ಜಾರಕಿಹೊಳಿ- ವಿಜಯೇಂದ್ರ ಮಾತು’ಕತೆ’

ಮಾಜಿ ಸಚಿವ ರಮೇಶ ಜಾರಕಿಹೊಳಿ‌ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೆಟ್ಟಿ. ಅರ್ಧ ತಾಸು ಮಾತುಕತೆ. ಅಸಮಾಧಾನ ಹೋಗಲಾಡಿಸಿದ ವಿಜಯೇಂದ್ರ, ಲೋಕಸಭೆ ಮುಂದಿನ ಟಾರ್ಗೆಟ್.

ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿಂದು ಭೇಟಿಯಾದರು.

ಎಲ್ಲರ ವಿಶ್ವಾಸ ಪಡೆದು ಕಾರ್ಯನಿರ್ವಹಣೆ- ಬಿ.ವೈ.ವಿಜಯೇಂದ್ರ


ಬೆಂಗಳೂರು:

ಪಕ್ಷದ ಹಿರಿಯರು ಏನೇ ಹೇಳಿಕೆ ಕೊಟ್ಟರೂ ಅದನ್ನು ಗಂಭೀರವಾಗಿ ಪರಿಗಣಿಸುವೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವೆ. ಯಾರು ಏನೇ ಹೇಳಿಕೆ ಕೊಟ್ಟರೂ ಅದನ್ನು ಅಪಾರ್ಥ ಮಾಡಿಕೊಳ್ಳದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ಇಂದಿಲ್ಲಿ ತಿಳಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿಯಾದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಹಲವು ಮುಖಂಡರ ಅಸಮಾಧಾನ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.


ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಒಟ್ಟಾಗಿ ಶ್ರಮಿಸೋಣ ಎಂದು ರಮೇಶ್ ಜಾರಕಿಹೊಳಿ ಅವರಿಗೆ ತಿಳಿಸಿದ್ದಾಗಿ ಹೇಳಿದರು. ರಮೇಶ್ ಜಾರಕಿಹೊಳಿ ಅವರ ನಡೆ ಬಗ್ಗೆ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿದ್ದವು. ಕೆಲವು ಸಂದರ್ಭದಲ್ಲಿ ಅವರು ಅಸಮಾಧಾನವನ್ನೂ ತೋಡಿಕೊಂಡಿದ್ದರು. ನಾನು ಬಿಜೆಪಿ ರಾಜ್ಯಾಧ್ಯಕ್ಷನಾದ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದರು.

ಇವತ್ತು ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸುಮಾರು 30 ನಿಮಿಷ ಮಾತನಾಡಿದ್ದೇನೆ. ಕೆಲವು ನೋವುಗಳನ್ನೂ ತೋಡಿಕೊಂಡಿದ್ದಾರೆ ಎಂದರಲ್ಲದೆ, ರಾಷ್ಟ್ರೀಯ ನಾಯಕರು, ವರಿಷ್ಠರು ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ. ಎಲ್ಲರೂ ಜೊತೆಯಾಗಿ ನರೇಂದ್ರ ಮೋದಿಜೀ ಅವರ ಕೈಯನ್ನು ಬಲಪಡಿಸುತ್ತೇವೆ ಎಂದು ತಿಳಿಸಿದರು.


ನಾನೊಬ್ಬ ರಾಜ್ಯಾಧ್ಯಕ್ಷ. ನನ್ನ ಕೆಲಸ ಮಾತನಾಡಬೇಕು. ಕಾರ್ಯಕರ್ತನಾಗಿ, ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುವ ಮೂಲಕ, ಸಂಘಟನೆಗೆ ಒತ್ತು ಕೊಡುವ ಮೂಲಕ, ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಮೂಲಕ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆದ್ದು ಅವರನ್ನು ದೆಹಲಿಗೆ ಕಳಿಸುವ ಮೂಲಕ ನಾನು ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ನಾಯಕರು ಈ ಜವಾಬ್ದಾರಿ ನೀಡಿದ್ದಾರೆ. ಯಾರೇನೇ ಹೇಳಿದರೂ ಅದನ್ನು ಆಶೀರ್ವಾದ ಎಂದು ಭಾವಿಸಿ, ಎಲ್ಲರ ಮನವೊಲಿಸಿ ಅವರ ಸಹಕಾರದೊಂದಿಗೆ ಮುನ್ನಡೆಯುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!