
ಬೆಳಗಾವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ – 15 ದಿನಗಳಲ್ಲಿ ಪರಿಹಾರ ನೀಡಲು ಸೂಚನೆ
ಬೆಳಗಾವಿ, ಏಪ್ರಿಲ್ 3: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ನೀರಿನ ಸಮಸ್ಯೆಗೆ 15 ದಿನಗಳ ಗಡುವು ನೀಡಲಾಗಿದೆ. ಮಹಾಪೌರ ಮಂಗೇಶ್ ಪವಾರ, ಉಪಮಹಾಪೌರ ವಾಣಿ ವಿಲಾಸ್ ಜೋಶಿ ಹಾಗೂ ಆಯುಕ್ತೆ ಶುಭಾ ಬಿ. ಅವರ ಉಪಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ನಗರದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ತೀವ್ರಗೊಂಡಿದ್ದು, ಜನರು ಬೆಳಗ್ಗೆಯಿಂದಲೇ ಬಾವಿಗಳು, ಹೊಂಡಗಳು ಅಥವಾ ಟ್ಯಾಂಕರ್‌ಗಳ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಎಲ್. ಆಂಡ್ ಟಿ. ಕಂಪನಿಯ ಕೆಲಸದ ಶೈಲಿ, ಟ್ಯಾಂಕರ್ ನೀರಿನ ಅವಲಂಬನೆ, ನೀರಿನ ಶುದ್ಧತೆ ಮತ್ತು ಕಾಮಗಾರಿ ವಿಳಂಬ ವಿಷಯಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.


ನಗರಸೇವಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಗಳನ್ನು ಅಗೆಯುವ ಎಲ್. ಆಂಡ್ ಟಿ. ಕಾಮಗಾರಿ ತಕ್ಷಣ ಆರಂಭವಾಗುತ್ತದಾದರೂ, ದುರಸ್ತಿ ಮಾಡಲು ವರ್ಷಗಳು ಬೇಕೆ? ಎಂದು ಪ್ರಶ್ನಿಸಿದರು. ಕುಡಿಯುವ ನೀರಿನಲ್ಲಿ ಕಲುಷಿತ ಅಂಶಗಳು ಮಿಶ್ರಣವಾಗುತ್ತಿರುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ನಗರಸೇವಕಿ ರೇಖಾ ಹೂಗಾರ ಆಕ್ಷೇಪಿಸಿದರು.
ಮೇಯರ್ ಸೂಚನೆ
ಮಹಾಪೌರರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ, ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ಪರಿಹಾರ ನೀಡುವಂತೆ ಹೇಳಿದರು.

ಮಹಾನಗರ ಪಾಲಿಕೆ ಈಗ 35 ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು, 24 ಗಂಟೆಗಳ ನೀರಿನ ಪೂರೈಕೆಗಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಆಯುಕ್ತರು ಭರವಸೆ ನೀಡಿದರು.
ಹಿಡಿದ ಕೆಲಸ ಪೂರ್ಣಗೊಳಿಸಿ. .ಉಪಮೇಯರ್
L AND T ಯವರು ಒಂದುಕಡೆಗೆ ಆರಂಭಿಸಿದ ಕಾಮಗಾರಿಯನ್ನು ಪೂರ್ಣಗೊಳಿಸಿ ನಂತರ ಬೇರೆಡೆ ಆರಂಭಿಸಬೇಕು ಎಂದು ಉಪಮೇಯರ್ ವಾಣಿ ಜೋಶಿ ಸೂಚಿಸಿದರು.

ಆದರೆ ಈಗ ಎಲ್ಲೆಡೆ ಅರ್ಧಮರ್ಧ ಕೆಲಸ ಆಗುತ್ತಿರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧ ಪಟ್ಟವರಿಗೆ ಸೂಚನೆ ನೀಡಿದರು.