ಸಿ.ಎಂ. ಬದಲಾವಣೆ ಬಹಿರಂಗ ಚರ್ಚೆ: ಸಂಸದ ಶೆಟ್ಟರ್ ವ್ಯಂಗ್ಯ
ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆದಿದೆ. ಇಲ್ಲಿಯವರೆಗೂ ಒಳಗಡೆ ನಡೆಯುತ್ತಿದ್ದ ಚರ್ಚೆ ಈಗ ಬಹಿರಂಗವಾಗಿ ನಡೆಯುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪರವಾಗಿದ್ದೇವೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸಚಿವರು, ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದರೂ ಕೂಡ, ತೆರೆಮರೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತು ಜೋರಾಗಿದೆ. ರಾಜ್ಯದಲ್ಲೀಗ ಹತ್ತಾರೂ ಮುಖ್ಯಮಂತ್ರಿಗಳು ಹುಟ್ಟಿಕೊಂಡಿದ್ದಾರೆ ಎಂದು ಟೀಕಿಸಿದರು.

ಮುಡಾ, ವಾಲ್ಮೀಕಿ ಹಗರಣದಲ್ಲಿ ಸರಕಾರ ಮುಳುಗಿದೆ. ಇದರಿಂದ ಕಾಂಗ್ರೆಸ್ ರಾಜ್ಯದಲ್ಲಿ ನಿರ್ಣಾಮವಾಗಲಿದೆ. ರಾಜ್ಯ ಸರಕಾರ ತನ್ನ ತಪ್ಪಿನಿಂದ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದ ಜಗದೀಶ ಶೆಟ್ಟರ್, ನಾವು ಆಪರೇಷನ್ ಕಮಲ ಮಾಡುವುದು ಬೇಕಾಗಿಲ್ಲ. ಅವರ ಶಾಸಕ, ಸಚಿವರೇ ಒಬ್ಬರಿಗೊಬ್ಬರ ಕಾಲೆಳೆಯುವಲ್ಲಿ ನಿರತರಾಗಿದ್ದಾರೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವಂದೇ ಭಾರತ್ ರೈಲು ತರಲು ಬದ್ಧನಿದ್ದೇನೆ. ವಂದೇ ಭಾರತ್ ರೈಲು ಬೆಳಗಾವಿಗೆ ತರುವುದಾಗಿ ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಿದ್ದೇನೆ. ಈಗ ಆ ರೈಲು ಹುಬ್ಬಳ್ಳಿಯಿಂದ ಪುಣೆಗೆ ಸಂಚರಿಸಲಿದೆ. ಅದರಂತೆ ಬೆಳಗಾವಿಯಿಂದ ಬೆಂಗಳೂರುವರೆಗೆ ವಂದೇ ಭಾರತ ರೈಲು ಸಂಚಾರ ಆರಂಭಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಇನ್ನು ಬೆಳಗಾವಿ ಮಹಾನಗರ ಪಾಲಿಕೆಯನ್ನು ಆರ್ಥಿಕಾವಾಗಿ ಸುಧಾರಿಸುವುದಕ್ಕಾಗಿ ಎಲ್ಲರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕಿದೆ. ಅಧಿಕಾರಿಗಳ ಯಡವಟ್ಟಿನಿಂದ ಸಮಸ್ಯೆ ಆಗಿದೆ. ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದೇ ಇದ್ದರೆ ಈ ರೀತಿಯ ಸಮಸ್ಯೆ ಆಗುತ್ತದೆ ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.