ಬೆಳಗಾವಿ.
ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎಂಬುದು ಹಿರಿಯರ ಮಾತು.ಇವತ್ತಿನ ದಿನಮಾನಕ್ಕೆ ಅದು ಅಕ್ಷರಶಃ ಅನ್ವಯಿಸುತ್ತದೆ.
ಹೇಗಂತೀರಾ ಹೇಳ್ತೀವಿ ನೋಡಿ.
ಅಂದುಕೊಳ್ಳದೆ ಯಶಸ್ಸು, ಹಣ, ಅಧಿಕಾರ ಬಂದುಬಿಟ್ಟರೆ ಸಾಕು. ಅದೆಂತಹವರೇ ಇರಲಿ ಗೊತ್ತೇ
ಇಲ್ಲದಂತೆ ಅಹಂಕಾರ, ಸೊಕ್ಕು ಕೂಡಾ ತನ್ನಂತಾನೇ ಬಂದೇ ಬಿಡುತ್ತದೆ. ಸಾಲದಕ್ಕೆ ಇಗೋ ಇಜಎಂ ದುರಹಂಕಾರವೂ ಸೇರಿಕೊಂಡರೆ ವಿನಾಶಕ್ಕೆ ಅದೇ ನಾಂದಿಯಾಗುತ್ತದೆ.
ಇದನ್ನೇ ಮೇಲಿನಂತೆ ಒಂದೇ ಮಾತಿನಲ್ಲಿ ಹಿರಿಯರು ಹೇಳಿದ್ದಾರೆ ಅಷ್ಟೆ!
ಸಧ್ಯ ಭಾರೀ ಚರ್ಚೆ ಯಲ್ಲಿರುವ ಚಿತ್ರನಟ ದರ್ಶನ ಬಂಧನ ಪ್ರಕರಣವೂ ಇಂತಹದ್ದೇ ಅಹಂಕಾರ, ಸೊಕ್ಕಿನ ಪರಿಣಾಮ ಎಂದರೆ ತಪ್ಪಾಗಲ್ಲ. ಅಷ್ಟಕ್ಕೂ ದರ್ಶನ ಚಿತ್ರಗಳಲ್ಲಿ ಹೇಗೆ ಹೆಸರು ಮಾಡಿಕೊಂಡರೋ ಅದೇ ತರಹ ವಿವಾದಗಳಲ್ಲಿಯೂ ಸಾಕಷ್ಟು ಹೆಸರು ಮಾಡಿಕೊಂಡವರು.

ಈ ಹಿಂದೆ ನಟಿ ನಿಖಿತಾ ಜತೆ ಥಳಕು ಹಾಕಿಕೊಂಡಿದ್ದ ದರ್ಶನ ಹೆಸರು ಈಗ ಪವಿತ್ರಾ ಗೌಡ ಜತೆ ಥಳಕು ಹಾಕಿಕೊಂಡಿದೆ ಅಷ್ಟೆ. ಧರ್ಮಪತ್ನಿ ವಿಜಯಲಕ್ಷ್ಮಿ ಮೇಲೆಯೂ ಕ್ರೌರ್ಯ ಮೆರೆದಿದ್ದ ಈ ನಟನಿಗೆ ಅಂದೇ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿಗೆ ಹಾಕಿ ಶಿಕ್ಷೆ ನೀಡಿದ್ದರೆ ಬಹುಶಃ ಈ ಮಟ್ಟಕ್ಕೆ ಅವರ ದರ್ಪ, ಅಹಂಕಾರ ಬೆಳೆಯುತ್ತಿರಲಿಲ್ಲ. ಹಿಟ್ ಮೇಲೆ ಹಿಟ್ ಬ್ಲಾಕ್ ಬ್ಲಾಸ್ಟರ್ ಸಿನೇಮಾದಿಂದ ಸೂಪರ್‌ಸ್ಟಾರ್ ನಟನಾಗಿ ಕೋಟಿ ಕೋಟಿ ಸಂಭಾವನೆ ಪಡೆಯಲು ಶುರು ಮಾಡುತ್ತಿದ್ದಂತೆಯೇ ನಟ ದರ್ಶನ್ ಸೊಕ್ಕು ಅಹಂಕಾರವೂ ಹೆಚ್ಚಾಯಿತು ಎನ್ನುವ ಮಾತುಗಳಿವೆ.
ವಿನಾಶ ಕಾಲೇ ವಿಪರೀತ ಬುದ್ಧಿ… ಎಂಬಂತೆ ಹಣ ಅಧಿಕಾರದ ಮದ ಏರಿದ್ದರಿಂದಲೇ ಇಂದು ಅಭಿಮಾನಿಯ ಕೊಲೆ ಆರೋಪದಲ್ಲಿ ಜೈಲು ಸೇರುವಂತಾಗಿದೆ.

ಜೀವಕ್ಕೆ ಕುತ್ತು ತಂದ ಮೊಬೈಲ್ ಗೀಳು :

ಇನ್ನು ಅಶ್ಲೀಲ ಮೊಬೈಲ್ ಸಂದೇಶ ಕಳುಹಿಸಿ ಜೀವಕ್ಕೆ ಕುತ್ತು ತಂದು ಕೊಂಡನಾ ಮೃತ ರೇಣುಕಾಸ್ವಾಮಿ? ಹೌದು ನಟ ದರ್ಶನ್ ಬಗ್ಗೆ ಅತಿಯಾದ ಅಭಿಮಾನ ಹೊಂದಿದ್ದ ರೇಣುಕಾಸ್ವಾಮಿ, ಪವಿತ್ರಾಗೌಡರಿಗೆ ಕಳುಹಿಸಿದ್ದ ಅಶ್ಲೀಲ ಸಂದೇಶವೇ ಈ ಕೊಲೆಗೆ ಕಾರಣವಾಯಿತು. ಕಳೆದ ವರ್ಷವಷ್ಟೇ ಮದುವೆಯಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಡ ಕುಟುಂಬದ ರೇಣುಕಾಗೆ ಅತಿಯಾದ ಮೊಬೈಲ್ ಗೀಳು ಇದ್ದುದೇ ಈ ದುರಂತಕ್ಕೆ ಕಾರಣ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಸಿಕ್ಕ ವೆಬ್ಗಳಲ್ಲಿ ಡಿಬಾಸ್ ದರ್ಶನ ಸುದ್ದಿ ನೋಡುವುದು, ಕಮೆಂಟ್ ಮಾಡುವುದು ಅವನ ಹುಚ್ಚಾಗಿತ್ತು. ಆದರೆ ಮನೆಯವರಿಗೆ ಈತನ ಈ ಹುಚ್ಚಿನ ಬಗ್ಗೆ ಹೆಚ್ಚಿನ ಮಾಹಿತಿಯೂ ಇರಲಿಲ್ಲ. ದಿನ ಬೆಳಗಾದರೆ ಕೆಲಸಕ್ಕೆ ಹೋಗುವ ಗಂಡ ರಾತ್ರಿ ಮನೆಗೆ ಮರಳುತ್ತಿದ್ದ. ಕೆಲಸದ ಸ್ಥಳದಲ್ಲಿ ಮೊಬೈಲ್ನೊಂದಿಗೆ ಅತಿಯಾದ ಬೆಸುಗೆ ಹೊಂದಿದ್ದು, ಪತ್ನಿಗೂ ತಿಳಿದಿರಲಿಲ್ಲ. ಆದರೆ ಅದ್ಯಾವಾಗ ಪವಿತ್ರಾಗೌಡ ತನಗೆ ಬಂದ ರೇಣುಕಾ
ಮೆಸೇಜುಗಳನ್ನೆಲ್ಲಾ ಪವನ್ ಹಾಗೂ ದರ್ಶನರಿಗೆ ತೋರಿಸಿ ಸ್ಕ್ರೀನ್ ಶಾಟ್ ಕಳಿಸಿದ್ಲೋ ತನ್ನ ಸಾವನ್ನು ತಾನೇ ಕರೆಸಿಕೊಂಡಿದ್ದ ರೇಣುಕಾಸ್ವಾಮಿ.
ಎಚ್ಚರಿಕೆಯ ಗಂಟೆ:

2024 ರಾಜ್ಯ ರಾಜಕಾರಣದಲ್ಲಿ ಈ ವರೆಗೂ ಕೇಳರಿಯದ ಪ್ರಜ್ವಲ ರೇವಣ್ಣ ಪೆನ್ ಡ್ರೈವ್ ಕೇಸು ಸದ್ದು ಮಾಡಿ ರಾಜಕಾರಣಿಗಳ ಮತ್ತೊಂದು ಮುಖವನ್ನು ತೆರೆದಿಟ್ಟರೆ, ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಬಯಲಾಗುತ್ತಿದ್ದಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರ ಕರಾಳ ಮುಖವೊಂದು ಬಯಲಾದಂತಾಗಿದೆ. ತನ್ನ ಪ್ರೇಯಸಿಯ ಇಗೋ ತೃಪ್ತಿಪಡಿಸುವ ಒಂದೇ ಉದ್ದೇಶಕ್ಕೆ ಮೆಸೇಜು ಕಳುಹಿಸಿದವನ ಮೇಲೆ ಮೃಗೀಯ ಹಲ್ಲೆ ನಡೆಸಿ ಕೊಲೆ ಪ್ರಕರಣವನ್ನು ಹಣ ಅಧಿಕಾರದಿಂದ ಮುಚ್ಚಿ ಹಾಕಬಹುದೆಂಬ ಭ್ರಮೆಯಲ್ಲಿದ್ದ ನಟ ಈಗ ಕಂಬಿಯ ಹಿಂದಿದ್ದಾನೆ.
ರಾಜಕಾರಣದಲ್ಲೂ ಅಹಂ ಇದ್ದರೆ..!
ದುಡ್ಡು, ಅಧಿಕಾರ ಮತ್ತು ಅಹಂಕಾರ ಇದ್ದವರು ಯಾರೂ ನೆಮ್ಮದಿಯ ನಿದ್ರೆ ಮಾಡಲ್ಲ
ರಾಜಕಾರಣದಲ್ಲಿ ಈ ಮೂರು ಇದ್ದವರನ್ನು ನೋಡಿದರೆ ಹಿರಿಯರ ಮಾತುಗಳು ನಿಜ ಎನ್ನುವುದು ಗೊತ್ತಾಗುತ್ತದೆ.
ರಾಜಕಾರಣದಲ್ಲಿ ತಗ್ಗಿ ಬಗ್ಗಿ ನಡೆದರೆ ಮತದಾರ ಅಪ್ಪಿಕೊಳ್ಳುತ್ತಾನೆ. ಅದೇ ನನ್ನ ಕಡೆ ದುಡ್ಡಿದೆ. ಅಧಿಕಾರವಿದೆ. ನಾನು ಹೇಳಿದಂತೆಯೇ ನಡೆಯಬೇಕು ಎಂದು ಹೊರಟವರು ಅನೇಕರು ಮುಗ್ಗರಿಸಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಜ್ವಲಂತ ಉದಾಹರಣೆಗಳು ಕಣ್ಮುಂದೆ ಇವೆ.
ಒಟ್ಟಿನಲ್ಲಿ ಹಣ ಮತ್ತು ಅಧಿಕಾರದ ಮದ ಅತಿರೇಖಕ್ಕೆ ಹೋದರೆ ಖಂಡಿತಾ ಅದು
ಒಳ್ಳೆಯದಕ್ಕಲ್ಲ ಎಂಬುದು ಬಹುಶಃ ಎಲ್ಲರಿಗೂ ಪಾಠವಾದೀತು.