ನವದೆಹಲಿ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಅವರು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ, ಬೆಂಗಳೂರು – ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ್ ಹೈ ಸ್ಪೀಡ್ ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಅಗತ್ಯತೆಯ ಬಗ್ಗೆ ಚರ್ಚಿಸಿದ್ದಾರೆ.

ಬೇಟಿಯ ಪ್ರಾರಂಭದಲ್ಲಿ ಪೂಣೆ – ಬೆಳಗಾವಿ – ಹುಬ್ಬಳ್ಳಿ ನಡುವೆ ಇತ್ತೀಚಿಗೆ ವಂದೇ ಭಾರತ್ ನೂತನ ಹೈ ಸ್ಪೀಡ್ ರೈಲು ಸಂಚಾರಕ್ಕೆ ಚಾಲನೆ ನೀಡಿ ಬೆಳಗಾವಿ ಜಿಲ್ಲೆಯ ರಹವಾಸಿಗಳ ಅನೇಕ ದಿನಗಳ ಬೇಡಿಕೆಯನ್ನು ಈಡೇರಿಸಿ, ಅನುಕೂಲತೆ ಕಲ್ಪಿಸಿ ಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು ಎಂದು ಅವರು ತಿಳಿಸಿದರು.
ಸವದತ್ತಿಗೂ ರೈಲು ಸಂಪರ್ಕ

ತದನಂತರ ಇದೇ ಸಮಯದಲ್ಲಿ ಬೆಂಗಳೂರು – ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ್ ರೈಲು ಸಂಚಾರ ಸೇವೆಯನ್ನು ಸಹ ಬೆಳಗಾವಿಯವರೆಗೆ ವಿಸ್ತರಿಸುವ ಅವಶ್ಯಕತೆಯ ಕುರಿತು ಮನವರಿಕೆಯನ್ನು ಕೇಂದ್ರ ರೈಲ್ವೆ ಸಚಿವರಲ್ಲಿ ಮಾಡಿ ಕೊಡುವುದರೊಂದಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ನೂತನ ರೈಲು ಸೇವೆ ಕಲ್ಪಿಸುವ ಬಗ್ಗೆ ಅಗತ್ಯವೆನಿಸುವ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳುವ ಬಗ್ಗೆಯೂ ಸಹ ಇಬ್ಬರೂ ಸಚಿವರಲ್ಲಿ ವಿನಂತಿಸಿದರು.

ಅದರಂತೆ ಬರುವ ದಿನಗಳಲ್ಲಿ ಈ ಬೇಡಿಕೆಗಳನ್ನು ಸಹ ಈಡೇರಿಸುವುದಾಗಿ ಭರವಸೆಯನ್ನು ಅವರು ನೀಡಿರುವುದಾಗಿ ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.