ರಾಜ್ಯದಲ್ಲಿ ಜಾರಕಿಹೊಳಿ ಕುಟುಂಬಕ್ಕಿದೆ ಪ್ರತ್ಯೇಕ ಶಕ್ತಿ
*ರಾಷ್ಟ್ರ ರಾಜಕಾರಣಕ್ಕೆ ಕಾಲಿರಿಸಿದ ಪ್ರಿಯಂಕಾ-ಕೈ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ ಸಾಹುಕಾರ್
ಬೆಳಗಾವಿ:
ಬೆಳಗಾವಿ ಜಿಲ್ಲೆಯ ರಾಜಕಾರಣದ ಮಾತು ಬಂದಾಗ ಮೊದಲು ಪ್ರಸ್ತಾಪವಾಗುವುದು ಜಾರಕಿಹೊಳಿ ಹೆಸರು. ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಬಿಗಿ ಹಿಡಿತ ಸಾಧಿಸಿರುವ ಈ ಸಹೋದರರು ಅಧಿಕಾರ ಹಾಗೂ ಸಚಿವ ಸ್ಥಾನ ಸತತವಾಗಿ ತಮ್ಮ ಕುಟುಂಬದಲ್ಲಿ ಇರುವಂತೆ ನೋಡಿಕೊಂಡಿದ್ದಾರೆ.
ಹೌದು… ಜಾರಕಿಹೊಳಿ ಕುಟುಂಬಸ್ಥರು ಈಗಾಗಲೇ ರಾಜಕೀಯದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿದ್ದಾರೆ. ರಮೇಶ್, ಸತೀಶ್, ಬಾಲಚಂದ್ರ, ಲಖನ್ ಜಾರಕಿಹೊಳಿ ಸಹೋದರರು ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಹೆಸರು ಮಾಡಿದ್ದಾರೆ. ಇದೀಗ ಇವರ ಕುಟುಂಬದ ಹೊಸ ಕುಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭಾ ಚುನಾವಣೆಯಿಂದ ಗೆದ್ದು ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ.

ಜಿದ್ದಾಜಿದ್ದಿನ ಕಣವಾಗಿದ್ದ ಚಿಕ್ಕೋಡಿ ಕ್ಷೇತ್ರ: ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿದ್ದು, ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ಪ್ರಿಯಂಕಾ ಜಾರಕಿಹೊಳಿ 92,655 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ 6,18,168 ಮತಗಳನ್ನು ಪಡೆದರೆ ಪ್ರಿಯಾಂಕಾ ಜಾರಕಿಹೊಳಿ 7,10,823 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಇನ್ನೂ ಅಂಚೆ ಮತ ಎಣಿಕೆ ಹಾಗೂ ಇಟಿಪಿಬಿಎಸ್ ಮತ ಎಣಿಕೆ ಜಾರಿಯಿದ್ದು ಕೈ ಅಭ್ಯರ್ಥಿಯ ಗೆಲುವಿನ ಅಂತರದಲ್ಲಿ ಅಲ್ಪ ವ್ಯತ್ಯಾಸ ಆಗುವ ಸಾಧ್ಯತೆಗಳಿವೆ. 22 ಸುತ್ತಿನ ಮತ ಎಣಿಕೆಯ ಒಂದೇ ಒಂದು ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮುನ್ನಡೆ ಸಾಧಿಸಲಿಲ್ಲ. ಎಲ್ಲ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮುನ್ನಡೆ ಪಡೆದುಕೊಂಡಿದ್ದು ವಿಶೇಷ. ಅಲ್ಲದೇ ಪತ್ನಿ ಶಶಿಕಲಾ ಅವರು ಶಾಸಕರಾಗಿರುವ ನಿಪ್ಪಾಣಿ ಕ್ಷೇತ್ರದಲ್ಲೇ ಕಾಂಗ್ರೆಸ್ 29,752 ಮತಗಳ ಮುನ್ನಡೆ ಸಾಧಿಸಿರುವುದು ಬಿಜೆಪಿಗೆ ತೀವ್ರ ಮುಖಭಂಗವುಂಟುಮಾಡಿದೆ.

ಜಾತಿಗಿಂತ ವ್ಯಕ್ತಿ ಮುಖ್ಯ ಎನ್ನುವ ಸಂದೇಶ ಸಾರಿದ ಜನ: ಪ್ರಧಾನಿ ಮೋದಿ ಅಲೆಯ ನಡುವೆಯೂ ಚಿಕ್ಕೋಡಿ ಮತದಾರ ಪ್ರಭುಗಳು ಜಾರಕಿಹೊಳಿ ಕುಟುಂಬಕ್ಕೆ ಜೈ ಎಂದಿದ್ದಾರೆ. ತಂದೆ ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹಗಲಿರುಳು ಕ್ಷೇತ್ರದಲ್ಲಿ ಗೆಲುವಿಗಾಗಿ ಶ್ರಮಿಸಿದ್ದರು. ಅಲ್ಲದೇ, ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವುದೇ ಕಷ್ಟ ಎನ್ನುತ್ತಿದ್ದವರಿಗೆ ಜಾತಿಗಿಂತ ವ್ಯಕ್ತಿ ಮುಖ್ಯ ಎನ್ನುವ ಸಂದೇಶವನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನರು ಸಾರಿದ್ದಾರೆ.

ರಾಷ್ಟ್ರ ರಾಜಕಾರಣಕ್ಕೆ ಜಾರಕಿಹೊಳಿ ಕುಟುಂಬ: ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ತನ್ನದೇ ಪ್ರಭಾವ ಹೊಂದಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ ಜಾರಕಿಹೊಳಿ ಕುಟುಂಬದ ಓರ್ವ ಸದಸ್ಯ ಸಚಿವರಾಗುತ್ತಾರೆ. ಅಷ್ಟರ ಮಟ್ಟಿಗೆ ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಹಿಡಿತ ಸಾಧಿಸಿದೆ. ಈಗಾಗಲೇ ಜಾರಕಿಹೊಳಿ ಕುಟುಂಬದ ನಾಲ್ವರು ಸಹೋದರರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ ರಮೇಶ ಜಾರಕಿಹೊಳಿ ಗೋಕಾಕ ಶಾಸಕರಾಗಿದ್ದರೆ, ಸತೀಶ ಜಾರಕಿಹೊಳಿ ಹಾಲಿ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅರಭಾವಿ ಶಾಸಕರಾಗಿದ್ದು, ಲಖನ್ ಜಾರಕಿಹೊಳಿ ಪರಿಷತ್ ಸದಸ್ಯರಾಗಿದ್ದಾರೆ. ಇನ್ನುಳಿದಂತೆ ಭೀಮಶಿ ಜಾರಕಿಹೊಳಿ ಸಕ್ರಿಯ ರಾಜಕಾರಣದಲ್ಲಿ ಇರದಿದ್ದರೂ, ಸಹೋದರರ ಬೆನ್ನಿಗಿದ್ದಾರೆ. ಈ ಎಲ್ಲರೂ ರಾಜ್ಯರಾಜಕಾರಣದಲ್ಲಿದ್ದು, ರಾಷ್ಟ್ರ ರಾಜಕಾರಣದಲ್ಲಿ ಯಾರೂ ಇಲ್ಲ. ಇದೀಗ ಜಾರಕಿಹೊಳಿ ಕುಟುಂಬದ ಎರಡನೇ ತಲೆಮಾರು ರಾಜಕೀಯ ಪ್ರವೇಶ ಆಗಿದ್ದು, ಸಚಿವ ಸತೀಶ ಪುತ್ರಿ ಪ್ರಿಯಂಕಾ ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ರಾಷ್ಟ್ರ ರಾಜಕಾರಣಕ್ಕೆ ಕಾಲಿರಿಸಿದ್ದಾರೆ.

14 ಸಂಘ ಸಂಸ್ಥೆಗಳ ನಿರ್ದೇಶಕಿ ಪ್ರಿಯಂಕಾ: ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಪ್ರಿಯಂಕಾ ಜಾರಕಿಹೊಳಿ ಎಂಬಿಎ ಪದವೀಧರೆಯಾಗಿದ್ದು ತಂದೆಯ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಯಮಕನಮರಡಿ ಕ್ಷೇತ್ರದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ನಿವಾಸಿ ಆಗಿರುವ ಪ್ರಿಯಂಕಾ ಜಾರಕಿಹೊಳಿ16-04-1997ರಂದು ಜನಿಸಿದ್ದು, ಸತೀಶ ಜಾರಕೊಹೊಳಿ ( ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದು ತಾಯಿ ಶಾಕುಂತಲಾದೇವಿ, ರಾಹುಲ್ ಜಾರಕೊಹೊಳಿ ಕೂಡ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯ ಹಿನ್ನೆಲೆ ನೋಡುವುದಾದರೆ 2018ರಿಂದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿರುವ ಪ್ರಿಯಂಕಾ ಜಾರಕಿಹೊಳಿ ತಂದೆಯ ಸತೀಶ್ ಜಾರಕಿಹೊಳಿ ಮತಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಸತೀಶ ಸುಗರ್ ಲಿಮಿಟೆಡ್, ಬೆಳಗಮ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್, ಗಾಡಿಗಾಂವ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್, ವೆಸ್ಟರ್ನ್ ಗ್ರಾಟ್ಸ್ ಇನ್ಫ್ರಾ ಲಿಮಿಟೆಡ್,ನೇಚರ್ ನೆಸ್ಟ್ ಹಾರ್ಟಿಕಲ್ಚರ್, ಆಂಡ್ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಸೇರಿ 14 ಸಂಘ ಸಂಸ್ಥೆಗಳ ನಿರ್ದೇಶಕಿಯಾಗಿ ಪಾಟನರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ಸಿನ ಮಾಸ್ಟರ್ ಮೈಂಡ್ ಸತೀಶ್: ಬೆಳಗಾವಿ ಜಿಲ್ಲೆಯ ಸೇರಿದಂತೆ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಪಕ್ಷ ಪುಟೆದೇದ್ದಿದೆ. ಕಾಂಗ್ರೆಸ್ಸಿನ ಮಾಸ್ಟರ್ ಮೈಂಡ್ ಎನಿಸಿದ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಾಂಗ್ರೆಸ್ ಪಕ್ಷ ಕಟ್ಟುವ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ 18 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ ಬೆಳಗಾವಿ ಜಿಲ್ಲೆಯನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ರೂಪಿಸಿತ್ತು. ಈಗ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಸ್ವತಃ ತಮ್ಮ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿ ಜೊಲ್ಲೆ ವಿರುದ್ಧ ಜಯ ಸಾಧಿಸಿ ತೋರಿಸಿದ್ದಾರೆ. ಒಟ್ಟಾರೆ ಸದ್ಯ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರ ನೆಲೆಯೂರುವಂತೆ ಮಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಜಾರಕಿಹೊಳಿ ಕುಟುಂಬದ ಪ್ರಾಬಲ್ಯವನ್ನು ತೋರಿಸಿದ್ದಾರೆ.