ಯಲ್ಲಮ್ಮನ ಸನ್ನಿಧಿ: 16,200 ಕೆಜಿ ಎಣ್ಣೆ ಸಂಗ್ರಹ -ದರ ಹೆಚ್ಚಿದ ಭಕ್ತಿಯಿಂದ ದೀಪ ಉರಿಸಿದ ಭಕ್ತಗಣ
ಬೆಳಗಾವಿ. ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಈ ಬಾರಿ ನಡೆದ ನವರಾತ್ರಿ ಜಾತ್ರೆಯಲ್ಲಿ 16,200 ಕೆ.ಜಿ ದೀಪದ ಎಣ್ಣೆ ಸಂಗ್ರಹವಾಗಿದೆ.
ನವರಾತ್ರಿಯಲ್ಲಿ ಯಲ್ಲಮ್ಮ ದೇವಸ್ಥಾನದ ಗರ್ಭಗುಡಿ ಎದುರು ದೀಪ ಇರಿಸಲಾಗುತ್ತದೆ. ಗುಡ್ಡಕ್ಕೆ ಬರುವ ಪ್ರತಿ ಭಕ್ತರು ಅದಕ್ಕೆ ಎಣ್ಣೆ ಹಾಕಿ, ಭಕ್ತಿ ಮೆರೆಯುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಎಣ್ಣೆ ದರ ಹೆಚ್ಚಿದ್ದರಿಂದ ಎಣ್ಣೆ ಸಂಗ್ರಹ ಪ್ರಮಾಣ ಕಡಿಮೆಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, 2 ಸಾವಿರ ಕೆಜಿ ಹೆಚ್ಚು ಸಂಗ್ರಹವಾಗಿದೆ.
ಕಳೆದ ವರ್ಷ ನವರಾತ್ರಿಯಲ್ಲಿ 14,194 ಕೆಜಿ ಎಣ್ಣೆ ಸಂಗ್ರಹವಾಗಿತ್ತು. ಪ್ರತಿ ಕೆಜಿಗೆ ₹51 ದರದಲ್ಲಿ ಮಾರಿದಾಗ, ₹7,23,894 ಆದಾಯ ದೇವಸ್ಥಾನಕ್ಕೆ ಬಂದಿತ್ತು.
ಈ ಬಾರಿ ಅ.3ರಿಂದ ಅ.12ರವರೆಗೆ 16,200 ಕೆಜಿ ಎಣ್ಣೆ ಸಂಗ್ರಹಗೊಂಡಿದೆ. ಇದನ್ನು ಟೆಂಡರ್ ಪಡೆದಿರುವವರಿಗೆ ಪ್ರತಿ ಕೆಜಿಗೆ ₹58 ದರದಲ್ಲಿ ಮಾರಾಟ ಮಾಡಿದರೆ, 9,39,600 ಆದಾಯ ಬರಲಿದೆ.
‘ಎಣ್ಣೆ ದರ ಏರಿಕೆಯಾಗಿದ್ದರೂ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ದೀಪಕ್ಕೆ ಎಣ್ಣೆ ಹಾಕಿದ್ದಾರೆ. ಅದನ್ನು ಮೋಟಾರು ಮೂಲಕ ಟ್ಯಾಂಕರ್ ಗೆ ಸಾಗಿಸುತ್ತಿದ್ದೇವೆ. ಗುಡ್ಡಕ್ಕೆ ರೈತಾಪಿ ವರ್ಗದವರೇ ಹೆಚ್ಚಾಗಿ ಆಗಮಿಸುತ್ತಾರೆ. ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗಿದ್ದರಿಂದ ದೀಪದ ಎಣ್ಣೆ ಸಂಗ್ರಹವೂ ಹೆಚ್ಚಿದೆ ಎಂದು ಯಲ್ಲಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್ ಪಿಬಿ ಮಹೇಶ ಹೇಳಿದರು.
ನವರಾತ್ರಿಯಲ್ಲಿ ಗುಡ್ಡಕ್ಕೆ ಬಂದು ದೀಪಕ್ಕೆ ಎಣ್ಣೆ ಹಾಕಿದರೆ, ನಮ್ಮ ಬಾಳು ದೀಪದಂತೆ ಬೆಳಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಇಲ್ಲಿಗೆ ಬಂದು ಎಣ್ಣೆ ಹಾಕಿದ್ದೇನೆ ಎಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಭಕ್ತ ಈಶ್ವರ ಚಿನ್ನಿಕಟ್ಟಿ ತಿಳಿದಿದರು