Headlines

ಬೆಳಗಾವಿ ಪಾಲಿಕೆಗೆ ಬಗಲ್ಮೆ ದುಶ್ಮನಗಳೇ ಜಾಸ್ತಿ…!

ಪಾಲಿಕೆಯಲ್ಲಿ ಒಗ್ಗಟ್ಟು ಮೂರಾಬಟ್ಟೆ. ಆಡಳಿತ, ವಿರೋಧಿ ಪಕ್ಷ ದಲ್ಲಿಯೂ ಎರಡೆರಡು ಗುಂಪುಗಳು.

ಎಲ್ಲವೂ ಒಳ ಒಪ್ಪಂದ. ಬರೀ ಮಾತಿನ ಮೂಲಕ ಎಲ್ಲರನ್ನು ಹಿಡಿದಿಟ್ಟುಕೊಳ್ಳುವ ಯತ್ನ.

ಕೆಲವರ ವರ್ತನೆಯಿಂದ ಪಕ್ಷಕ್ಕೆ, ಹಿರಿಯರಿಗೆ ಮುಜುಗುರ.

ಸಮನ್ವಯ ಸಮಿತಿಯಲ್ಲೇ ಸಮನ್ವಯದ ಕೊರತೆ.

ಬೆಳಗಾವಿ.
ಕುಂದಾನಗರಿ ಬೆಳಗಾವಿ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾದ ಮಹಾನಗರ ಪಾಲಿಕೆ ಸಭೆಯಲ್ಲಿ ಅನಗತ್ಯ ಕಾಲಹರಣ ಮಾಡಲಾಗುತ್ತಿದೆಯೇ?
ಕಳೆದ ಶನಿವಾರ ನಡೆದ ಸಾಮಾನ್ಯ ಸಭೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾರ್ವಜನಿಕ ವಲಯದಲ್ಲಿಯೇ ಇಂತಹ ಮಾತುಗಳು ಕೇಳಿ ಬರಲಾರಂಭಿಸಿವೆ.
ಅಷ್ಟೇ ಅಲ್ಲ ಪಾಲಿಕೆಯಲ್ಲಿ ಬುದ್ದಿವಂತರು ಎಂದು ಕರೆಯಿಸಿಕೊಳ್ಳುವವರೂ ಸಹ ಒಂದು ರೀತಿಯಲ್ಲಿ ಅಸಹಾಯಕರಾದರಾ ಎನ್ನುವ ಪ್ರಶ್ನೆಗಳು ಕೇಳಿ ಬರಲಾರಂಭಿಸಿವೆ.


ಪಾಲಿಕೆ ಕಿಂಗ್ ಮೇಕರ್ ಎನಿಸಿಕೊಂಡ ಶಾಸಕ ಅಭಯ ಪಾಟೀಲರಿಗೆ ಪಕ್ಷದ ಹೈ ಕಮಾಂಡ ಬೇರೆ ಬೇರೆ ಜವಾಬ್ದಾರಿ ವಹಿಸಿದೆ. ಹೀಗಾಗಿ ಅವರ ಚಿತ್ತ ಅತ್ತ ನೆಟ್ಟಿದೆ. ಈ ಕಾರಣದಿಂದ ಪಾಲಿಕೆಯ ಕೆಲ ಬಿಜೆಪಿಗರಿಗೆ ಹೇಳೋರು ಕೇಳೋರು ಇಲ್ಲ ಎನ್ನುವಂತಾಗಿ ಬಿಟ್ಟಿದೆ.
ಮತ್ತೊಂದು ಕಡೆಗೆ ಕಾಂಗ್ರೆಸ್ ಪಾಳಯದಲ್ಲಿ ಶಾಸಕ ಆಸೀಫ್ ಶೇಠರಿಗೆ ಇದುವರೆಗೂ ಪಾಲಿಕೆ ಹಿಡಿತ ಸಿಗುತ್ತಿಲ್ಲ. ಈ ಕಾರಣದಿಂದ ಅಲ್ಲಿನ ಕೆಲವರು ಶಾಸಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಎಲ್ಲ ವ್ಯವಸ್ಥೆಯನ್ನು ಬಳಸಿಕೊಂಡ ಕೆಲವರು ಎರಡೂ ಕಡೆಗೆ `ಕೈ’ ಇಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆಸಿದ್ದಾರೆಂದು ಗೊತ್ತಾಗಿದೆ.

ಇಕ್ಕಟ್ಟಿನಲ್ಲಿ ಆಡಳಿತ
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಯಾವುದೇ ರೀತಿಯ ಚರ್ಚೆ ಮತ್ತು ಮಂಜೂರಾತಿ ಇಲ್ಲದೇ ಟೆಂಡರ್ ಪ್ರಕ್ರಿಯೆ ನಡೆಸಿದ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಸಮರ ನಡೆದಿತ್ತು.
ಪಾಲಿಕೆ ಸಾಮಾನ್ಯ ಸಭೆಯ ಗಮನಕ್ಕೆ ಬಾರದೇ ಕೆಲವೇ ನಗರಸೇವಕರಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎನ್ನುವ ಕಾರಣದಿಂದ ಆ ಟೆಂಡರ್ ಪ್ರಕ್ರಿಯೆಯನ್ನು ತಡೆಹಿಡಿಯಬೇಕೆಂದು ಹಿಂದಿನ ಮೇಯರ್ ಪತ್ರ ನೀಡಿದ್ದರು,
ಇಲ್ಲಿ ಅಧಿಕಾರಿಗಳು ಒಂದು ರೀತಿಯ ಕಾರಣ ಕೊಟ್ಟರೆ, ಆಡಳಿತ ಬಿಜೆಪಿಯವರು ಮತ್ತೊಂದು ರೀತಿಯ ಕಾರಣ ಕೊಡುತ್ತಿದ್ದರು.
ಇಲ್ಲಿ ಸಾಮಾನ್ಯ ಸಭೆ ನಡೆಯುವ ಒಂದು ದಿನ ಮುಂಚಿತವಾಗಿ ಆಡಳಿತ ಮತ್ತು ವಿರೋಧ ಪಕ್ಷದವರು ಒಂದೆಡೆ ಸೇರಿ ವಿವಾದವನ್ನು ಬಗೆಹರಿಸಿಕೊಂಡಿದ್ದರು,
ವಿಷಯ ಅಷ್ಟಕ್ಕೆ ಮುಕ್ತಾಯಾಗಿ ಬೆಳಗಾವಿ ಅಭಿವೃದ್ಧಿ ಬಗ್ಗೆ ಚರ್ಚ ನಡೆದಿದ್ದರೆ ಯಾರೂ ಪಾಲಿಕೆಯತ್ತ ಬೊಟ್ಟು ಮಾಡಿ ತೋರಿಸುವ ಪ್ರಮೇಯವೇ ಬರುತ್ತಿರಲಿಲ್ಲ.
ಆದರೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮತ್ತದೇ ವಿಷಯ ಮುಂದಿಟ್ಟುಕೊಂಡು ವಾದ ಮಾಡಿದ್ದನ್ನು ಗಮನಿಸಿದರೆ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟ.

ಬೆಳಗಾವಿ ಪಾಲಿಕೆಯಲ್ಲಿ ಹೇಗಾಗಿದೆ ಎಂದರೆ, ಆಡಳಿತಾರೂಢ ಬಿಜೆಪಿಯಲ್ಲಿ ಹೇಗೆ ಎರಡು ಗುಂಪುಗಳಾಗಿವೆಯೋ ಹಾಗೇ ವಿರೋಧಿ ಕಾಂಗ್ರೆಸ್ನಲ್ಲಿ ಎರಡು ಗುಂಪುಗಳಾಗಿವೆ. ಹೀಗಾಗಿ ಈ ಎರಡೂ ಗುಂಪುಗಳಿಗೆ ಹೊರಗಿನ ವೈರಿಗಳ ಅವಶ್ಯಕತೆನೇ ಇಲ್ಲ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿವೆ.

ಒಂದು ರೀತಿಯಲ್ಲಿ ಪಾಲಿಕೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎನ್ನುವುದು ಅಧಿಕಾರಿಗಳಿಗೆ ತಿಳಿಯುತ್ತಿಲ್ಲ.

ಬುದ್ದಿ ಮಾತು..!


ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುದಾನ ವಿಷಯಕ್ಕೆ ಸಂಬಂಧಿಸಿದಂತೆ ವಾದ ವಿವಾದ ಜೋರಾಗಿ ನಡೆದಿತ್ತು.
ಇದನ್ನು ಗಮನಿಸಿದ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಅವರು ಆಡಳಿತ ಮತ್ತು ವಿರೋಧಿ ಪಕ್ಷದವರಿಗೆ ಬುದ್ದಿ ಮಾತು ಹೇಳುವ ಪರಿಸ್ಥಿತಿ ಬಂದೊದಗಿತು.
ಕೇವಲ ಇಂತಹ ವಿಷಯ ಮುಂದಿಟ್ಟುಕೊಂಡು ವಾದ ಮಾಡಿ ಸಾಮಾನ್ಯ ಸಭೆಯ ಸಮಯವನ್ನು ವ್ಯರ್ಥ ಮಾಡುವ ಬದಲು ಸಭೆಯಲ್ಲಿ 15 ನಿಮಿಷ ಮುಂದೂಡಿ ಮೇಯರ್ ಕೊಠಡಿಯಲ್ಲಿ ಎರಡೂ ಕಡೆಯವರು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಉತ್ತಮ ಎನ್ನುವ ಸಲಹೆ ನೀಡಿದರು
,

ಸಮನ್ವಯದ ಕೊರತೆ…!
ಮಹಾನಗರ ಪಾಲಿಕೆ ಎರಡೂ ಗುಂಪಿನಲ್ಲಿ ಕಿಂಚಿತ್ತೂ ಹಿಡಿತವಿಲ್ಲ ಎನ್ನುವ ಮಾತುಗಳಿವೆ,
ಸಹಜವಾಗಿ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಬೇಕು, ಪಕ್ಷಕ್ಕೆ ಒಳ್ಳೆಯ ಹೆಸರು ತರಬೇಕು ಎನ್ನುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಅವರು 6 ಜನರ ಸಮನ್ವಯ ಸಮಿತಿಯನ್ನು ರಚಿಸಿದ್ದಾರೆ.
ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಸಮಿತಿ ಇದೆ, ಆದರೆ ಈಗ ಆ ಸಮಿತಿಯಲ್ಲಿಯೇ ಸಮನ್ವಯತೆ ಇಲ್ಲ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿದವೆ. ಕೆಲವೊಂದು ಸಂದರ್ಭದಲ್ಲಿ ಆ ಸಮಿತಿ ತೆಗೆದುಕೊಂಡ ನಿರ್ಧಾರವನ್ನು ಪಾಲಿಕೆ ಚುಕ್ಕಾಣಿ ಹಿಡಿದವರೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!