ಭೂ ಬಾಡಿಗೆ ವಸೂಲಿ ಗುತ್ತಿಗೆ ವಿಷಯದಲ್ಲಿ ಪತ್ರ ಕೊಟ್ಟು ಬಿಜೆಪಿಗೆ ಮುಜುಗುರ ಉಂಟು ಮಾಡಿದರಾ ಮೇಯರ್ ?
ಟೆಂಡರ್ ಇಲ್ಲದೆ ಒಂದು ತಿಂಗಳ ಮಟ್ಟಿಗೆ ಗುತ್ತಿಗೆ ನೀಡುವಲ್ಲಿ ಮೂವರ ಪಾತ್ರದ ಬಗ್ಗೆ ಸಾಕ್ಷ್ಯ ಹೇಳಿತಾ ಆ ಆಡಿಯೊ?
ಬರೀ ಮೌಖಿಕ ದೂರಿನ ಮೇರೆಗೆ ಗುತ್ತಿಗೆ ಬದಲಾಯಿತಾ? ಅಥವಾ ಮತ್ತೇನಾದರೂ ಕಾರಣ ಇದೆಯಾ?
ವಿಚಾರಣೆ ಮಾಡ್ತೆನಿ ಅಂದ ಬೆಳಗಾವಿ ಡಿಸಿ
ಬೆಳಗಾವಿ
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭೂ ಬಾಡಿಗೆ ವಸೂಲಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ E belagavi.com ಪ್ರಕಟಿಸಿದ ವರದಿ ಪಾಲಿಕೆಯನ್ಬು ಬೆಚ್ಚಿ ಬೀಳಿಸಿದೆ.
ಈ ಹಿನ್ನೆಲೆಯಲ್ಲಿ ಖುದ್ದು ಡಿಸಿಯವರೂ ಸಹ ಇದರ ಬಗ್ಗೆ ವಿಚಾರಣೆ ಮಾಡುವುದಾಗಿ ಹೇಳಿದ್ದು ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಕರಣದಲ್ಲಿ E Belagavi ಗೆ ಸಿಕ್ಕ ಆಡಿಯೋವೊಂದು ಭೂ ಬಾಡಿಗೆ ವಸೂಲಾತಿ ವಿಷಯದಲ್ಲಿ ನೂರಕ್ಕೆ ನೂರರಷ್ಟು ಯಡವಟ್ಟಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ.
ಈ ಪ್ರಕರಣದಲ್ಲಿ ಮುಖ್ಯವಾಗಿ ಮೇಯರ್ ಸವಿತಾ ಕಾಂಬಳೆ ಅವರು ಇಂತಹವರಿಗೆ ಗುತ್ತಿಗೆ ಕೊಡಿ ಎಂದು ನಿರ್ದೇಶನ ನೀಡಿದ್ದು ದೊಡ್ಡ ತಪ್ಪು. ಇದು ಅಧಿಕಾರ ದುರುಪಯೋಗ ಸ್ಪಷ್ಟ. ಮುಂದಿನ ದಿನಗಳಲ್ಲಿ ಇದು ವಿರೋಧಿಗಳಿಗೆ ಅಸ್ತ್ರವಾಗುವ ಸಾಧ್ಯತೆಗಳಿವೆ.
ಈಗ ಈ ಭೂ ಬಾಡಿಗೆ ವಸೂಲಾತಿಯನ್ನು ಯಾವುದೇ ಟೆಂಡರ್ ಇಲ್ಲದೇ ಮೂರನೇ ವ್ಯಕ್ತಿಗೆ ಕೊಡುವಲ್ಲಿ ಪ್ರಮುಖವಾಗಿ ಮೂರು ಜನರ ಪಾತ್ರವಿದೆ ಎನ್ನುವ ಅಂಶ ಆ ಆಡಿಯೋ ಮೂಲಕ ಗೊತ್ತಾಗುತ್ತದೆ.
ಮೇಲಾಗಿ ಮೇಯರ್ ಪತ್ರದ ದಿನಾಂಕ ಅಂದರೆ ದಿ. 17 ರಂದು ಸರ್ಕಾರಿ ರಜೆ. ಆ ದಿನದಂದು ಪತ್ರ ಹೇಗೆ ರೆಡಿ ಆಯಿತು ಎನ್ನುವ ಪ್ರಶ್ನೆ ಕೂಡ ಸಹಜವಾಗಿ ಕೇಳಿ ಬರುತ್ತಿದೆ. ಇಲ್ಲಿ ದಿನಾಂಕ ತಪ್ಪು ಹಾಕಿದ್ದರೂ ಕೂಡ ರಾತ್ರೋ ರಾತ್ರಿ ಆಯುಕ್ತರು ಖುದ್ದು ಆದೇಶ ಪತ್ರರೆಡಿ ಮಾಡಿದರಾ? ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಗಮನಕ್ಕೆ ತರಲಿಲ್ಲ ಏಕೆ?
ಮಹಾನಗರ ಪಾಲಿಕೆ ಆಡಳಿತ ಸುರಳಿತ ನಡೆಯಬೇಕು ಎನ್ನುವ ಉದ್ದೇಶದಿಂದ ಬಿಜೆಪಿಯಲ್ಲಿಯೇ ಕೋ ಆರ್ಡಿನೇಶನ್ ಕಮಿಟಿಯೊಂದಿದೆ. ಅದರಲ್ಲಿ ಹಿರಿಯರು, ಬುದ್ದಿವಂತರೂ ಇದ್ದಾರೆ. ಇಲ್ಲಿ ಮೇಯರ್ ಅವರು ಇಂತಹ ಜಟಿಲ ಸಮಸ್ಯೆ ಬಂದಾಗ ಆ ಕಮಿಟಿ ಗಮನಕ್ಕೆ ತರುವ ಕೆಲಸವನ್ನು ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಂದರೆ ಇಲ್ಲಿ ಮೇಯರ್ ಅವರು ಶಾಸಕ ಅಭಯ ಪಾಟೀಲರೇ ನೇಮಿಸಿದ ಕಮಿಟಿಯನ್ಬು ಲೆಕ್ಕಕ್ಕೆ ತೆಗೆದುಕೊಳ್ಳದೇ ಪತ್ರ ಕೊಟ್ಟು ಇಷ್ಟು ರಾದ್ದಾಂತಕ್ಕೆ ಕಾರಣವಾದರಾ ಎನ್ನುವ ಅನುಮಾನ ಕೂಡ ಬರುತ್ತಿದೆ.