ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನಷ್ಟೇ: ಸಚಿವ ಸತೀಶ್ ಜಾರಕಿಹೊಳಿ
ನಿಪ್ಪಾಣಿ:
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದು ನಿಜ. ದೆಹಲಿಗೆ ಹೋದಾಗ ವರಿಷ್ಠರನ್ನು ಭೇಟಿಯಾಗುವುದು ಸಹಜ. ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದೆ ಅಷ್ಟೇ, ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡವೆಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಸಿಎಂ ಬದಲಾವಣೆ ಕೂಗು ನಡುವೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಈ ಕುರಿತು ನಿಪ್ಪಾಣಿಯಲ್ಲಿ ಸುದ್ದಿಗಾರರೊಂದಿಗೆ ಸ್ಪಷ್ಟನೆ ನೀಡಿದ ಸಚಿವ ಸತೀಶ್ ಜಾರಕಿಹೊಳಿಯವರು, ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ವರಿಷ್ಠರು, ಹೀಗಾಗಿ ದೆಹಲಿಗೆ ಹೋದಾಗ ಭೇಟಿಯಾಗಿದ್ದೆ. ನಮ್ಮ ಭೇಟಿ ವೇಳೆ ರಾಜಕೀಯ ಸಮಸ್ಯೆಗಳನ್ನು ಮಾತ್ರ ಚರ್ಚೆ ಮಾಡಿದ್ದೇವೆ ಅಷ್ಟೇ ಎಂದರು.

ರಾಜ್ಯದಲ್ಲಿ ಹೊಸ ಸಂಚಲನ, ಯಾವುದೇ ಬೆಳವಣಿಗೆಗಳು ಕಾಣುತ್ತಿಲ್ಲ. ಸಿಎಂ ಸಿದ್ದರಾಮಯ್ಯನವರ ಮೇಲೆ ಯಾವುದೇ ಒತ್ತಡವಿಲ್ಲ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ಕಳೆದ ಎರಡು ತಿಂಗಳಿನಿಂದ ವಿರೋಧ ಪಕ್ಷಗಳು ಸಿಎಂ ರಾಜೀನಾಮೆಗಾಗಿ ಒತ್ತಡ ಹಾಕುತ್ತಿವೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ಇಡಿ ಪ್ರಕರಣ ದಾಖಲಿಸಿ ತನಿಖೆ ಮಾಡಲಿ, ತೊಂದರೆ ಇಲ್ಲ. ಇಡಿ ತನಿಖೆಯಿಂದ ಸತ್ಯಾಂಶ ಹೊರ ಬರುತ್ತದೆ ಎಂದು ತಿಳಿಸಿದರು.
ಇನ್ನು ಮಾಜಿ ಶಾಸಕ ಪಿ. ರಾಜೀವ್ ಅವರ ಭೂ ಕಬಳಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾವ ಸಚಿವರು ಭೂ ಕಬಳಿಕೆ ಮಾಡಿದ್ದಾರೆ, ಅವರು ಯಾರು? ಎಲ್ಲಿ ಭೂ ಕಬಳಿಕೆ ಮಾಡಿದ್ದಾರೆಂದು ಹೇಳಿಲಿ, ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.