ಬೆಂಗಳೂರು. ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ ಸುಧಾಕರ್ ಅವರನ್ನು ಸಚಿವ ಪದವಿಯಿಂದ ವಜಾ ಮಾಡುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ. ಈ ಬಗ್ಗೆ ಮಹಾಸಬಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಸಚಿವ ದಿನೇಶ ಗುಂಡೂರಾವ್ ಅವರಿಗೆ ಮನವಿ ಪತ್ರವನ್ನು ಕಳಿಸಿಕೊಟ್ಟಿದ್ದಾರೆ,
ಜಮೀನು ವಿಷಯದಲ್ಲಿ ಸಚಿವ ಸುಧಾಕರ ಅವರು ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ. ಇದು ಅವರ ಸಂವಿಧಾನ ವಿರೋಧಿ ನೀತಿಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ತೆಗೆದುಕೊಂಡ ಪ್ರತಿಜ್ಞಾವಿಧಿಯನ್ನು ಸಚಿವ ಸುಧಾಕರ ಅವರು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಒಂದು ಕ್ಷಣ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದ್ದಾರೆ.
ಪ್ರತಿಜ್ಞಾವಿಧಿ ಸಂದರ್ಭದಲ್ಲಿ ಸಚಿವ ಸುಧಾಕರ ಅವರು, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುತ್ತೇನೆ, ನಾನು ನಿಷ್ಠೆಯಿಂದ ಮತ್ತು ರಾಜ್ಯದ ಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಆತ್ಮಸಾಕ್ಷಿಯಾಗಿ ನಿರ್ವಹಿಸುತ್ತೇನೆ ಎಂದು ಹೇಳಿ ಪ್ರತಿಜ್ಞೆ ಸ್ವೀಕರಿಸಿದ್ದರು. ಅಷ್ಟೇ ಅಲ್ಲ ಸಂವಿಧಾನ ಮತ್ತು ಕಾನೂನಿನ ಪ್ರಕಾರ ಎಲ್ಲಾ ರೀತಿಯ ಜನರನ್ನು ಸಮಾನವಾಗಿ ಕಾಣುತ್ತೇನೆ ಮತ್ತು ಯಾವುದೇ ದ್ವೇಷವಿಲ್ಲದೇ ಕಾರ್ಯನಿರ್ವಹಣೆ ಮಾಡುತ್ತೇನೆ ಎಂದು ಹೇಳಿದ್ದರು .
ಆದರೆ ಈಗ ಸಚಿವರು ನಡೆದುಕೊಳ್ಳುತ್ತಿರುವ ರೀತಿ ಸಂಪೂರ್ಣ ತದ್ವಿರುದ್ಧವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮನವಿ ಮಾಡಿಕೊಂಡಿದ್ದಾರೆ