8 ಲಕ್ಷ ರೂ ಪರಿಹಾರ ವಿತರಣೆ

ಘಟಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಸತೀಶ್‌ ಜಾರಕಿಹೊಳಿ

*ಮೃತನ ಪತ್ನಿಗೆ ಮೀನುಗಾರಿಕೆ ಸಂಕಷ್ಟ ಪರಿಹಾರ ನಿಧಿಯಿಂದ 8 ಲಕ್ಷ ರೂಗಳ ಪರಿಹಾರ ನಿಧಿಯ ಆದೇಶ ಪತ್ರ ವಿತರಣೆ

ಹುಕ್ಕೇರಿ: ಮೀನುಗಾರಿಕೆ ಕೃಷಿಗೆ ತೆರಳಿದ್ದ ವೇಳೆ ಘಟಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟ ಬೆನಕನಹೊಳಿ ಗ್ರಾಮದ ಲಕ್ಷ್ಮಣ ರಾಮ ಅಂಬಲಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸತೀಶ್ ಜಾರಕಿಹೊಳಿ ಅವರು ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಿದರು.

ತಾಲೂಕಿನ ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋದ ವೇಳೆ ಲಕ್ಷ್ಮಣ ರಾಮಾ ಅಂಬಲಿ ಮತ್ತವರ ಮಕ್ಕಳಾದ ರಮೇಶ ಮತ್ತು ಯಲ್ಲಪ್ಪ ಮೃತಪಟ್ಟಿದ್ದರು. ನದಿಯಲ್ಲಿ ಮೃತಪಟ್ಟ ಲಕ್ಷ್ಮಣ ರಾಮ ಅಂಬಲಿ ಕುಟುಂಬಸ್ಥರೊಂದಿಗೆ ಇಂದು ಕೆಲ ಹೊತ್ತು ಮಾತುಕತೆ ನಡೆಸಿ ಧೈರ್ಯ ತುಂಬಿದ ಸಚಿವರು, ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ನಡೆದ ಆಕಸ್ಮಿಕ ಘಟನೆೆ ನನಗೆ ತೀವ್ರ ನೋವುಂಟುಮಾಡಿದೆ ಎಂದು ಹೇಳಿದರು.

ಕುಟುಂಬಸ್ಥರಿಗೆ ಪರಿಹಾರ ನಿಧಿಯ ಆದೇಶ ಪತ್ರ ವಿತರಿಸಿದ ಸಚಿವರು: ಬೆನಕನಹೊಳಿ ಗ್ರಾಮದ ಲಕ್ಷ್ಮಣ ಅಂಬಲಿ ಮನೆಗೆ ಭೇಟಿ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರು ಮೃತನ ಪತ್ನಿ ಲಕ್ಷ್ಮೀ ಅವರಿಗೆ ಮೀನುಗಾರಿಕೆ ಸಂಕಷ್ಟ ಪರಿಹಾರ ನಿಧಿಯಿಂದ 8 ಲಕ್ಷ ರೂಗಳ ಪರಿಹಾರ ನಿಧಿಯ ಆದೇಶ ಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಸಚಿವರು, ಈ ದುರಂತದಲ್ಲಿ ಮೃತಪಟ್ಟ ಎರಡು ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಲಾ 1.25 ಲಕ್ಷ ರೂ, ಕೇಂದ್ರ ಸರ್ಕಾರದಿಂದ 5 ಲಕ್ಷ ರೂ ಹಾಗೂ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಲಕ್ಷ್ಮೀ ಅಂಬಲಿ ಅವರಿಗೆ ವಿಧವಾ ಪಿಂಚಣಿ ಆದೇಶ ಪತ್ರ ಹಾಗೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 20 ಸಾವಿರ ರೂಗಳನ್ನು ಕೂಡ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆಎಲ್‍ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ವಿಧಾನ ಪರಿಷತ್ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ, ಬುಡಾ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ, ತಹಶೀಲ್ದಾರ ಮಂಜುಳಾ ನಾಯಕ, ತಾಪಂ ಇಒ ಟಿ.ಆರ್.ಮಲ್ಲಾಡದ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಂತೋಷ ಕೊಪ್ಪದ, ಬಿಇಒ ಪ್ರಭಾವತಿ ಪಾಟೀಲ, ಸಿಪಿಐ ಜಾವೇದ ಮುಶಾಪೂರ, ಕಂದಾಯ ನಿರೀಕ್ಷಕ ಚಂದ್ರಕಾಂತ ಕಲಕಾಂಬಕರ, ಗ್ರಾಪಂ ಅಧ್ಯಕ್ಷ ಬಸವರಾಜ ಧರನಟ್ಟಿ, ಮುಖಂಡರಾದ ಕಿರಣ ರಜಪೂತ, ರಾಮಣ್ಣಾ ಗುಳ್ಳಿ, ಅರ್ಜುನ ಗಸ್ತಿ, ಕಾಡೇಶ ಮೇಖಳೆ, ಮಾರುತಿ ಗಸ್ತಿ, ಶೆಟ್ಟೆಪ್ಪ್ ಕೋಳಿ, ಯಲಗೊಂಡ ವಾಲಿಕಾರ, ರಮೇಶ ಸನ್ನಪ್ಪಗೋಳ, ಸತೀಶ ನಾಯಕ, ಪಿಡಿಒ ಆನಂದ ಹೊಳೆನ್ನವರ, ಗ್ರಾಮ ಆಡಳಿತ ಅಧಿಕಾರಿ ಹುಸೇನ ತಹಶೀಲ್ದಾರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!