ಪ್ರೀತಿಸಿದವಳನ್ನು ಕೈಹಿಡಿಯುವ ಮೊದಲು ಜಜ್ಜಿ ಕೊಲೆ!
ತಂದೆ-ಮಗನಿಂದ ಮದುವೆ ನಿಶ್ಚಿತಾರ್ಥಗೊಂಡ ಮಗನ ಬರ್ಬರ ಹತ್ಯೆ
ಬೆಳಗಾವಿ: ಪ್ರೀತಿಸಿದ ಯುವತಿಯನ್ನು ವರಿಸುವ ಮೊದಲು, ತಮ್ಮದೇ ಕುಟುಂಬದ ಶಾಪಕ್ಕೆ ಬಲಿಯಾದ ಯುವಕನ ಸಾವಿನ ಕಥೆ ಇಲ್ಲಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಮಂಜುನಾಥ ಉಳ್ಳಾಗಡ್ಡಿ (25) ಯನ್ನು ತಂದೆ ನಾಗಪ್ಪ ಉಳ್ಳೆಗಡ್ಡಿ (63) ಮತ್ತು ಸಹೋದರ ಗುರುಬಸಪ್ಪ ಉಳ್ಳೆಗಡ್ಡಿ (28)! ಹತ್ಯೆ ಮಾಡಿದ ಘಟನೆ ಚಿಕ್ಕನಂದಿಹಳ್ಳಿಯಲ್ಲಿ ನಡೆದಿದೆ. .

ಮಂಜುನಾಥ ಪ್ರೀತಿಸಿದ ಯುವತಿಯೊಂದಿಗೆ ಮದುವೆಗೆ ಪಟ್ಟು ಹಿಡಿದರೂ, ಮೊದಲಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೂ, ಅವರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥ ಕಾರ್ಯವೂ ನೆರವೇರಿತ್ತು. ಮದುವೆ ಸಮಾರಂಭದ ಸಿದ್ಧತೆಗಳು ನಡೆದರೂ, ಮಂಜುನಾಥನ ಕುಡಿತದ ಚಟ ತೀವ್ರವಾಗುತ್ತಲೇ ಹೋಗಿತ್ತು. ಕುಡಿದು ಬಂದು ಮನೆಯವರ ಜೊತೆ ನಿತ್ಯ ಗಲಾಟೆ ಮಾಡುತ್ತಿದ್ದ. ಕಳೆದ ರಾತ್ರಿ ಈ ಅಸಭ್ಯತನವು ಹಂತಕತನದ ಅಂಚಿಗೆ ತಲುಪಿತು!
ತಾಯಿ ಮೇಲೆ ಕೈಬಿಟ್ಟ ಆತ, ಕೊನೆಯ ಬಾರಿ!. .
ಕಳೆದ ರಾತ್ರಿ ಮಂಜುನಾಥ ತಾಯಿ ಮೇಲೆ ಹಲ್ಲೆ ನಡೆಸಿದಾಗ, ಮನೆಯಲ್ಲಿ ಈಗಾಗಲೇ ಕೆರಳಿದ್ದ ಅಸಹನೆಯ ಕಿಡಿಗೆ ಬೆಂಕಿ ಬಿದ್ದಿತು. ತಂದೆ ಮತ್ತು ಸಹೋದರ ಸೇರಿ ಆತನನ್ನು ಕೆಳಗೆ ಹಾಕಿ, ಕಲ್ಲು-ಇಟ್ಟಿಗೆಗಳಿಂದ ಹಲ್ಲೆ ನಡೆಸಿದರೆಂದು ಸ್ಥಳೀಯರು ಹೇಳಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜುನಾಥನ ಪ್ರಾಣಪಕ್ಷಿ ಹಾರಿ ಹೋಗಿತ್ತು.
” ಹಣಕ್ಕಾಗಿ ಕುಡಿದು ಗಲಾಟೆ ಮಾಡುತ್ತಿದ್ದ”
ಮಂಜುನಾಥ ಮದುವೆಗಾಗಿ 50,000 ರೂ. ಬೇಡಿಕೆ ಇಟ್ಟಿದ್ದ. ಮನೆಯಿಂದ ಹಣ ಸಿಕ್ಕಿಲ್ಲ. ಇದರಿಂದಾಗಿ ಕುಡಿದು, ಮನೆಯವರನ್ನು ನಿತ್ಯ ಪೀಡಿಸುತ್ತಿದ್ದನು. “ಕಳೆದ ಒಂದು ವರ್ಷದಿಂದ ಪ್ರಿಯತಮೆ ಜೊತೆ ಮದುವೆ ಕನಸು ಕಾಣುತ್ತಿದ್ದ. ಈ 12ನೇ ತಾರೀಖಿನಂದು ಮದುವೆ ನಡೆಯಬೇಕಿತ್ತು,” ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ..
ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ!
ಮಂಜುನಾಥನ ನಿರುದ್ಯೋಗ, ಕುಡಿತದ ಚಟ, ಮತ್ತು ದೈನಂದಿನ ಗಲಾಟೆ ಕುಟುಂಬದಲ್ಲಿ ತೀವ್ರ ಉದ್ವಿಗ್ನತೆ ಉಂಟುಮಾಡಿತ್ತು. ಕುಡಿತದ ಆಟ ಕೊನೆಗೂ ಆತನನ್ನೇ ಉಂಡಿತ್ತು!
ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಂದೆ ಮತ್ತು ಸಹೋದರನನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.