ಬೆಳಗಾವಿ.
.
ಕೇವಲ ಒಂದು ವರ್ಷದಲ್ಲಿ 2202 ಬೀದಿ ನಾಯಿಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ಮಾಡಲು ಪಾಲಿಕೆ ಖರ್ಚು ಮಾಡಿದ್ದು ಬರೋಬ್ವರಿ 25 ಲಕ್ಷ 4 ಸಾವಿರದಾ 370 ರೂ.!
ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲೂ ಕೃಷ್ಣನ ಲೆಕ್ಕ ಸೇರಿದೆ ಎನ್ನುವ ಅನುಮಾನ ಬಾರದೇ ಇರದು.
ಈ ಲೆಕ್ಕವನ್ನು ಗಮನಿಸಿದರೆ ಪಾಲಿಕೆಯಲ್ಲಿ ಬೌಬೌ ಲೆಕ್ಕ ದಾರಿತಪ್ಪಿದೆ ಎನ್ನುವ ಸಂಶಯ ಮೂಡುವುದು ಸಹಜ.
ಪಾಲಿಕೆ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಕನಿಷ್ಟ 10 ರಿಂದ 15 ಬೀದಿ ನಾಯಿಗಳನ್ನು ಹಿಡಿಯಲಾಗುತ್ತದೆ ಅಂತೆ. . ಆದರೆ ವಾಸ್ತವವಾಗಿ ದಿನಕ್ಕೆ ಕೇವಲ 4 ರಿಂದ 5 ನಾಯಿಗಳನ್ನು ಹಿಡಿಯಲಾಗುತ್ತದೆ ಎನ್ನುವ ಮಾಹಿತಿ Ebelagavi ಡಾಟ್ ಕಾಮ್ ಗೆ ಲಭ್ಯವಾಗಿದೆ

ಏಕೆಂದರೆ ಹಿಡಿದ ನಾಯಿಗಳನ್ನು ಇಡುವ ಎಬಿಸಿ ಕೇಂದ್ರದ ಸಾಮರ್ಥ್ಯ ಕೂಡ ಅಷ್ಟಿಲ್ಲ ಎನ್ನುವುದು ಪಾಲಿಕೆಯ ಅಧಿಕಾರಿಗಳ ಮಾಹಿತಿ. ಹೀಗಾಗಿ ಈ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೌಬೌ ಲೆಕ್ಕ ಎಲ್ಲಿಯೋ ತಪ್ಪಿದೆ ಎನ್ನುವ ಅನುಮಾನ ಬಾರದೇ ಇರದು.
ಪಾಲಿಕೆಯಲ್ಲಿ ಗುತ್ತಿಗೆ ಕೊಟ್ಟರೆ ಅವರು ಅದನ್ನು ಸರಿಯಾಗಿ ಮಾಡುತ್ತಿದ್ದಾರೋ ಇಲ್ಲವೋ ಎನ್ನುವುದನ್ನು ಕೇಳುವ ಗೋಜಿಗೆ ಯಾರು ಹೋಗಲ್ಲ ಎನ್ನುವ ಮಾತಿದೆ.
ಮೇಯರ್ ಮತ್ತು ಪಾಲಿಕೆ ಆಯುಕ್ತರು ಇಂತಹ ದಾರಿ ತಪ್ಪಿದ ಲೆಕ್ಕವನ್ಬುಸರಿದಾರಿಗೆ ತರುವ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.
ಸುಮ್ಮನೆ ಬೆಳಗಾವಿ ನಗರದಲ್ಲಿ ವಾಯು ವಿಹಾರಕ್ಕೆಂದು ಹೊರಟರೆ ಸಾಕು ಬೌ ಬೌ ನಿಮ್ಮನ್ನು ಕಚ್ವದೇ ಇರದು.ಅಂದರೆ ಅಷ್ಟರ ಮಟ್ಡಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
ಮಕ್ಕಳು ಶಾಲೆಗೆ ಹೋಗಿ ಬರುವುದು ಮತ್ತು ಸವಾರರು, ದ್ವಿಚಕ್ರ ವಾಹನದಲ್ಲಿ ಹೋಗುವುದು ಕೂಡ ಕಠಿಣವಾಗಿದೆ. ಏಕೆಂದರೆ ಹಿಂಡು ಗಟ್ಟಲೆ ಇರುವ ನಾಯಿಗಳು ಬೆನ್ನತ್ತಿ ಬಿಡುತ್ತವೆ.
ಇನ್ನೂ ಗಮನಿಸಬೇಕಾದ ಸಂಗತಿ ಎಂದರೆ, ಸ್ಮಶಾನದಲ್ಲೂ ಕೂಡ ಕನಿಷ್ಟ 20 ಬೀದಿನಾಯಿಗಳು ಇರುತ್ತವೆ.ಹೀಗಾಗಿ ಅಂತ್ಯಕ್ರಿಯೆಗೆ ಹೋಗುವವರು ಭಯ ಪಡಬೇಕಾದ ಸ್ಥಿತಿ

ಇಲ್ಲಿ ನಿಯಮದ ಪ್ರಕಾರ ದಿನಕ್ಕೆ 10 ರಿಂದ 15 ನಾಯಿಯನ್ನು ಹಿಡಿದು ಶಸ್ತ್ರ ಚಿಕಿತ್ಸೆ ಮಾಡಬೇಕು. ಆದರೆ ಇಲ್ಲೂ ಕೂಡ ಯಾರದೊ ರೊಕ್ಕ ಮತ್ಯಾರದ್ದೋ ಜಾತ್ರೆ ಎನ್ನುವಂತೆ ಆಗುತ್ತಿದೆ ಎನ್ನುವ ಅನುಮಾನ ಬಹುತೇಕರನ್ನು ಕಾಡುತ್ತಿದೆ.
ಪಾಲಿಕೆಯ ಬೌ ಬೌ ಲೆಕ್ಕಗಳ ಬಗ್ಗೆ ಅನುಮಾನ ಪಟ್ಟ ಹಣಕಾಸು ಸ್ಥಾಯಿ ಸಮಿತಿಯ ಸಭೆಯಲ್ಲಿ ಇದರ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು ಎಂದು ಗೊತ್ತಾಗಿದೆ.
ಅದರ ಬಗ್ಗೆ ಸದಸ್ಯರು ಅನುಮಾನ ಪಟ್ಟು ದಾಖಲೆ ಎಲ್ಲಿ ಎಂದು ಕೇಳಿದಾಗ ಅಧಿಕಾರಿಗಳು ತಡವರಿಸಿದರಂತೆ
ಟೆಂಡರ್ದಲ್ಲಿ ಏನಿತ್ತು?
ಬೆಳಗಾವಿಯಲ್ಲಿ ಬೀದಿ ನಾಯಿ ಹಾವಳಿಗಳ ನಿಯಂತ್ರಣಕ್ಕೆ 2022 ಮಾರ್ಚ 22 ರಂದು ಟೆಂಡರ್ ಕರೆಯಲಾಗಿತ್ತು, ಅದರಲ್ಲಿ ಅಭಿಲಾಶ್ ಎಚ್.ಆರ್. ಮತ್ತು ದೀಲಿಪ್ ಬಾಫನಾ ಎಂಬುವರು ಭಾಗವಹಿಸಿದ್ದರು,
ಇಲ್ಲಿ ಅಭಿಲಾಶ್ ಅವರು ಒಂದು ಗಂಡು ನಾಯಿಗೆ 1550 ರೂ ಮತ್ತು ಗಂಡು ನಾಯಿಗೆ 1590 ರೂ ದರ ನಿಗದಿ ಮಾಡಿದ್ದರೆ, ಬಾಪನಾ ಅವರು 1960 ರೂ ನಿಗದಿ ಮಾಡಿದ್ದರು.
ಹೀಗಾಗಿ ಕಡಿಮೆ ದರ ನಿಗದಿ ಮಾಡಿದ್ದವರಿಗೆ ಟೆಂಡರನ್ನು ನೀಡಲಾಗಿತ್ತು.
2022 ಜುಲೈ 1 ರಂದು ಟೆಂಡರ್ ನೀಡಲಾಗಿತ್ತು. ಪಾಲಿಕೆಯ ದಾಖಲೆಗಳ ಪ್ರಕಾರ 2202 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅದಕ್ಕೆ 25,04,370 ರೂ ವೆಚ್ಚ ಮಾಡಲಾಗಿದೆ. ಈಗ ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಆಯುಕ್ತರು ತನಿಖೆಗೆ ಆದೇಶ ಮಾಡಿದರೆ ಯಾರಿಗೆ ಶಸ್ತ್ರ ಚಿಕಿತ್ಸೆ ಆಗುತ್ತೋ ಭಗವಂತನೆ ಬಲ್ಲ.