ಹೆತ್ತ ಕರುಳಿನ ಕೂಗಿಗೆ ಮಿಡಿದ ಬೆಳಗಾವಿಯ ಲೇಖಕಿಯರು!
ರಂಗನಟಿ ಭಾರತಿಗೆ ಎಕೆಬಿಎಂಎಸ್ ಆರ್ಥಿಕ ನೆರವು.
ಮಾನವೀಯತೆ ಮರೆದ ಲೇಖಕಿಯರು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
ಬೆಳಗಾವಿ:
ಕೊಲ್ಲುವವನು ಒಬ್ಬನಿದ್ದರೆ ಕಾಯುವವನು ನೂರು ಜನರು ಎನ್ನುವ ಮಾತು ಇಂದು ಅಕ್ಷರಶಃ ಸತ್ಯವಾಯಿತು.
ಬೆಳಗಾವಿಯ ಸಂಯುಕ್ತ ಕರ್ನಾಟಕ ಪ್ರಾದೇಶಿಕ ಕಚೇರಿ ಇಂತಹ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಯಿತು.

ಬೆಳಗಾವಿ ಲೇಖಕಿಯರ ಸಂಘ ಮತ್ತು ಅಶೋಕ ಹಾರನಹಳ್ಳಿ ನೇತೃತ್ವದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕ ನೊಂದ ಕಲಾವಿದೆಗೆ ನೆರವಿನ ಹಸ್ತ ಚಾಚಿತು
ಕನ್ನಡ ನಾಟಕ ಪ್ರದರ್ಶನ ಪ್ರಚಾರಕ್ಕೆ ಬೆಳಗಾವಿ ಪೊಲೀಸರು ಅನಗತ್ಯ ಕಿರಿಕಿರಿ ಮಾಡಿದ ಸಂದರ್ಭದಲ್ಲಿ ಕೂಡ ಸಂಯುಕ್ತ ಕರ್ನಾಟಕ ಮತ್ತು e belagavi ಕಲಾವಿದೆ ಪರವಾಗಿ ನಿಂತಿತ್ತು.
ಆರಂಭದಲ್ಲಿ ನಾಟಕಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ಕೊಟ್ಟ ಮತ್ತೊಬ್ಬ ಕಲಾವಿದರು ಕೊನೆಗಳಿಗೆಯಲ್ಲಿ ಕೈ ಕೊಟ್ಟರು. ಇದೆಲ್ಲದರ ಪರಿಣಾಮ ಹೇಗಾದರೂ ಮಾಡಿ ನಾಟಕ ಪ್ರದರ್ಶನ ಮಾಡಿ ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದಿತು.
ಇದರಿಂದ ಕಣ್ಣೀರು ಸುರಿಸತೊಡಗಿದ್ದ ಕಲಾವಿದೆಗೆ ಬೆಳಗಾವಿ ಲೇಖಕಿಯರ ಸಂಘ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಳಗಾವಿ ಘಟಕ ಆರ್ಥಿಕ ನೆರವು ನೀಡಿ ಅವರ ಕಣ್ಣೀರು ಒರೆಸುವ ಕೆಲಸ ಮಾಡಿತು.

ಆಗಿದ್ದು ಏನು?
ಮಗಳ ಮದುವೆಯ ಸಹಾಯಾರ್ಥ ನಾಟಕ ಪ್ರದರ್ಶನ ಏರ್ಪಡಿಸಿ ಕೈ ಸುಟ್ಟುಕೊಂಡಿದ್ದ ರಂಗನಟಿ ಭಾರತಿ ದಾವಣಗೆರೆ ಅವರ ನಿರೀಕ್ಷೆಗೂ ಮೀರಿ ಆರ್ಥಿಕ ನೆರವು ಒದಗಿಸಿಕೊಡುವ ಮೂಲಕ ಅತ್ತು ಅತ್ತು ಕೆಂಪಾಗಿದ್ದ ಕಂಗಳಲ್ಲಿ ಸಂತೋಷದ ಮಿಂಚು ಹಾಯುವಂತಾಯಿತು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸದಸ್ಯೆಯರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಳಗಾವಿ ಯುವ ಘಟಕದವರು ಸೋಮವಾರ ಸಂ.ಕ ಕಚೇರಿಗೆ ಬಂದು ರಂಗನಟಿಯ ನೋವಿಗೆ ಸ್ಪಂದಿಸಿದರು.
ಕಲಾವಿದೆ ಭಾರತಿಯವರ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಅರಿತು ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ, ಕಾರ್ಯದರ್ಶಿ ಭಾರತಿ ಮಠದ ಅವರ ನೇತೃತ್ವದಲ್ಲಿ ಕೇವಲ ಒಂದೇ ದಿನದಲ್ಲಿ ಸಹಾಯ ನಿಧಿ ಸಂಗ್ರಹಿಸಿದ ಸದಸ್ಯೆಯರು ಬೆಳಗಾವಿಯ ಸಂಯುಕ್ತ ಕರ್ನಾಟಕ ಕಚೇರಿಗೆ ಸೋಮವಾರ ಆಗಮಿಸಿ ಕಲಾವಿದರನ್ನು ಶಾಲು ಹೊದಿಸಿ ಸನ್ಮಾನಿಸಿ ಆರ್ಥಿಕ ನೆರವು ನೀಡಿ ಸತ್ಕರಿಸಿದರು.
ರಂಗಭೂಮಿಯ ಇಂದಿನ ಪರಿಸ್ಥಿತಿ ಮತ್ತು ತಮ್ಮ ಹಾಗೂ ಬೆಳಗಾವಿಯ ನಡುವಿನ ಸಂಬಂಧವನ್ನು ಭಾರತಿ ದಾವಣಗೆರೆ ವಿವರಿಸಿದರು. ಸಂಕಷ್ಟದ ಕಾಲದಲ್ಲಿ `ಸಂಯುಕ್ತ ಕರ್ನಾಟಕ’ ತಮ್ಮ ಜತೆಗೆ ನಿಂತಿದ್ದ ಬಗ್ಗೆ ಹೇಳಿಕೊಂಡ ಅವರು, ಭಾವುಕರಾಗಿ ಕಣ್ಣೀರಿಟ್ಟರು.
ಲೇಖಕಿಯರ ಸಂಘದ ಸದಸ್ಯೆಯರು ಕಲಾವಿದೆಯ ಅನುಭವಗಳನ್ನು ಕೇಳಿ ಭಾವುಕರಾದರು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಕಲಾವಿದೆ ರೇಷ್ಮಾ ಅಳವಂಡಿ, ಬಿ.ಎ ಪಾಟೀಲ, ಬೆಳಗಾವಿ ಪಾಲಿಕೆಯ ಪಿಡಬ್ಲುಡಿ ಕಮಿಟಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ ಮತ್ತಿತರರು ಇದ್ದರು.

ಬ್ರಾಹ್ಮಣ ಸಂಘಟನೆಯಿಂದಲೂ ಧನಸಹಾಯ:
ಇದೇ ವೇಳೆ ಬೆಳಗಾವಿಯ ಸಂಯುಕ್ತ ಕರ್ನಾಟಕ ಕಚೇರಿಗೆ ಆಗಮಿಸಿದ ಅಖಿಲ ಕರ್ನಾಟಕ
ಬ್ರಾಹ್ಮಣ ಮಹಾಸಭಾ ಬೆಳಗಾವಿ ಜಿಲ್ಲಾ ಯುವ ಘಟಕದ ವತಿಯಿಂದಲೂ ನೊಂದ ಕಲಾವಿದೆಗೆ ಆರ್ಥಿಕ ನೆರವು ನೀಡಲಾಯಿತು.
ಅಶೋಕ ಹಾರನಹಳ್ಳಿ ಅವರು ಅಧ್ಯಕ್ಷರಾಗಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಳಗಾವಿ ಜಿಲ್ಲಾ ಯುವ ಘಟಕದ ಅಕ್ಷಯ ಕುಲಕರ್ಣಿ, ಪ್ರಜ್ವಲ್ ಕುಲಕರ್ಣಿ, ಅನಿಲ್ಕು ಲಕರ್ಣಿಯವರು ಸಹಾಯ ಧನವನ್ನು ಹಸ್ತಾಂತರಿಸಿದರು