Headlines

ಬರ ನಿರ್ವಹಣೆ; ಮಳೆಗಾಲ ಸಿದ್ಧತೆ ಕುರಿತು ಸಭೆ

ಕುಡಿಯುವ ನೀರು, ಮೇವು, ಬೀಜ-ಗೊಬ್ಬರ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ

ಬೆಳಗಾವಿ, ಮೇ 21(ಕರ್ನಾಟಕ ವಾರ್ತೆ): ಬೇಸಿಗೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಬರಗಾಲದ ಪರಿಸ್ಥಿತಿ ಇದ್ದರೂ ಈ ಬಾರಿ ಉತ್ತಮ‌ ಮಳೆಯ ಮುನ್ಸೂಚನೆ ಇರುವುದರಿಂದ ರೈತರಿಗೆ ಸಕಾಲಕ್ಕೆ ಬೀಜ-ಗೊಬ್ಬರ ಪೂರೈಸಲು ಸಿದ್ಧತೆ ಮಾಡಿಕೊಳ್ಳಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಮೇ 21) ನಡೆದ ಬರ ನಿರ್ವಹಣೆ ಹಾಗೂ ಮಳೆಗಾಲ ಪೂರ್ವಭಾವಿ ಸಿದ್ಧತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಈ ಬಾರಿ ಉತ್ತಮ‌ ಮಳೆಯಾಗುವ ನಿರೀಕ್ಷೆ ಇರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ನಾಲಾ-ಹಳ್ಳಗಳ ಸುತ್ತಮುತ್ತಲೂ ಸ್ವಚ್ಛತೆ ಮಾಡಬೇಕು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜಂಟಿ ಸಭೆ ನಡೆಸಿ ನಗರದಲ್ಲಿ ಮಳೆಗಾಲ ಪರಿಸ್ಥಿತಿ ಸಮರ್ಪಕ‌ ನಿರ್ವಹಣೆಗೆ ಯೋಜನೆ ರೂಪಿಸಬೇಕು ಎಂದರು.

ನಕಲಿ ಬೀಜ-ಗೊಬ್ಬರ; ಎಚ್ಚರ ವಹಿಸಲು ಸೂಚನೆ:

ಮಳೆ ಆರಂಭಗೊಂಡ‌ ಬಳಿಕ ರೈತರಿಗೆ ನಕಲಿ ಬೀಜ ಅಥವಾ ಗೊಬ್ಬರ ಪೂರೈಕೆಯ ಬಗ್ಗೆ ದೂರುಗಳಿದ್ದರೆ ಅಂತಹ ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಮನೆಹಾನಿ ಪರಿಹಾರ ನೀಡುವಾಗ 2019 ರಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿರುತ್ತವೆ.
ಜಾನುವಾರುಗಳ ಕೊಟ್ಟಿಗೆಗಳು ಮನೆಯ ಪ್ರವೇಶ ದ್ವಾರದ ಬಳಿ ಇರುತ್ತವೆ. ಇದಲ್ಲದೇ ಮಳೆ ಜೋರಾದಾಗ ಜನರು ಮುಂಜಾಗ್ರತಾ ಕ್ರಮವಾಗಿ ಮನೆಗಳನ್ನು ತೆರವುಗೊಳಿಸಿ ಬೇರೆ ಕಡೆ ವಾಸವಿರುತ್ತಾರೆ. ಅಂತಹ ಮನೆಗಳು ಬಿದ್ದ ಸಂದರ್ಭದಲ್ಲಿ ಪರಿಹಾರ ಸಿಕ್ಕಿರುವುದಿಲ್ಲ‌. ಈ ಬಾರಿ ಇಂತಹ ಅಂಶಗಳನ್ನು ಗಮನಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.

ಬೆಳಗಾವಿ ಸೇರಿದಂತೆ ನಗರ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹಾಗೂ‌ ನಾಯಿಕಡಿತದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅಧಿಅಕರಿಗಳಿಗೆ ನಿರ್ದೇಶನ ನೀಡಿದರು.

ಕೃಷಿ ಇಲಾಖೆಯ‌ ಜಂಟಿ ನಿರ್ದೇಶಕರಾದ ಶಿವನಗೌಡ‌ ಪಾಟೀಲ ಅವರು, ಬೀಜ-ಗೊಬ್ಬರಗಳ ದಾಸ್ತಾನು ಕುರಿತು ಸಭೆಯಲ್ಲಿ ವಿವರಿಸಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಪಿ.ಎನ್.ಲೋಕೇಶ್, ಸೇರಿದಂತೆ ಜಿಲ್ಲಾ ಪಂಚಾಯತಿ, ಪಶುಪಾಲನೆ ಇಲಾಖೆ, ನಗರ ನೀರು‌ ಸರಬರಾಜು ಮಂಡಳಿ, ಗ್ರಾಮೀಣ ಕುಡಿಯುವ ನೀರು, ಕೆಯುಐಡಿಎಫ್ ಸಿ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

error: Content is protected !!