ನಂದಿನಿ ತುಪ್ಪಕ್ಕೆ ಭಾರೀ ಬೇಡಿಕೆ- ಬಾಲಚಂದ್ರ

ಬೆಳಗಾವಿ
ತಿರುಪತಿ ಲಡ್ಡು ಬಗ್ಗೆ ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡುವ ಮೂಲಕ ದೇಶದಲ್ಲೇ ನಂದಿನಿ ತುಪ್ಪಕ್ಕೆ ಬಾರೀ ಬೇಡಿಕೆ ಬಂದಿದೆ ಎಂದು ಕೆಎಂಎಫ್‌ ಮಾಜಿ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅಧಿಕಾರವಧಿಯಲ್ಲಿ 4 ವರ್ಷದ ಹಿಂದೆ ಕೆಎಂಎಫ್‌ನ ನಂದಿನಿ ತುಪ್ಪ ದೇಶದ ದೊಡ್ಡ ದೇವಸ್ಥಾನ ತಿರುಪತಿ ಬಾಲಾಜಿ ಮಂದಿರದ ಲಡ್ಡು ಪ್ರಸಾದಕ್ಕೆ ಪೂರೈಕೆಯಾಗುತ್ತಿತ್ತು. ತಿರುಪತಿ ಬಾಲಾಜಿ ಮಂದಿರದ ಟ್ರಸ್ಟ್‌ ಚೇರಮನ್‌ ಬದಲಾವಣೆ ಆಗಿದ್ದರಿಂದ ತುಪ್ಪಕ್ಕಾಗಿ ಟೆಂಡರ್‌ ಕರೆದು ನೀಡಲಾಗಿತ್ತು.

ಕಡಿಮೆ ಬೆಲೆಗೆ ನಂದಿನಿ ತುಪ್ಪ ಪೂರೈಕೆ ಮಾಡುವಂತೆ ಕೇಳಿದ್ದರು. ನಾವು ನಂದಿನಿ ತುಪ್ಪದ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜೀ ಮಾಡುವುದಿಲ್ಲ. ಕಡಿಮೆ ಬೆಲೆಗೆ ನಾವು ಕೊಡಲಿಲ್ಲ. ಖಾಸಗಿ ಕಂಪನಿಗೆ ತುಪ್ಪದ ಪೂರೈಕೆ ಟೆಂಡರ್‌ ನೀಡಲಾಯಿತು.

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಸೇರ್ಪಡೆಯಾಗಿದೆ ಎಂದು ಚಂದ್ರಬಾಬು ನಾಯ್ಡು ಹೇಳಿಕೆ ಕೊಟ್ಟಿದ್ದಾರೆ. ಆ ಆರೋಪ ಎಷ್ಟು ಸುಳ್ಳವೋ? ನಿಜವೋ ಗೊತ್ತಿಲ್ಲ. ಆದರೆ, ಇಡೀ ದೇ‍ಶವೇ ಕೆಎಂಎಫ್‌ನ ನಂದಿನಿ ತುಪ್ಪದ ಬಗ್ಗೆ ಮಾತನಾಡುವಂತಾಗಿದೆ. ನಮ್ಮ ತುಪ್ಪಕ್ಕೆ ಬೇಡಿಕೆ ಕೂಡ ಹೆಚ್ಚಳವಾಗಿದೆ. ಹಾಗಾಗಿ, ನಾವು ನಾಯ್ಡು ಅವರಿಗೆ ಧನ್ಯವಾದಗಳನ್ನು ಹೇಳುತ್ತೇವೆ ಎಂದರು.
ನಂದಿನಿ ತುಪ್ಪ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಹೋಗುತ್ತಿರುವುದು ನಮ್ಮ ಹೆಮ್ಮೆ ಆಗಿತ್ತು. ಈಗ ಮತ್ತೆ ನಂದಿನಿ ತುಪ್ಪಕ್ಕೆ ತಿರುಪತಿ ದೇವಸ್ಥಾನಕ್ಕೆ ಕೊಡುವುದಾಗಿ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ ಎಂದು ಹೇಳಿದರು.
ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡುತ್ತಿರುವುದರಿಂದ ನಂದಿನಿ ತುಪ್ಪದ ಗುಣಮಟ್ಟವೂ ಉತ್ತಮವಾಗಿದೆ. ಕೆಎಂಎಫ್‌ ಉತ್ಪನ್ನಗಳ ಗುಣಮಟ್ಟದಲ್ಲಿ ಎಂದಿಗೂ ರಾಜಿ ಇಲ್ಲ ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿ ಮಾಡಲಾಗಿದೆ. ಈ ಹಿಂದೆ ಆಡಳಿತ ಮಂಡಳಿ ಮಾತ್ರ ವಾರ್ಷಿಕ ಸರ್ವಸಾಧಾರಣ ಸಭೆ ನಡೆಸುತ್ತಿತ್ತು. ಈ ಸಭೆಗೆ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಆಹ್ವಾನಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮೇಗಾ ಡೇರಿ ನಿರ್ಮಿಸುವ ಮೂಲಕ ರೈತರಿಗೆ ಅನುಕೂಲ ಮಾಡಲಾಗುವುದು. ಮೇಗಾ ಡೇರಿ ಆರಂಭವಾದರೆ ಹಾಲಿನ ಎಲ್ಲ ಉತ್ಪನ್ನಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ಆದಷ್ಟು ಬೇಗನೆ ಮೇಗಾ ಡೇರಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!