Headlines

ಬಿಎಸ್ ವೈ ಸಂಧಾನ ಬಿಜೆಪಿಯಲ್ಲಿ ಚಿಗುರಿದ ಆತ್ಮ ವಿಶ್ವಾಸ

E belagavi ವಿಶೇಷ

ದೊಡ್ಡ ಬೆಟ್ಟ ಆಗಬಹುದೆಂಬ ಆತಂಕ ಸೃಷ್ಟಿಸಿದ್ದ ಸಮಸ್ಯೆ ಕಡೆಗೂ ಪರಿಹಾರ ಕಂಡಿದೆ. ಭಿನ್ನಮತದ ಜಾಗದಲ್ಲಿ ಈಗ ಒಗ್ಗಟ್ಟಿನ ಮಂತ್ರ.
ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ತಲೆದೋರಿದ್ದ ಅತೃಪ್ತಿ, ಅಸಮಧಾನ ಶಮನಗೊಂಡಿದ್ದು ವಾತಾವರಣ ಈಗ ತಿಳಿಯಾಗಿದೆ.

ಒಂದು ವಾರದ ಹಿಂದಷ್ಟೇ ಬಿಗು ಗೊಂಡಿದ್ದ ಪರಿಸ್ಥಿತಿಯನ್ನು ಕಂಡಿದ್ದವರಿಗೆ ಇದು ಸದ್ಯಕ್ಕೆ ಇತ್ಯರ್ಥವಾಗುವ ಬಿಕ್ಕಟ್ಟಲ್ಲ ಎಂಬ ಭಾವನೆ ಮುಡಿದ್ದು ಹೌದಾದರೂ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನವರು ನಡೆಸಿದ ಸಂಧಾನ ಫಲ ನೀಡಿದೆಯಲ್ಲದೇ ವಿವಾದ ಸುಸೂತ್ರವಾಗಿ ಬಗೆಹರಿದಿದೆ.


ವಿಶೇಷವಾಗಿ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳು ಹಾಗೂ ಧಾರವಾಡ ಲೋಕಸಭಾ ಕ್ಷೇತ್ರವೂ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕೆಲವು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಭುಗಿಲೆದ್ದಿದ್ದ ಅಸಮಧಾನ ಈಗಂತೂ ತಣ್ಣಗಾಗಿದೆ. ಬೆಳಗಾವಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುನಿಸಿಕೊಂಡಿದ್ದ ಬಿಜೆಪಿಯ ಹಿರಿಯ ನಾಯಕರೂ ಆದ ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ, ಮುಖಂಡರಾದ ಈರಣ್ಣ ಕಡಾಡಿ, ಅಭಯ ಪಾಟೀಲ, ಮಹಾಂತೇಶ ಕವಟಗಿಮಠ, ಸೇರಿದಂತೆ ಇನ್ನಿತರರು ಇದೀಗ ರಾಜಿ ಸೂತ್ರಕ್ಕೆ ಕಟ್ಟು ಬಿದ್ದು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲು ಸಮ್ಮತಿಸಿದ್ದಾರೆ.

ಸಂಧಾನ ಸೂತ್ರದ ಮುಂದುವರಿದ ಭಾಗವಾಗಿ ಜಗದೀಶ ಶೆಟ್ಟರ್ ಅವರು ಪ್ರಭಾಕರ ಕೋರೆ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಗೊಂದಲಗಳು ಬಗೆಹರಿದಿದೆ.
ಒಂದಂತೂ ಸ್ಪಷ್ಟ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಜೆಪಿಯಲ್ಲಿ ಉಂಟಾಗಿದ್ದ ಸಣ್ಣ ಅತೃಪ್ತಿಯ ಲಾಭ ಪಡೆಯಲು ಕಾಂಗ್ರೆಸ್ ನಡೆಸಿದ ಪ್ರಯತ್ನವನ್ನು ಯಡಿಯೂರಪ್ಪ ವಿಫಲಗೊಳಿಸಿದ್ದು ಇದು ಆ ಪಕ್ಷಕ್ಕೆ ದೊಡ್ಡ ರಾಜಕೀಯ ಹಿನ್ನಡೆ ಆದಂತಾಗಿದೆ.

ಇನ್ನುಳಿದಂತೆ ರಾಜ್ಯದ ಚಿಕ್ಕಬಳ್ಳಾಪುರ, ಚಿತ್ರದುರ್ಗ, ಸೇರಿದಂತೆ ಆಯ್ದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ತಿಳಿಗೊಳಿಸಲು ಖುದ್ದು ಯಡಿಯೂರಪ್ಪನವರೇ ಅಖಾಡಕ್ಕಿಳಿದಿದ್ದು ಅತೃಪ್ತ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಹುತೇಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದ್ದು ಬಿಕ್ಕಟ್ಟು ಶಮನಗೊಳ್ಳುವ ನಿರೀಕ್ಷೆ ಇದೆ.


ಈ ಬಾರಿಯ ಚುನಾವಣೆಯಲ್ಲಿ ದೇಶದಾದ್ಯಂತ ಪ್ರಧಾನಿ ಮೋದಿಯವರ ಜನಪ್ರಿಯತೆ ಮತ್ತು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಜನೋಪಯೋಗಿ ಯೋಜನೆಗಳನ್ನು ಪಣಕ್ಕಿಟ್ಟು ಬಿಜೆಪಿ ಮತದಾರರ ಮುಂದೆ ಬಂದಿದೆಯಾದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯನ್ನು ಎದುರಿಸಬೇಕಿದೆ. ಆದರೆ ಉಳಿದ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಜಾತಿ, ನಾಯಕತ್ವ ಪ್ರಧಾನ ಪಾತ್ರ ವಹಿಸುವುದರಿಂದ ಮೋದ ಜನಪ್ರಿಯತೆಯ ಜತೆಗೇ ಯಡಿಯೂರಪ್ಪ ನಾಯಕತ್ವವೂ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ತಂದುಕೊಡಲಿದೆ ಎಂಬ ಪ್ರಬಲ ನಂಬಿಕೆ ಪಕ್ಷದ ಮುಖಂಡರು ಮತ್ತು ಅಭ್ಯರ್ಥಿಗಳದ್ದು. ಬಹು ಮುಖ್ಯವಾಗಿ ಲಿಂಗಾಯಿತ ಮತಗಳು ಈ ಬಾರಿ ತಮ್ಮ ಪಕ್ಷಕ್ಕೆ ಬರಬಹುದೆಂಬ ನಂಬಿಕೆ ಹೊಂದಿದ್ದ ಕಾಂಗ್ರೆಸ್ ನಾಯಕರಿಗೆ ಮತ್ತೆ ನಿರಾಶೆ ಉಂಟಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಬಿಡುವಿಲ್ಲದಂತೆ ತಾಲ್ಲೂಕು, ಹೋಬಳಿ ಕೇಂದ್ರಗಳತ್ತಲೂ ಪ್ರವಾಸ ಕೈಗೊಂಡಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತನೊಂದಿಗೆ ಬೆರೆಯುವ ಅವರ ಪ್ರಯತ್ನ ಒಂದಷ್ಟರ ಮಟ್ಟಿಗೆ ಫಲ ನೀಡಿದೆ. ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಆರಂಭದ ದಿನಗಳಲ್ಲಿ ಅವರ ಸಾಮರ್ಥ್ಯ ಕುರಿತಂತೆ ಉಪೇಕ್ಷೆಯ ಮಾತುಗಳನ್ನಾಡಿದ್ದವರೂ ಈಗ ಅವರ ಜತೆ ಕೈ ಜೋಡಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಣ ತೊಟ್ಟಿರುವುದು ಇದರ ಜತೆಗೇ ಹಿರಿಯ ನಾಯಕ ಯಡಿಯೂರಪ್ಪನವರ ಪ್ರವಾಸ ಬಿಜೆಪಿ ಸಂಘಟನೆಗೆ ಹೆಚ್ಚು ಶಕ್ತಿ ತಂದಿದೆ.


ಪ್ರಮುಖವಾಗಿ ಈ ಬಾರಿ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ತಪ್ಪಿ ಹೋಗಿದ್ದು ಸಚಿವ ಶಿವಾನಂದ ಪಾಟೀಲ್ ಪುತ್ರಿಯ ಪಾಲಾಗಿದೆ. ಇದರಿಂದ ತೀವ್ರ ಆಕ್ರೋಶ ಹೊರ ಹಾಕಿರುವ ವೀಣಾ ಕಾಶಪ್ಪನವರ್ ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ. ಅವರ ಆಕ್ರೋಶವನ್ನು ತಣಿಸುವ ಪ್ರಯತ್ನ ಸ್ವಯಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ನಡೆದರೂ ಅಸಮಾಧಾನ ತಣ್ಣಗಾಗಿಲ್ಲ. ಹೀಗಾಗಿ ಈ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಪಂಚಮ ಸಾಲಿ ಲಿಂಗಾಯಿತ ಮತಗಳು ಕಾಂಗ್ರೆಸ್ ಗೆ ತಪ್ಪಿ ಹೋಗುವ ಸಾಧ್ಯತೆಗಳಿದ್ದು ಅದರ ಲಾಭವನ್ನು ಪಡೆಯಲು ಬಿಜೆಪಿ ತಂತ್ರ ರೂಪಿಸಿದೆ.


ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿರುವುದರಿಂದ ಮೈತ್ರಿ ಪಕ್ಷ ಜೆಡಿಎಸ್ ಸೇರಿದಂತೆ ಸ್ಪರ್ಧಿಸಿರುವ 28 ಕ್ಷೇತ್ರಗಳ ಪೈಕಿ ಕನಿಷ್ಟ 27 ಕ್ಷೇತ್ರಗಳನ್ನಾದರೂ ಗೆಲ್ಲಬೇಕೆಂಬ ಸವಾಲು ಅವರ ಮುಂದಿದೆ. ಈ ಬಾರಿ ಜೆಡಿಎಸ್ ಬಿಜೆಪಿ ನಡುವೆ ಚುನಾಣಾ ಮೈತ್ರಿ ಆಗಿರುವುದರಿಂದ ಎರಡೂ ಪಕ್ಷಗಳ ಸ್ಪರ್ದೇಯಿಂದ ಹಂಚಿ ಹೋಗಬಹುದಾಗಿದ್ದ ಮತಗಳು ಹೆಚ್ಚು ಪ್ರಮಾಣದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿದ್ದು ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಇನ್ನುಳಿದಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಮುನಿಸಿಕೊಂಡಿದ್ದ ದಿಂಗಾಲೇಶ್ವರ ಶ್ರೀ ಸೇರಿದಂತೆ ಲಿಂಗಾಯಿತ ಮಠಾಧೀಶರನ್ನು ಸಮಾಧಾನ ಪಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಒಂದು ರೀತಿಯಲ್ಲಿ ತಪ್ಪು ಕಲ್ಪನೆಗಳು ನಿವಾರಣೆ ಆಗಿವೆ ಎನ್ನಲಾಗಿದ್ದು ಇದು ಬಿಜೆಪಿಗೆ ವರದಾನವಾಗುವ ಸೂಚನೆಗಳನ್ನು ಹುಟ್ಟುಹಾಕಿದೆ.

Leave a Reply

Your email address will not be published. Required fields are marked *

error: Content is protected !!