“ಬೆಂಗಳೂರು:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪದ ಹಿನ್ನರಲೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಇಂದು ಆದೇಶಿಸಿದೆ.

ಜಾಮೀನು ಕೋರಿ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಪೀಠ ಈ ಆದೇಶ ಮಾಡಿತು.
. ಸಿ.ಟಿ.ರವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಬಂಧನದ ಕಾರಣದ ಕುರಿತು ಕಕ್ಷಿದಾರರಿಗೆ, ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೇ ದೂರುದಾರರು ಓರ್ವ ಸಚಿವೆಯಾಗಿದ್ದಾರೆ, ಅವರಿಗೆ ಬೆದರಿಕೆ ಹಾಕಲು ಸಾಧ್ಯವೇ? ದೂರುದಾರರ ಬೆಂಬಲಿಗರೇ ತಮ್ಮ ಕಕ್ಷಿದಾರರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ” ಎಂದರು.

“ಅಲ್ಲದೆ ಕಕ್ಷಿದಾರರು ಪ್ರಕರಣದ ಸಾಕ್ಷಿನಾಶ ಮಾಡಬಹುದೆಂದು ಹೇಳಿದ್ದಾರೆ. ಆದರೆ ಸಾಕ್ಷಿಗಳೆಲ್ಲಾ ಆಡಳಿತ ಪಕ್ಷದವರೇ ಆಗಿರುವಾಗ ಸಾಕ್ಷಿ ನಾಶ ಹೇಗೆ ಸಾಧ್ಯ? ಸದನದ ವಸ್ತುಗಳನ್ನು ಹಾನಿ ಮಾಡಿದರೆ ಅದನ್ನು ಪ್ರಶ್ನಿಸಬಹುದೇ ವಿನಹ ಸದನದ ಮಾತುಗಳಿಗೆ ಪ್ರಕರಣ ದಾಖಲಿಸುವ ಅವಕಾಶ ನೀಡಿದರೆ ಸದಸ್ಯರು ಸ್ವತಂತ್ರವಾಗಿ ಮಾತನಾಡ ಅವಕಾಶ ಕಳೆದುಕೊಳ್ಳುತ್ತಾರೆ. ಒಬ್ಬರಿಗೊಬ್ಬರ ವಿರುದ್ಧ ಪ್ರಕರಣ ದಾಖಲು ಮಾಡುತ್ತಾ ಹೋಗುತ್ತಾರೆ. ಆದ್ದರಿಂದ ಪ್ರಕರಣದಲ್ಲಿ ಸಿ.ಟಿ.ರವಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು” ಎಂದು ಮನವಿ ಮಾಡಿದರು.