ಪ್ರಿಯಾಂಕಾ ಮತದಾರರ ಮನ ಗೆದ್ದಿದ್ದು ಹೇಗೆ ಗೊತ್ತಾ?

ಬೆಳಗಾವಿ:

ಇದು ಚುನಾವಣೆ ಕಾಲ. ಕಾವೇರಿದ ಬಿಸಿ ಬಿಸಿ ವಾತಾವರಣ. ಜತೆಗೆ ಸಂಸ್ಕೃತಿ ಸಂಸ್ಕಾರಗಳ ಅನಾವರಣ.
ಪ್ರಚಾರದ ಭರಾಟೆಯಲ್ಲಿ ಪರಸ್ಪರ ಕೆಸರೆರಚಾಟ. ವೈಯಕ್ತಿಕ ನಿಂದನೆ, ಚಾರಿತ್ರ್ಯವಧೆ ಎಲ್ಲವೂ ಈಗ ಸಾಮಾನ್ಯ. ಈ ಎಲ್ಲ ಬೆಳವಣಿಗೆಗಳ ನಡುವೆ ತೀರಾ ಅಪರೂಪದ ಅಭ್ಯರ್ಥಿ ಯಾಗಿ ಕಾಣಿಸಿಕೊಳ್ಳುವುದು ಚಿಕ್ಕೋಡಿ ಕೈ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ
ಜಾರಕಿಹೊಳಿ ಮನೆತನದ ಕುಡಿಯಾದರೂ ವಿನಯ ವಿಧೇಯತೆಯ ಪ್ರತಿರೂಪವಾಗಿ ಪ್ರಿಯಾಂಕಾ ಗಮನ ಸೆಳೆಯುತ್ತಾರೆ. ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಾಡಿ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿಯೇ ಶ್ರೀ ರಕ್ಷೆ.

ತಮ್ಮ ಅಪ್ಪನಂತೆಯೆ ಮಿತ ಮಾತಿನ ಪ್ರಿಯಾಂಕಾ ಭಾಷಣ ಕೇಳಿದವರು ತಲೆದೂಗಲೆ ಬೇಕು. ತನ್ನ ಪರ ಮತಯಾಚನೆ ವೇಳೆ ಕಾಂಗ್ರೆಸ್ ಸಾಧನೆಯನ್ನೇ ಅಸ್ತ್ರ ಮಾಡಿದ್ದು ಉಳಿದಂತೆ ವಿರೋಧ ಪಕ್ಷದ ಅಭ್ಯರ್ಥಿ ವಿರುದ್ಧ ಯಾವೊಂದು ಆರೋಪವನ್ನು ಪ್ರಿಯಾಂಕ ಮಾಡಿಲ್ಲ. ನಮ್ಮ ಕ್ಷೇತ್ರದ ಜನ‌ ಜಾಣರು. ಪ್ರಜ್ಞಾವಂತರು ಹಾಗಾಗಿ ಈಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಶತಸಿದ್ಧ ಎಂಬ ವಿಶ್ವಾಸ ಪ್ರಿಯಾಂಕಾಗೆ ಇದೆ.


ಮುತ್ಸದ್ಧಿಗಳಿಗೂ ಮಾದರಿ;
ನಿನ್ನೆಯಷ್ಟೆ ಕಾಗವಾಡದಲ್ಲಿ ರಾಜು ಕಾಗೆಯವರು ಪ್ರಧಾನಿ ಮೋದಿ ವಿರುದ್ಧವೆ ಅಪಶಬ್ದ ಬಳಕೆ ಮಾಡಿ ನೋಟೀಸ್ ಪಡೆದಿದ್ದರು. ಇನ್ನು ಕಳೆದ ಚುನಾವಣೆಯಲ್ಲಿ ಅಥಣಿಯಲ್ಲಿ ಡ್ಯಾಶ್ ಡ್ಯಾಶ್ ಡ್ಯಾಶ್ ಹೇಳಿಕೆಯಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಯತ್ನಾಳ ಅಪಮಾನ ಮಾಡಿದ್ದರು. ಇನ್ನು ಇತ್ತ ಮಾಜಿ ಮುಖ್ಯಮಂತ್ರಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್ ಬಗ್ಗೆ ವೈಯಕ್ತಿಕ ಟೀಕೆಯನ್ನು ಸಚಿವೆ ಹೆಬ್ಬಾಳಕರ ಮಾಡುತ್ತಿದ್ದರೆ, ಅವರ ಪುತ್ರ ಮೃಣಾಲ್ ಹೆಬ್ಬಾಳಕರ ನಾಲಗೆ ಬಿಗಿ ಹಿಡಿದು ಮಾತನಾಡುವಂತೆ ಸಂಸದೆ ಮಂಗಲಾ ಅಂಗಡಿ ಎಚ್ಚರಿಕೆ ಕೊಟ್ಟಿದ್ದರು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಪುತ್ರಿಯಾದರೂ ಎಲ್ಲೂ ಅಧಿಕಾರದ ಮದ, ಅಹಂಕಾರ ಧೋರಣೆ ಹೊಂದದೆ ಸರಳ, ಸುಸಂಸ್ಕೃತ ನಡೆ ನುಡಿಯಿಂದಲೆ ಮತದಾರರ ಮನವನ್ನು ಈಗಾಗಲೆ ಪ್ರಿಯಾಂಕಾ ಗೆದ್ದಿದ್ದಾರೆ. ಇನ್ನೇನು ಚುನಾವಣೆಗೆ ಬೆರಳೆಣಿಕೆಯಷ್ಟು ದಿನವಷ್ಟೆ ಬಾಕಿ ಉಳಿದಿದ್ದು ಚಿಕ್ಕೋಡಿಯಲ್ಲಿ ಈಗಿನಿಂದಲೆ ಪ್ರಿಯಾಂಕ ಹವಾ ಜೋರಾಗಿದೆ.

Leave a Reply

Your email address will not be published. Required fields are marked *

error: Content is protected !!