ಬೆಳಗಾವಿ:
ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದ ನಿಮಿತ್ತ ಜಿಲ್ಲೆಯ ಐದು ಲಕ್ಷ ಮನೆಗಳಿಗೆ ಅಭಿಯಾನದ ರೂಪದಲ್ಲಿ ಪವಿತ್ರ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರ ಮತ್ತು ಆಮಂತ್ರಣ ಪತ್ರಿಕೆ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕೋಶಾಧ್ಯಕ್ಷರಾಗಿರುವ ಕೃಷ್ಣ ಭಟ್ಟ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಉತ್ತರ, ದಕ್ಷಿಣ ನಗರಗಳು ಸೇರಿದಂತೆ ಗ್ರಾಮಾಂತರ, ಖಾನಾಪುರ ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ ಸಹಿತ ಏಳು ತಾಲೂಕುಗಳು ಮತ್ತು 851 ಗ್ರಾಮಗಳ ಐದು ಲಕ್ಷ ಮನೆಗಳಿಗೆ ಜ.1ರಿಂದ 15ರವರೆಗೆ ಈ ಅಭಿಯಾನ ನಡೆಯಲಿದೆ ಎಂದರು.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಐತಿಹಾಸಿಕವಾಗಿದ್ದು, ದೇಶದಾದ್ಯಂತ ಭಕ್ತಿಭಾವದಿಂದ ಆಚರಿಸಲು ನಿರ್ಧರಿಸಲಾಗಿದೆ. ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಸಾಕಷ್ಟು ರಾಮಭಕ್ತರು ಭಾಗಿಯಾಗಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ಬಹಳಷ್ಟು ಭಕ್ತರು ನಿಧಿ ಸಮರ್ಪಿಸಿದ್ದಾರೆ. ಅವರೆಲ್ಲರಿಗೆ ಕೃತಜ್ಞತೆ ಸಲ್ಲಿಸುವ ಮನೋಭಾವದಿಂದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಿಂದು ಸಮಾಜದ ಬಂಧು ಭಗಿನಿರಯರ ಸಹಯೋಗದೊಂದಿಗೆ ಮನೆ ಮನೆಗೆ ತೆರಳಿ ಆಮಂತ್ರಣ ನೀಡಲಾಗುತ್ತದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ಹಿಂದು ಸಮಾಜ ಸುಮಾರು 3.500 ಕೋಟಿ ರೂ.ಗಳ ನಿಧಿ ಅರ್ಪಿಸಿದ್ದಾರೆ. ಈಗ ಮನೆ ಮನೆಗೆ ತೆರಳಿ ಆಮಂತ್ರಣ ನೀಡುವ ವೇಳೆ ನಾವು ಯಾವುದೇ ರೂಪದಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿಲ್ಲ. ಭಕ್ತರು ಸ್ವ ಇಚ್ಛೆಯಿಂದ ಕಾಣಿಕೆ ಎಂದು ಒತ್ತಾಯಿಸಿ ನೀಡಿದರೆ ಅದನ್ನು ಟ್ರಸ್ಟಿನ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುವುದು. ಯಾರಾದರೂ ರಾಮ ಮಂದಿರದ ಹೆಸರಿನಲ್ಲಿ ಹಣ ಸಂಗ್ರಹಿಸಿ ದುರುಪಯೋಗ ಪಡಿಸಿಕೊಂಡರೆ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಈ ಅಭಿಯಾನ ಯಶಸ್ವಿಯಾಗಲು ಡಿ.8ರಂದು ಅಯೋಧ್ಯೆಯಿಂದ ಬಂದ ಪವಿತ್ರ ಅಕ್ಷತೆ ಕಳಸವನ್ನು ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದ ಕಪಿಲೇಶ್ವರ ಮಂದಿರದಲ್ಲಿ ಸಾವಿರಾರು ಭಕ್ತರು ಭಕ್ತಿಯಿಂದ ಸ್ವಾಗತಿಸಿ, ಪೂಜಗೈದು ಪಲ್ಲಕ್ಕಿಯಲ್ಲಿ ಪವಿತ್ರ ಕಳಶವನ್ನು ಇಟ್ಟು ಮೆರವಣಿಗೆ ಮೂಲಕ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯ ಸಸಮರಸತಾ ಭವದಲ್ಲಿ ಇರಿಸಲಾಗಿದೆ. ಪ್ರತಿನಿತ್ಯ 7-30ರಿಂದ 8-30ರವರೆಗೆ ಭಕ್ತಿಯಿಂದ ಹನುಮಾನ ಚಾಲೀಸಾ ಪಠಣ ಮಾಡಿ, ಪೂಜೆ ಮಾಡಲಾಗುತ್ತಿದೆ ಎಂದರು.
ಮನೆ ಮನೆ ಸಂಪರ್ಕದ ಈ ಅಭಿಯಾನದಲ್ಲಿ ಲಕ್ಷಾಂತರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಜ.ಆ ಶುಭ ಮುಹೂರ್ತದಲ್ಲಿ ಸಮಸ್ತ ಜಗತ್ತಿನ ಗಮನ ಸೆಳೆದ ಅಯೋಧ್ಯೆಲ್ಲಿ ಬಾಲರಾಮನ ಪ್ರತಿಷ್ಠಾಪನೆ ನಡೆಯಲಿದೆ. ಇದು ಇಡೀ ದೇಶವು ಹಮ್ಮೆ ಪಡುವ ಸಂಗತಿ. 500 ವರ್ಷಗಳ ನಂತರ ನಡೆಯುವ ಸಂಭ್ರಮದ ಆನಂದೋತ್ಸವದಲ್ಲಿ ಸಂಪೂರ್ಣ ಬೆಳಗಾವಿಯ ಜನತೆ ಭಕ್ತಿಸಾಗರದಲ್ಲಿ ಭಾಗವಹಿಸಬೇಕೆಂದು ಕೃಷ್ಣಭಟ್ಟ ಅವರು ಮನವಿ ಮಾಡಿದರು.
ವಿಎಚ್ ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ಜಿಲ್ಲಾ ಕಾರ್ಯದರ್ಶಿ ಆನಂದ ಕರಲಿಂಗಣ್ಣವರ, ಅಭಿಯಾನದ ವಿಭಾಗ ಸಂಯೋಜಕ ದತ್ತಾ ನಾಯಕ, ಜಿಲ್ಲಾ ಸಂಯೋಜಕ ಬಿಟ್ಟಪ್ಪ ನಾಯಕ, ವಿಎಚ್ ಪಿ ಜಿಲ್ಲಾ ಸಹ ಕಾರ್ಯದರ್ಶಿ ಗಣೇಶ ಚೌಗಲೆ, ಉಮೇಶ ಚೆಂಡಕ, ಸಂತೋಷ, ಆದಿನಾಥ್ ಗಾವಡೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.