರಂಭವಾದ ಕುಸ್ತಿ ಅಲ್ಲ. ಈ ಕುಸ್ತಿಯಲ್ಲಿ ಚಿತ್ ಇಲ್ಲ ಪಟ್ ಸಹ ಆಗಲ್ಲ. ಒಂಥರಾ ತೋಳ ಬಂತು ತೋಳ ಎನ್ನುವ ಕಥೆಯಂತಾಗಿದೆ.
ಸತೀಶ್ ಜಾರಕಿಹೊಳಿ ಜಿಲ್ಲಾ ಮಂತ್ರಿಯಾದ ನಂತರ ಪಾಲಿಕೆಯಲ್ಲಿ ಪ್ರಥಮವಾಗಿ ಸಭೆ ನಡೆಸಿದಾಗ ಅಲ್ಲಿದ್ದ ಕೆಲವೇ ಕೆಲವರು ಸ್ಮಾರ್ಟ್ ಸಿಟಿ, ತಿನಿಸು ಕಟ್ಟಾ ಸೇರಿದಂತೆ ಇನ್ನಿತರ ಕಾಮಗಾರಿಗಳ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ಅದಕ್ಕೆ ವಿಚಾರಣೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.
ಅದೇ ಸಭೆಯಲ್ಲಿ ಹಾಜರಿದ್ದ ಶಾಸಕ ಅಭಯ ಪಾಟೀಲರು, ಸರ್ಕಾರ ನಮ್ಮದಿಲ್ಲ. ಯಾವುದೇ ತನಿಖೆ ಮಾಡಿಸಬಹುದು. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಸವಾಲಿನ ಧಾಟಿಯಲ್ಲಿ ಹೇಳಿದ್ದರು.
ಇಷ್ಟೆಲ್ಲ ಹೇಳಿದ ಮೇಲೆ ಸಚಿವರು ವಿಚಾರಣೆಗೆ ಆದೇಶ ಮಾಬೇಕಿತ್ತು. ತಪ್ಪು ಮಾಡಿದ ಅಧಿಕಾರಿಗಳ ನ್ನು ಮನೆಗಟ್ಟುವ ಕೆಲಸ ಮಾಡಬೇಕಿತ್ತು. ಆಗ ಸಚಿವರು ನುಡಿದಂತೆ ನಡೆಯುತ್ತಾರೆ ಎನ್ನಬಹುದಿತ್ತು.
ಆದರೆ ಅದ್ಯಾವುದನ್ನೂ ಮಾಡದ ಸಚಿವರು ಮತ್ತದೇ ತನಿಖೆ ಹೇಳಿಕೆ ನೀಡಿದ್ದು ಈಗ ಅಧಿಕಾರಿಗಳ ವಲಯದಲ್ಲಿ ಅಪಹಾಸ್ಯಕ್ಕೆ ಕಾರಣವಾಗಿದೆ
ಸಚಿವರು ತನಿಖೆ ಅಂತ ಹೇಳಿ ಹಲವು ತಿಂಗಳು ಕಳೆದರೂ ಸಹ ಪ್ರಕ್ರಿಯೆ ಸಹ ನಡೆದೇ ಇಲ್ಲ. ಬರೀ ಮಾಧ್ಯಮ ಹೇಳಿಕೆಗೆ ಸಿಮೀತವಾಗಿದೆ.
ಈಗ ಕಳೆದ ಎರಡು ದಿನದ ಹಿಂದೆ ಸತೀಶ್ ಜಾರಕಿಹೊಳಿ ಮತ್ತದೇ ಆರೋಪ ಮಾಡಿ ತನಿಖೆ ಅಂದಿದ್ದಾರೆ. ಅಂದರೆ ಸಚಿವರೇ ಇಲ್ಲಿ ತನಿಖೆ ತನಿಖೆ ಎನ್ನುತ್ತ ಅಧಿಕಾರಿಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸ ನಡೆಸಿದ್ದಾರೆ ಎನ್ನುವ ಮಾತು ಪಾಲಿಕೆ ವಲಯದಲ್ಲಿ ಕೇಳಿ ಬರುತ್ತಿದೆ.
ಸಧ್ಯ ಹೇಗಾಗಿದೆ ಅಂದರೆ ಈ ರಾಜಕೀಯ ಕುಸ್ತಿಯಲ್ಲಿ ಕೆಲ ಅಧಿಕಾರಿಗಳು ತಮ್ಮಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆಸಿದ್ದಾರೆ ಎನ್ನುವುದು ಸ್ಪಷ್ಟ.
ರಾಜಕಾರಣಿಗಳ ಜಗಳ ಏನೇ ಇರಲಿ. ಅಧಿಕಾರಿಗಳು ಮಾತ್ರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಇಲ್ಲದಿದ್ದರೆ ಸಂಕಷ್ಟ ಎದುರಿಸೊರು ಅವರೇ.!
ಸ್ಮಾರ್ಟ ಸಿಟಿಗಾಗಿ ಶಾಸಕರು ಅನುದಾನ ತರಬಹುದು. ಇಂತಹುದೇ ಕೆಲಸ ಮಾಡಿ ಎಂದೂ ಹೇಳಬಹುದು..ಆ ಕೆಲಸ ಮಾಡಿಸುವ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಯಾವ ರೀತಿ ಆಗುತ್ತದೆಯೋ ಹಾಗೆ ಮಾಡಬೇಕು. ಹೀಗಾಗಿ ಈಗ ಏನೇ ಆದರೂ ಸಿಕ್ಕಿ ಬೀಳೊದು ಅಧಿಕಾರಿಗಳೇ ಹೊರತು ಜನಪ್ರತಿನಿಧಿಗಳಲ್ಲ.!
ಇದಕ್ಕೊಂದು ಸಿಂಪಲ್ ಉದಾಹರಣೆ ಕೊಡಬೇಕು ಅಂದರೆ, ಬೆಳಗಾವಿ ಪಾಲಿಕೆಯಲ್ಲಿ 138 ಪೌರ ಕಾರ್ಮಿಕರ ನೇಮಕ ಪ್ರಕರಣದಲ್ಲಿ ಯಾವ ರೀತಿ ನಿಯಮವನ್ನು ಗಾಳಿಗೆ ತೂರಲಾಗಿದೆ ಎನ್ನುವುದು ಜಗಜ್ಜಾಹೀರವಾಗಿದೆ.
ಅದರ ಬಗ್ಗೆ ಖುದ್ದು ಶಾಸಕ ಅಭಯ ಪಾಟೀಲ ಅಷ್ಟೇ ಅಲ್ಲ ಆಡಳಿತ ಪಕ್ಷದ ಒಬ್ಬಿಬ್ಬರನ್ನು ಬಿಟ್ಟು ಇನ್ನುಳಿದ ನಗರಸೇವಕರು ತನಿಖೆ ಮಾಡಿಸಿ ಅಂದಿದ್ದರು.
ಇಲ್ಲಿ ಈ ಪೌರ ಕಾರ್ಮಿಕರ ಅಕ್ರಮ ನೇಮಕದಲ್ಲಿ ಸಚಿವದ್ವಯರು, ಕಾಂಗ್ರೆಸ್ ಶಾಸಕ ರಾಜು ಸೇಠ ಅವರೇ ಸುಮಾರು 43 ಕ್ಕೂ ಹೆಸರುಗಳನ್ನು ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು. ಈ ಆರೋಪದ ರೂವಾರಿ ಹೊತ್ತವರು ಅದೇ ಮಾತನ್ನು ಹೇಳುತ್ತ ಬೀಸೋ ದೊಣ್ಣೆಯಿದ ತಪ್ಪಿಸಿಕೊಳ್ಳುವ ಕೆಲಸ ಮಾಡಿದರು.
ಈಗ ಮತ್ತೇ ಆ ಪಿಕೆ ನೇಮಕ ವಿವಾದ ಮುನ್ನೆಲೆಗೆ ಬಂದಿದೆ. ಸಚಿವರು ಅದರ ಬಗ್ಗೆ ತನಿಖೆ ಮಾಡಿ ಅಂತ ಜಿಲ್ಲಾಧಿಕಾರಿ ಮೂಲಕ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಕೌನ್ಸಿಲ್ ಸಭೆಯಲ್ಲಿಯೇ ಈ ಪಿಕೆ ನೇಮಕದ ಬಗ್ಗೆ ತನಿಖೆ ಮಾಡಿಸುವ ತೀರ್ಮಾನ ಆಗಿತ್ತು. ಅದರ ಪ್ರಕ್ರಿಯೇ ಏಕೆ ಆಗಿಲ್ಲ ಎನ್ನುವ ಪ್ರಶ್ನೆ ಬಹುತೇಕರದ್ದು.!
ಅಚ್ಚರಿಯ ಸಂಗತಿ ಎಂದರೆ, ಈ ಪ್ರಕರಣ ಹೊರಬಂದಾಗ ಆಡಳಿತ ಪಕ್ಷದ ‘ಭಯಂಕರ ಶ್ಯಾಣ್ಯಾ ನಗರ ಸೇವಕರೊಬ್ಬರು ಸಚಿವ ಸತೀಶ ಜಾರಕಿಹೊಳಿ ಭೆಟ್ಟಿಗೆ ಹೋಗಿದ್ದರು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಆದರೆ ಸತೀಶ ಜಾರಕಿಹೊಳಿ ಅವರನ್ನು ಹತ್ತಿರಕ್ಕೂ ಬಿಟ್ಟು ಕೊಡಲಿಲ್ಲ ಎಂದು ಗೊತ್ತಾಗಿದೆ.
ಕೌನ್ಸಿಲ್ ತೀರ್ಮಾನಕ್ಕೆ ಬೆಲೆ ಇಲ್ಲವೇ?
ಹಾಗೆ ನೋಡಿದರೆ ಕೌನ್ಸಿಲ್ ತೆಗೆದುಕೊಂಡ ನಿರ್ಣಯವನ್ನು ಪಾಲನೆ ಮಾಡುವುದು ಅಧಿಕಾರಿಗಳ ಪ್ರಥಮ ಆಧ್ಯತೆ. ಆದರೆ ಬೆಳಗಾವಿ ಪಾಲಿಕೆಯಲ್ಲಿ ಅಂತಹ ಕೆಲಸಗಳು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಆಯುಕ್ತರು ಕೌನ್ಸಿಲ್ ಠರಾವ್ ಪಾಲನೆ ವಿಷಯದಲ್ಲಿ ಖಡಕ್ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಆಯುಕ್ತರ ಕೋರ್ಟ್ ಗೆ ಅವಮಾನ?
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮುಖ್ಯವಾಗಿ ಆರೋಗ್ಯ ಶಾಖೆಗೆ ಶಸ್ತ್ರಚಿಕಿತ್ಸೆ ಅವಶ್ಯಕತೆಯಿದೆ.
ಸಧ್ಯ ಏನಾಗಿದೆ ಅಂದರೆ , ಅಕ್ರಮ ಕಟ್ಟಡಗಳ ಬಗ್ಗೆ ಪಾಲಿಕೆ ಆಯುಕ್ತರ ಕೋರ್ಟ್ ನಲ್ಲಿ ವಿಚಾರಣೆ ಅಂತಿಮ ಹಂತದಲ್ಲಿರುವಾಗ ಅದೇ ಕಟ್ಟಡದಲ್ಲಿ ವಾಣಿಜ್ಯ ಮಳಿಗೆ ತೆರೆಯಲು ಅನುಮತಿ ನೀಡಿದ್ದು ಈಗ ಸಂಶಯಕ್ಕೆ ಕಾರಣವಾಗಿದೆ. ಇದು ಆಯುಕ್ತರ ಕೋರ್ಟಗೆ ಮಾಡಿದ ಅವಮಾನ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಇಂತಹ ಪ್ರಕರಣಗಳನ್ನು ಆಯುಕ್ತರು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಇಲ್ಲದಿದ್ದರೆ ಆಯುಕ್ತರ ಅಧಿಕಾರ ಪಾಲಿಕೆಯಲ್ಲಿ ಬೆದರು ಗೊಂಬೆ ಆಗುತ್ತದೆ.
ಆಯುಕ್ತರು ಅಕ್ರಮ ಕಟ್ಟಡಗಳ ವಿಷಯದಲ್ಲಿ ಯಾವ ಕ್ರಮತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕು