ಪಾಲಿಕೆಯಲ್ಲಿ ಹಮ್ ಭಿ ಚುಪ್.. ತುಮ್ ಭಿ ಚುಪ್..!

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಏನು ಪ್ರಶ್ನೆ ಮಾಡಬೇಕು ಅದನ್ನು ಮಾಡಲ್ಲ.ಉಳಿದ ವಿಚಾರ ತಮಗೆ ಬಿಟ್ಟಿದ್ದು..!

ಸಧ್ಯ ಹೇಗಾಗಿದೆ ಎಂದರೆ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿಯೂ ಕೂಡ ಎರಡು ಬಗೆಯ ನ್ಯಾಯ ಮಾಡಿದಂತಿದೆ.

ಸಣ್ಣವರು ತಪ್ಪು ಮಾಡಿದರೆ ಕಠಿಣ ಕ್ರಮ. ಅದೇ ದೊಡ್ಡವರು ದೊಡ್ಡ ದೊಡ್ಡ ತಪ್ಪು ಮಾಡಿದರೂ ಬರೀ ಒಂದು ನೋಟೀಸ್.‌!

ಮುಖ್ಯವಾದ ಸಂಗತಿ ಎಂದರೆ, ಸಿಬ್ಬಂದಿಯವರೇ ಪಾಲಿಕೆಗೆ ದ್ರೋಹ ಬಗೆಯುವದು ಎಂದರೆ ಅದು ಉಂಡ ಮನೆಗೆ ದ್ರೋಹ ಬಗೆದಂತೆ ಎನ್ನುವ ಮಾತಿದೆ.

ಅದು ಈಗ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿದೆ

ಅದಕ್ಕೆ ಉದಾಹರಣೆ ಸಮೇತ ಹೇಳಬೇಕು ಎಂದರೆ, ಮಹಾನಗರ ಪಾಲಿಕೆಗೆ ವಿವಿಧ ಮೂಲಗಳಿಂದ ತೆರಿಗೆ ಬರಬೇಕು. ಆದರೆ ಅದನ್ನು ವಸೂಲಿ ಮಾಡಿ ಪಾಲಿಕೆಗೆ ಕಟ್ಟಿಸಿ ಕೊಳ್ಳಬೇಕಾದ ಹೊಣೆ ಕಂದಾಯ ಶಾಖೆಯದ್ದು..!

ಆದರೆ ಈ ಕೆಲಸ ಸರಿಯಾಗಿ ನಡೆದಿದೆಯೇ ಎನ್ನುವುದನ್ನು ದಾಖಲೆ‌ ಸಮೇತ ಕೆದಕುತ್ತ ಹೋದರೆ ಸಮಾಧಾನಕರ ಉತ್ತರ ಬರಲ್ಲ.

ಇಲ್ಲಿ ಬಡವರು, ಮಧ್ಯಮವರ್ಗದವರು ತೆರಿಗೆ ಹಣ ಪಾವತಿ ಮಾಡದಿದ್ದರೆ ಏನೋ ಸಮಸ್ಯೆ ಇರಬಹುದು ಅಂದು ಸುಮ್ಮನಾಗಬಹುದು

ಆದರೆ ವ್ಯವಹಾರದಲ್ಲಿ ಕೋಟಿ ಕೋಟಿ ಲಾಭ ಮಾಡಿಕೊಂಡರೂ ಸಹ ಪಾಲಿಕೆಗೆ ಕಟ್ಟಬೇಕಾದ ತೆರಿಗೆ ಕಟ್ಟದಿದ್ದರೆ ಅಂತಹವರ ಮೇಲೆ ಕಠಿಣ ಕ್ರಮ ಬೇಡವೇ ಎನ್ನುವುದು ಬೆಳಗಾವಿಗರ ಪ್ರಶ್ನೆ.

ಇನ್ನೂ ಸ್ಪಷ್ಟ ಮಾತುಗಳಲ್ಲಿ ಹೇಳಬೇಕೆಂದರೆ, ಬೆಳಗಾವಿ ಹೊರವಲಯದಲ್ಲಿರುವ ಹೆಸರಾಂತ ಹೆಲ್ಮೆಟ್ ಕಂಪನಿ ಮಹಾನಗರ ಪಾಲಿಕೆಗೆ ಸುಮಾರು ಮೂರು ಕೋಟಿ ರೂ.ಗೂ ಅಧಿಕ ತೆರಿಗೆಯನ್ನು ಪಾವತಿಸಬೇಕಿತ್ತು. ಆದರೆ ಅದು ಪಾಲಿಕೆ ಮೂಲಗಳ ಪ್ರಕಾರವೇ ಕಳೆದ ಹತ್ತಾರು ವರ್ಷದಿಂದು ಆ ಕಂಪನಿ ತೆರಿಗೆಯನ್ನೇ ಪಾವತಿಸಿಲ್ಲ. ಅದನ್ನು ಯಾಕೆ ಅಂತ ಕೇಳುವ ಗೋಜಿಗೆ ಹೋಗಿಲ್ಲ.

ಏತನ್ಮಧ್ಯೆ ಅದರ ವಸೂಲಿಗೆ ಹೋದವರು ಒಟ್ಟಾರೆ ಎಷ್ಟು ಪಾವತಿ ಮಾಡಬೇಕು ಅಷ್ಟರ ಚಲನ್ ಕೊಟ್ಟು ಬಂದಿದ್ದರೆ ಸಮಸ್ಯೆಯೇ ಬರುತ್ತಿರಲಿಲ್ಲ. ಆದರೆ ಅಸರಲ್ಲಿ ಭಾರೀ ಕಡಿತ ಮಾಡಿ ಒಂದು ಹಂತಕ್ಕೆ ಸೆಟಲ್ ಮೆಂಟ್ ಮಾಡಿಕೊಂಡರು ಎನ್ಬುವ ಸುದ್ದಿಯೂ ಬಂತು. ಅಷ್ಟೇ ಅಲ್ಲ ಆ ತೆರಿಗೆ ಎಲ್ಲೆಲ್ಲೋ ಸೋರಿಕೆ ಆಯಿತು ಎನ್ನುವ ಮಾತುಗಳು ಕೇಳಿ ಬಂದವು.

ಈ ತೆರಿಗೆ ಸೋರಿಕೆ ಸುದ್ದಿ ಸಹಜವಾಗಿ ಮಾಧ್ಯಮದಲ್ಲಿ ದೊಡ್ಡ ಸುದ್ದಿಯೂ ಆಯಿತು. ಆಗ ಸಮಗ್ರ ವಿಚಾರಣೆ ನಡೆಸಿದ ಪಾಲಿಕೆ ಆಯುಕ್ತರು ನಾಲ್ವರಿಗೆ ನೋಟೀಸ್ ಜಾರಿ ಮಾಡಿದರು. ಅಷ್ಟೆ ಅಲ್ಲ ಅವರಿಂದಲೇ ಮೂರು ಕೋಟಿ ರೂ ತುಂಬಬೇಕು ಎನ್ನುವ ನೋಟೀಸನ್ನು ಕಂಪನಿಗೆ ಕೊಡಿಸಿದರು.

ಇಲ್ಲಿದೆ ಅಸಲಿ ಕಹಾನಿ..

ಒಟ್ಟಾರೆ ಈ ಪ್ರಕರಣವನ್ಬು ಪಾಲಿಕೆ ಆಯುಕ್ತರು ಗಂಭೀರವಾಗಿ ಪರಿಗಣಿಸಿದರು. ಮತ್ತೇ ನಾಲ್ವರಿಗೆ ನೋಟೀಸ್ ಕೂಡ ಜಾರಿ ಮಾಡಿದರು.

ಆದರೆ ಆ ಕ್ರಮ ಎಲ್ಲವೂ ಬರೀ ನೋಟೀಸ್ ಗೆ ಸಿಮೀತವಾಯಿತಾ ಎನ್ನುವ ಅನುಮಾನಗಳು ಬರುತ್ತಿವೆ. ಇದರ ಜೊತೆಗೆ ಮೂರು ಕೋಟಿ ತೆರಿಗೆ ಉಳಿಸಿಕೊಂಡ ಆ ಕಂಪನಿ ವಿರುದ್ಧ ಇದುವರೆಗೂ ಯಾಕೆ ಕಠಿಣ ಕ್ರಮಕ್ಕೆ ಮುಂದಾಗಿಲ್ಲ ಎನ್ನುವುದು ಕೂಡ ಇಲ್ಲಿ ಪ್ರಶ್ನಾರ್ಥಕ. ಇಲ್ಲಿ ಒಂದು ಕಂಪನಿ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ ಉಳಿದವರು ಭಯ ಬಿದ್ದು ತೆರಿಗೆಯನ್ನು ಫಟಾಫಟ್ ಅಂತ ಜಮಾ ಮಾಡುತ್ತಾರೆ.‌ಆಗ ಬೆಳಗಾವಿ ಪಾಲಿಕೆ ಖಜಾನೆ ಸಹ ತುಂಬುತ್ತದೆ.

ಇದನ್ನು ಇವರೇಕೆ ಕೇಳಲ್ಲ?

ಹಾಗೆ ನೋಡಿದರೆ ಅಧಿಕಾರಿಗಳ ಇಂತಹ ಲೋಪವನ್ನು ಪ್ರಶ್ನಿಸುವ ಕೆಲಸವನ್ನು ಪಾಲಿಕೆಯ ವಿರೋಧ ಪಕ್ಷದವರು ಮಾಡಬೇಕು. ಅವರು ಇಂತಹುದನ್ನು ಕೇಳುವ ಗೋಜಿಗೆ ಹೋಗಲ್ಲ. ವಿರೋಧ ಪಕ್ಷದವರು ಇಲ್ಲಿ ಆಡಳಿತದವರೊಂದಿಗೆ ಒಂಥರಾ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಂತೆ ಕಾಣುತ್ತದೆ.

ಇನ್ನು ಆಡಳಿತ ಪಕ್ಷದವರು ಎಲ್ಲಕ್ಕೂ ಅಧಿಕಾರಿಗಳ ತಪ್ಪನ್ನೇ ಸರಿ ಎನ್ನುವ ರೀತಿಯಲ್ಲಿ ಮಾತನಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಅಂದರೆ ಪಾಲಿಕೆಯಲ್ಲಿ ಅಧಿಕಾರಿಗಳು ಹೇಳಿದ್ದಕ್ಕೆ ಮಾತ್ರ ಗೋಣು ಅಲ್ಲಾಡಿಸುವ ಕೆಲಸವನ್ಬು ನಗರಸೇವಕರು ಮಾಡುತ್ತಿದ್ದಾರೆ‌

ಈ ಕಾರಣದಿಂದ ಬೆಳಗಾವಿ ಪಾಲಿಕೆಯಲ್ಲಿ ಅಭಿವೃದ್ಧಿ ಚರ್ಚೆ ಅಪರೂಪ ಎನ್ನುವಂತಾಗಿದೆ. ಅಚ್ಚರಿಯ ಸಂಗತಿ ಎಂದರೆ, ಪಾಲಿಕೆ ಸಭೆಯಲ್ಲಿ ಅನಗತ್ಯ ವಿಷಯವನ್ನು ಎಳೆದಾಡುವ ಬದಲು ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ನಡೆಸಬೇಕು ಎಂದು ಶಾಸಕ ಅಭಯ ಪಾಟೀಲರು ಬಿಜೆಪಿಯ ಕೆಲ ನಗರಸೇವಕರಿಗೆ ಒಂದಲ್ಲ ಹಲವು ಬಾರಿ ಹೇಳಿದ್ದಾರೆ.‌ಆದರೆ ಅವರ ಮಾತನ್ನು ಕೆಲವರು ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಬಿಡುವ ಕೆಲಸ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!