Headlines

ಪಾಲಿಕೆ ಠರಾವ್ ಕಾಲು ಕಸ..!

ಪಾಲಿಕೆಯವರ ವಿಳಂಬ ನೀತಿ.ಮೂಲೆಗುಂಪಾದ ಪಾಲಿಕೆ ಠರಾವ್.

ಈ ಅವಮಾನ ಯಾರಿಗೆ ಆಗಿದ್ದು ಗೊತ್ತೆ? ಈ ವಿಳಂಬ ನೀತಿಗೆ ಕಾರಣರಾದವರ ವಿರುದ್ಧ ಕ್ರಮ ಏಕಿಲ್ಲ.?

8 ತಿಂಗಳು ಗತಿಸಿದರೂ ಪಾಲಿಕೆ ಠರಾವ್ ಗೆ ಗ್ರೀನ್ ಸಿಗ್ನಲ್ ಕೊಡದ ಕಾಂಗ್ರೆಸ್ ಸರ್ಕಾರ

ಬೆಳಗಾವಿ.

ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಗಡಿನಾಡ ಬೆಳಗಾವಿಯ ಬಿಜೆಪಿ ಹಿಡಿತದಲ್ಲಿರುವ ಮಹಾನಗರ ಪಾಲಿಕೆ ಕಂಡರೆ ಏನಾಗುತ್ತೋ ಭಗವಂತನೇ ಬಲ್ಲ…!

ಮಹಾನಗರ ಪಾಲಿಕೆ ಕಳಿಸಿದ ಕಡತಗಳಿಗೆ ಸರ್ಕಾರ ಕಣ್ಣೆತ್ತಿ ಕೂಡ ನೋಡಲ್ಲ. ಎಲ್ಲವೂ ಸರಿಯಾಗಿದ್ದರೂ ಬರೀ ನೋಟೀಸ್ ಕೊಟ್ಟು ಕಿಟಿಕಿಟಿ ಮಾಡುವ ಕೆಲಸ ಮಾಡುತ್ತದೆ.

ಅದನ್ನು ಬಿಡಿ. ಈಗ ಮತ್ತೊಂದು ಸ್ಟೋರಿ ಕೇಳಿ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 16 ಅಗಸ್ಟ 2023 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ನಗರಸೇವಕ ಹನುಮಂತ ಕೊಂಗಾಲಿ ಅವರನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಪಾಲಿಕೆ ಪರವಾಗಿ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡುವ ಠರಾವ್ ಸ್ವೀಕರಿಸಲಾಗಿತ್ತು.

ಸಹಜವಾಗಿ ಪಾಲಿಕೆಯಲ್ಲಿ ತೆಗೆದುಕೊಂಡ ಠರಾವ್ ನ್ನು ಅನುಷ್ಠಾನ ಗೊಳಿಸುವ ಸಂಬಂಧ ಪಾಲಿಕೆ ಆಯುಕ್ತರು ತುರ್ತು ಕ್ರಮ ತೆಗೆದುಕೊಳ್ಳಬೇಕು. ಅಂದರೆ ಕನಿಷ್ಟ ಒಂದುವಾರದೊಳಗೆ ಸಂಬಂಧಿಸಿದವರಿಗೆ ಪತ್ರವನ್ನು ಬರೆಯಬೇಕು.

ಆದರೆ ಇಲ್ಲಿ ಠರಾವ್ ಬಗ್ಗೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆಯಲು ಪಾಲಿಕೆಯವರು ಬರೊಬ್ಬರಿ ನಾಲ್ಕು ತಿಂಗಳು ಸಮಯ ತೆಗೆದುಕೊಂಡರು. ಅಂದರೆ 13 December 2023 ರಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ರವಾನಿಸಿದರು.

ಆ ನಂತರ ಬೂಡಾ ಆಯುಕ್ತರು ಅದನ್ನು ಸರ್ಕಾರಕ್ಕೆ ಕಳಿಸಿ ಅಲ್ಲಿಂದ ಗೆಜೆಟ್ ನಲ್ಲಿ ಪ್ರಕಟವಾಗಬೇಕು. ಆಗ ಪಾಲಿಕೆಯ ನಗರಸೇವಕ ಕೊಂಗಾಲಿ ಅಧಿಕೃತ ವಾಗಿ ಬೂಡಾ ಸದಸ್ಯರಾಗುತ್ತಾರೆ.

ಈ ವಿಳಂಬ ನೀತಿಯಿಂದ ಪಾಲಿಕೆ ಠರಾವ್ ಕಸದ ಬುಟ್ಟಿ ಸೇರಿತ್ತು ಎನ್ನಬಹುದು. ಇದುವರೆಗೂ ಪಾಲಿಕೆಯ ಆ ಠರಾವ್ ಗೆ ಸರ್ಕಾರದ ಅಧಿಕೃತ ಮುದ್ರೆ ಬಿದ್ದಿಲ್ಲ. ಅಂದರೆ ಪಾಲಿಕೆಯಲ್ಲಿ ತೆಗೆದುಕೊಂಡ ಇನ್ನುಳಿದ ಠರಾವ್ ಗಳ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿರಬಹುದು ಎನ್ನುವುದನ್ಬು ನೀವೇ ಊಹಿಸಿ.

ಇಲ್ಲಿ ಅಧಿಕಾರಿಗಳೇ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸಿದರೋ ಅಥವಾ ಬಿಜೆಪಿ ಹಿಡಿತದ ಪಾಲಿಕೆಗೆ ಅವಮಾನವಾಗುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆಯೋ? ಉತ್ತರಿಸೋರು ಯಾರು.?

Leave a Reply

Your email address will not be published. Required fields are marked *

error: Content is protected !!