ಸಮಗ್ರ, ಸಮತೋಲಿತ ಅಭಿವೃದ್ಧಿ ಕ್ರಮಗಳಿಗೆ ಆದ್ಯತೆ: ಪ್ರೊ.ಗೋವಿಂದರಾವ್

ಅಸಮತೋಲನ ನಿವಾರಣಾ ಸಮಿತಿ ವಿಭಾಗಮಟ್ಟದ ಸಭೆ

ಬೆಳಗಾವಿ,

ಸರಕಾರವು ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು 2007-08 ರಿಂದ ಜಾರಿಗೊಳಿಸಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ಸದರಿ ವರದಿಯ ಪುನರ್ ವಿಮರ್ಶೆ ಮಾಡುವುದರ ಜತೆಗೆ ಸದ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಆಧರಿಸಿ ಹೊಸ ಮಾರ್ಗಸೂಚಿ ಅಥವಾ ಶಿಫಾರಸ್ಸುಗಳ ಅಗತ್ಯವಿದೆ. ಆದ್ದರಿಂದ ಸಮಿತಿಯು 40 – 50 ಸೂಚ್ಯಂಕಗಳನ್ನು ಪಟ್ಟಿ‌ ಮಾಡಿಕೊಂಡಿದ್ದು, ಅವುಗಳ ಆಧಾರದ‌ ಮೇಲೆ ವಿಸ್ತೃತವಾಗಿ ಅಧ್ಯಯನ ಕೈಗೊಂಡು ಅಗತ್ಯ ಕ್ರಮಗಳನ್ನು ಸಮಿತಿಯು ಶಿಫಾರಸ್ಸು ಮಾಡಲಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷರಾದ ಪ್ರೊ.ಎಂ.ಗೋವಿಂದರಾವ್ ಹೇಳಿದರು.

ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಗುರುವಾರ(ಫೆ.20) ಜರುಗಿದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ನಾಲ್ಕು ವಿಭಾಗಗಳಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿಂದ ಸಲಹೆ/ಅಭಿಪ್ರಾಯಗಳನ್ನು ಆಲಿಸಲಾಗುತ್ತಿದೆ. ಡಾ.ನಂಜುಂಡಪ್ಪ 2002 ಕ್ಕೆ ವರದಿ ಸಲ್ಲಿಸಿರುತ್ತಾರೆ. ಅವರ ವರದಿಯು 35 ಸೂಚ್ಯಂಕಗಳ ಆಧಾರದಲ್ಲಿ ರಚಿಸಲಾಗಿರುತ್ತದೆ. ಅತ್ಯಂತ ಹಿಂದುಳಿದ, ಹಿಂದುಳಿದ ತಾಲ್ಲೂಕುಗಳೆಂದು ವರ್ಗೀಕರಿಸಿದ್ದರು.
31 ಸಾವಿರ ಕೋಟಿ ಮೂಲಸೌಕರ್ಯಗಳಿಗೆ ಖರ್ಚು ಮಾಡಬೇಕು ಎಂದು ವರದಿಯಲ್ಲಿ ತಿಳಿಸಿದ್ದರು.

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ತಲಾ ಆದಾಯ ರಾಜ್ಯದ ಒಟ್ಟಾರೆ ತಲಾ ಆದಾಯಕ್ಕಿಂತ ಹೆಚ್ಚಿದೆ. ಬೆಂಗಳೂರಿನ ತಲಾ ಆದಾಯವು ಹೆಚ್ಚಿದ್ದು, ಇದರಿಂದ ರಾಜ್ಯದ ಒಟ್ಟಾರೆ ತಲಾ ಆದಾಯ ಹೆಚ್ಚಾಗಿರುತ್ತದೆ. ಆದರೆ‌ ಉಳಿದ ಜಿಲ್ಲೆಗಳ ಕೊಡುಗೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ ಎಂದು ಪ್ರೊ.ಗೋವಿಂದರಾವ್ ವಿವರಿಸಿದರು.

ನೀರಾವರಿಗೆ ಶೇ.25 ಹಾಗೂ ಗ್ರಾಮೀಣಾಭಿವೃದ್ಧಿಗೆ ಶೇ.21 ರಷ್ಟು ಖರ್ಚಾಗುತ್ತಿದೆ. ಉಳಿದ ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ನೀಡಬೇಕಿದೆ. ಕೃಷಿ ಆದಾಯ‌ ಈಗ ಶೇ.9 ರಷ್ಟಿದೆ. ಕೈಗಾರಿಕೆ, ಉತ್ಪಾದನೆ ಮತ್ತಿತರ ಕ್ಷೇತ್ರಗಳಿಂದ ಉತ್ತಮ ಆದಾಯ ಬರುತ್ತಿದೆ. ಶೇ.9 ರಷ್ಟು ಆದಾಯ ಪ್ರಮಾಣವಿರುವ ಕ್ಷೇತ್ರದಲ್ಲಿ ಶೇ.41 ರಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ಈ ಅಸಮತೋಲನವನ್ನು ನಿವಾರಿಸಬೇಕಿದೆ ಎಂದು ಗೋವಿಂದರಾವ್ ಅಭಿಪ್ರಾಯಪಟ್ಟರು.

ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ಆರ್ಥಿಕ ಇಲಾಖೆಯ ಕಾರ್ಯದರ್ಶಿ ವಿಶಾಲ್ ಆರ್., ಸರಕಾರದ ವತಿಯಿಂದ‌ ಅನುದಾನ ಘೋಷಣೆ ಜತೆಗೆ ಖಾಸಗಿ ವಲಯಗಳಾದ ಕೈಗಾರಿಕೆ, ಆಹಾರ ಸಂಸ್ಕಾರಣೆ ಮತ್ತಿತರ ಕ್ಷೇತ್ರಗಳಿಗೆ ಯಾವ ರೀತಿಯ ಉತ್ತೇಜನ ನೀಡಬೇಕು ಎಂಬುದನ್ನು ಅರಿತುಕೊಂಡು ಆ ಅಂಶಗಳನ್ನು ವರದಿಯಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.

ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟೆಣ್ಣವರ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿರುವುದಿಲ್ಲ; ಉದ್ಯೋಗಾಧಾರಿತ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ಸರಕಾರಿ ಶಾಲಾ-ಕಾಲೇಜುಗಳ ಗುಣಮಟ್ಟವನ್ನು ಖಾಸಗಿ ಮಾದರಿಯಲ್ಲಿ ಒದಗಿಸಬೇಕಿದೆ ಎಂದು ಪ್ರತಿಪಾದಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಮತ್ತು ನೀರಾವರಿ ಸೌಲಭ್ಯ ಒದಗಿಸುವ ಅಗತ್ಯವಿದೆ ಎಂದು ಶೆಟ್ಟೆಣ್ಣವರ ಹೇಳಿದರು.

ಸಮಿತಿಯ ಸದಸ್ಯರಾದ ಸೂರ್ಯನಾರಾಯಣ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಬಳಕೆ ಮತ್ತಿತರ ಕ್ಷೇತ್ರಗಳಲ್ಲಿ ಕೆಲವು ಜಿಲ್ಲೆಗಳು ಹಿಂದೆ ಇರುವುದಕ್ಕಿಂತಲೂ ಅಧೋಗತಿಗೆ ಇಳಿದಿವೆ. ಇಂತಹ ವಿಷಯಗಳ ಮೇಲೆ ಬೆಳಕು ಚೆಲ್ಲುವ ಅಗತ್ಯವಿದೆ ಎಂದರು.
ಕೇವಲ ಮೂಲಸೌಕರ್ಯ ಒದಗಿಸಿದರೆ ಸಾಲದು; ಸಮರ್ಪಕ ಅನುಷ್ಠಾನ ಮಾಡಬೇಕಿದೆ ಎಂದರು.

ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಖಾನಾಪುರ ಕ್ಷೇತ್ರದಲ್ಲಿ ಶೇ.50 ರಷ್ಟು ಅರಣ್ಯ ಪ್ರದೇಶವಿರುವುದರಿಂದ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ; ಕೆಲವು ಪಂಚಾಯಿತಿಗಳಲ್ಲಿ ಮೂವತ್ತಕ್ಕೂ ಅಧಿಕ ಗ್ರಾಮಗಳಿದ್ದು, ಸಣ್ಣ ಸಣ್ಞ ಗ್ರಾಮ ಪಂಚಾಯಿತಿ ರಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕೈಗಾರಿಕಾ ವಲಯದಲ್ಲಿ ಫೌಂಡ್ರಿ ಕ್ಲಸ್ಟ್ರ್, ಏರೋಸ್ಪೇಸ್, ಪ್ರವಾಸೋದ್ಯಮ, ಜವಳಿ, ಅಪೇರಲ್ಸ್, ಅಗ್ರೋ ಹಾಗೂ ಸಕ್ಕರೆ ಉತ್ಪಾದನೆ ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯು ಮುಂಚೂಣಿಯಲ್ಲಿದೆ.
ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ. ಕೃಷಿ ಸೇರಿದಂತೆ ಈ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ರೋಷನ್ ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಉದ್ಯಮಗಳ ಸ್ಥಾಪನೆಯಾಗಬೇಕಾದರೆ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕಾಗುತ್ತದೆ. ರಾಜ್ಯದಲ್ಲಿ ಅದರಲ್ಲೂ ಅತ್ಯುತ್ತಮ ಹೂಡಿಕೆ ತಾಣವಾಗಿರುವ ಬೆಂಗಳೂರಿನಲ್ಲೂ ಕಾನೂನು ಸುವ್ಯವಸ್ಥೆ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಖಾಸಗಿ ಹೂಡಿಕೆದಾರರು ಬರಬೇಕಾದರೆ ರಸ್ತೆ, ನೀರು ಸೇರಿದಂತೆ ಎಲ್ಲ ಮೂಲಸೌಕರ್ಯಗಳ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಸರಕಾರದ‌ ಜತೆ ಖಾಸಗಿ ವಲಯವೂ ಕೈಜೋಡಿಸಬೇಕಿದೆ ಎಂದರು.

ಸಮಿತಿಯ ಸದಸ್ಯರಾದ ಸೂರ್ಯನಾರಾಯಣರಾವ್ ಎಂ.ಎಚ್., ಡಾ.ಎಸ್.ಡಿ.ಬಾಗಲಕೋಟಿ, ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ್, ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಡಾ.ಆರ್.ವಿಶಾಲ್, ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸಭೆಯಲ್ಲಿ ಉಪಸ್ಥಿತರಿದ್ದರು.

.

.


Leave a Reply

Your email address will not be published. Required fields are marked *

error: Content is protected !!