ನೀವು ಮನೆಯಲ್ಲಿ ಕುಳಿತುಕೊಂಡು ಸರ್ಕಾರಿ ಸಂಬಳ ಪಡೆಯಬೇಕೆ? ಮತ್ತು ಸರ್ಕಾರಿ ಸಂಬಳದ ಜೊತೆಗೆ ಗಿಂಬಳವೂ ಬೇಕೆ?
ಹಾಗಿದ್ದರೆ ನೀವು ಉಳಿದ ಜಿಲ್ಲೆಗಿಂತ ಬೆಳಗಾವಿಗೆ ಬಂದರೆ ಈ ಸೌಲಭ್ಯ ನಿಮಗೂ ಸಿಗಬಹುದು.
ಮನೆಯಲ್ಲಿಯೇ ಕುಳಿತು ಮನೆಗೆಲಸದ ಜೊತೆಗೆ ಸರ್ಕಾರಿ ಸಂಬಳ ಪ್ರತಿ ತಿಂಗಳು ಪಡೆಯಬೇಕೆಂದರೆ ನೀವು ಹೈಲೆವೆಲ್ ವಸೂಲಿ ಹೊಂದಿರಬೇಕು
ಅದನ್ನು ಬಿಟ್ಟು ಸರ್ಕಾರಿ ಸಂಬಳದ ಜೊತೆಗೆ ಗಿಂಬಳವೂ ಬೇಕು ಎಂದರೆ ನೀವು ಕಚೇರಿ ತುಂಬ ಏಜೆಂಟರನ್ನು ಇಟ್ಟುಕೊಂಡಿರಬೇಕು.
ಮೊದಲು RTO ಕಚೇರಿಯಲ್ಲಿ ಏಜೆಂಟರ ಹಾವಳಿ ಇರುತ್ತಿತ್ತು. ಎಕೆಂದರೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಏಜೆಂಟರು ಫೈಲ ತೆಗೆದುಕೊಂಡು ಹೋದರೆ ಲೈಸನ್ಸ್ ಸಿಗುತ್ತಿತ್ತು.
ಆದರೆ ಈಗ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿ ತುಂಬಿಕೊಂಡಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇಲ್ಲಿ ಸರ್ಕಾರ ಎಷ್ಟೇ ONLINE ವ್ಯವಸ್ಥೆ ಮಾಡಿದರೂ ಕೂಡ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಕಡಿಮೆ ಮಾಡಲು ಆಗಿಲ್ಲ.
ಅಚ್ಚರಿ ಸಂಗತಿ ಎಂದರೆ, ಭ್ರಷ್ಟರನ್ನು ಹೆಡಮುರಿ ಕಟ್ಟುವ ಲೋಕಾಯುಕ್ತರ ಸುತ್ತಮುತ್ತ ಇರುವ ಕಚೇರಿಗಳಲ್ಲಿ ಎಜೆಂಟರು ತುಂಬಿಕೊಂಡಿದ್ದಾರೆ. ಇಲ್ಲಿ ಎಜೆಂಟರನ್ನು ಬಿಟ್ಟು ನೇರವಾಗಿ ತಮ್ಮ ಕಡತ ತೆಗೆದುಕೊಂಡು ಕಚೇರಿಯೊಳಗೆ ಕಾಲಿಟ್ಟರೆ ನಾಳೆ ಬಾ ಉತ್ತರ ರೆಡಿ ಇರುತ್ತದೆ..
ಇಲ್ಲಿ ಸಿಂಪಲ್ ಆಗಿ ಉದಾಹರಣೆ ಸಮೇತ ಹೇಳಬೇಕೆಂದರೆ, CTS ಉತಾರಕ್ಕೆ 500 rs. ಮತ್ತು ಭೋಜಾ ಕಡಿಮೆ ಮಾಡಿದ ದಾಖಲೆ ಕೊಡಲು ಸಹ 300 ರೂ ಕೊಡಲೇಬೇಕು.
ಇವರಿಗೆ ಕಚೇರಿಯಲ್ಲಿರುವ ಸಿಸಿಟಿವಿ ಮತ್ತು ಪಕ್ಕದಲ್ಲೇ ಇರುವ ಲೋಕಾಯುಕ್ತ ಕಚೇರಿಯ ಕನಿಷ್ಟ ಹೆದರಿಕೆ ಕೂಡ ಈ ಸಿಬ್ಬಂದಿಗಳಿಗಿಲ್ಲ ಎನ್ನುವುದು ಸತ್ಯ.
ಅಚ್ಚರಿಯ ಸಂಗತಿ ಎಂದರೆ, ಹಳೆಯ ಜಿಲ್ಲಾ ಪಂಚಾಯತಿ ಕಟ್ಟಡದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಚೇರಿ ಇದೆ. ಅಲ್ಲಿಯೇ ನಗರ ಭೂ ಮಾಪನ ಇಲಾಖೆಯೂ ಇದೆ, ಇಲ್ಲಿನ ಸಿಬ್ಬಂದಿಗಳಿಗೆ ದುಡ್ಡೇ ದೊಡ್ಡಪ್ಪ.!
ಎಜೆಂಟರ ಮೂಲಕ ಕಡತ ಹೋದರೆ ಎಲ್ಲವೂ ಫಟಾಪಟ್ ಮಾಡಿಕೊಡುತ್ತಾರೆ. ಇನ್ನು ನೇರವಾಗಿ ಹೋಗಿ ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದು ಹೊರಟರೆ ಬ್ರಹ್ಮ ಬಂದರೂ ಆಗೋದೇ ಇಲ್ಲ.ಉಪನೋಂದಣಿ ಕಚೇರಿಯಲ್ಲಿನ ಪರಿಸ್ಥಿತಿ ಕೇಳೊದೇಬೇಡ. ಈ ಕಚೇರಿಯ ಹೊರಗಡೆ ಏಜೆಂಟರು ಠಿಕಾಣಿ ಹೂಡಿರುತ್ತಾರೆ. ಯಾರಾದರೂ ದಾಖಲೆ ಹಿಡಿದುಕೊಂಡು ಹೊರಟರೆ ಏಜೆಂಟರು ಏನಾಗಬೇಕಿತ್ತು ಎನ್ನುವ ಮೂಲಕ ಗಾಳ ಹಾಕುವ ಕೆಲಸ ಮಾಡುತ್ತಾರೆ.
ಕಾಂಚಾಣ ಝಣ ಝಣ..
ಇನ್ನು ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ರೀತಿಯ ಕರ್ಮಕಾಂಡ ಮನೆ ಮಾಡಿದೆ. ಇಲ್ಲಿ ಆಯುಕ್ತರು ಮತ್ತು ನಗರಸೇವಕರ ದಿಕ್ಕು ತಪ್ಪಿಸುವ ಕೆಲಸವನ್ನು ಕೆಲವೇ ಕೆಲ ಆಧೀನ ಸಿಬ್ಬಂದಿಗಳು ಮಾಡುತ್ತಿರುವುದು ಬೆಳಕಿಗೆ ಬರತೊಡಗಿವೆ. ಇಲ್ಲಿ ಉಳಿದ ವಿಷಯಕ್ಕಿಂತ ನಿಯಮ ಉಲ್ಲಂಘನೆ ಮಾಡಿ ನಿರ್ಮಿಸಿದ ಕಟ್ಟಡಗಳ ಬಗ್ಗೆ ಕ್ರಮ ತೆಗೆದು ಕೊಳ್ಳಬೇಕಾದವರು ಆಯುಕ್ತರ ಗಮನಕ್ಕೆ ಬಾದರೇ ಸೆಟಲ್ಮೆಂಟಗೆ ಹೊರಟಿರುವುದು ಚರ್ಚಯ ವಸ್ತುವಾಗಿದೆ.
ಇಲ್ಲಿ ಕೆಲವರು ಉದ್ದೇಶ ಪೂರ್ವಕವಾಗಿ ಸಚಿವರ ಮತ್ತು ಶಾಸಕರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎನ್ನುವ ಮಾತು ಕೇಳಿ ಬರುತ್ತಿದೆ.ಅಷ್ಟೇ ಅಲ್ಲ ಎಲ್ಲ ನಗರಸೇವಕರು ನನ್ನ ಮಾತು ಕೇಳ್ತಾರೆ ಎಂದು ಹೇಳಿ ಕೆಲವರು ವಸೂಲಿ ನಡೆಸಿರುವ ಸುದ್ದಿ ಪಾಲಿಕೆಯಲ್ಲಿ ರಿಂಗಣಿಸುತ್ತಿದೆ ಕೆಲವೊಂದು ಅಕ್ರಮ ಕಟ್ಟಡಗಳ ಬಗ್ಗೆ ಆಯುಕ್ತರು ತಮ್ಮ ಕೋರ್ಟನಲ್ಲಿಯೇ ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿಯೇ ಅಂತಹ ಕಟ್ಟಡಗಳಿಗೆ ಕೆಲ ದಾಖಲಾತಿ ಒದಗಿಸಿದ್ದು ಈಗ ವಿವಾದಕ್ಕೀಡು ಮಾಡುವ ಸಾಧ್ಯತೆ ಇದೆ. ಈ ಸಂಗತಿ ಗೊತ್ತಾದ ಕೂಡಲೇ ಕೆಲ ಕಡತಗಳ ಬಗ್ಗೆ ನಗರಸೇವಕರು ಪ್ರಶ್ನೆ ಮಾಡುತ್ತಿದ್ದಾರೆ, ಮತ್ತೊಂದು ಸಂಗತಿ ಎಂದರೆ ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ವಿಚಾರಣೆ ನಡೆಸಿ 321 ನಿಯಮದ ಪ್ರಕಾರ ನೋಟೀಸ್ ಜಾರಿ ಮಾಡಿದ್ದಾರೆ. ಆದರೆ ಅದರ ಬಗ್ಗೆ ಎಷ್ಟು ಕ್ರಮ ತೆಗೆದು ಕೊಳ್ಳಲಾಗಿದೆ ಎನ್ನುವುದನ್ನು ನೋಡಹೊರಟರೆ ಉತ್ತರ ಶೂನ್ಯ.
ಅಂದರೆ ಇಲ್ಲಿ ಕೂಡ ಕಾನೂನಿನಲ್ಲಿ ಅನುಕೂಲತೆ ಮಾಡಿಕೊಡುವ ಕೆಲಸ ನಡೆದಿದ್ದು ಸ್ಪಷ್ಟವಾಗಿದೆ. ಒಟ್ಟಾರೆ ಗಡಿನಾಡಿನಲ್ಲಿ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.