ರೋಗಿ ಕೊಳಲು ನುಡಿಸುತ್ತಿರುವಾಗಲೇ
ಮೆದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ: ಡಾ.ಶಿವಶಂಕರ
ಬೆಳಗಾವಿ: ರೋಗಿಯ ಕೈಗೆ ಕೊಳಲು ಕೊಟ್ಟು, ರೋಗಿ ಕೊಳಲು ಊದುತ್ತಿರುವಾಗಲೇ ಯಶಸ್ವಿಯಾಗಿ ಮೆದುಳು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಕೊಲ್ಲಾಪುರದ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆಯ ವೈದ್ಯರು ಪಾತ್ರವಾಗಿದ್ದಾರೆ. ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಕ ಡಾ.ಶಿವಶಂಕರ್ ಮರಜಕ್ಕೆ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಸ್ತ್ರಚಿಕಿತ್ಸೆ ಮೂಲಕ ವ್ಯಕ್ತಿಯ ಮೆದುಳಿನಲ್ಲಿದ್ದ ಟ್ಯೂಮರ್ ಗೆಡ್ಡೆ ತೆಗೆಯಲಾಗಿದೆ. ರೋಗಿಗೆ ಯಾವುದೇ ತೊಂದರೆ ಆಗದಂತೆ, ಆರಾಮವಾಗಿ ಕೊಳಲು ಊದುತ್ತಾ ಮಲಗಿರುವಾಗಲೇ ಸುಮಾರು 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.

ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗೆ ಅರವಳಿಕೆ ಇಂಜಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸುತ್ತೇವೆ. ಆಗ ರೋಗಿಗೆ ಯಾವುದೇ ಅರಿವು ಇರುವುದಿಲ್ಲ. ಆದರೆ, ಇಲ್ಲಿ ನಾವು ತಲೆಯ ಮೇಲಿನ ಭಾಗಕ್ಕೆ ಮಾತ್ರ ಅರವಳಿಕೆ ಕೊಟ್ಟಿದ್ದೆವು. ಆ ರೋಗಿಯ ದೇಹದ ಬಾಯಿ, ಮೂಗು, ಕಣ್ಣು, ಕೈ, ಕಾಲುಗಳು ಸೇರಿ ಎಲ್ಲಾ ಭಾಗಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ಡಾ.ಶಿವಶಂಕರ ವಿವರಿಸಿದರು.
ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವತಿಯಿಮದ ಈವರೆಗೂ ಒಟ್ಟು 103 ಮೆದುಳು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬೇರೆ ಕಡೆಗಳೆಲ್ಲಾ ಮೆದುಳು ಶಸ್ತ್ರಚಿಕಿತ್ಸೆಗೆ ಸುಮಾರು 10-15 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ನಮ್ಮ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 1.25 ಲಕ್ಷ ರೂ.ಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೇವೆ. ಇದಕ್ಕೆಲ್ಲಾ ಬಡ ರೋಗಿಗಳ ಮೇಲೆ ಕನೇರಿ ಮಠದ ಸ್ವಾಮೀಜಿ ಕಳಕಳಿಯೇ ಕಾರಣ ಎಂದು ಹೇಳಿದರು.
ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ರೋಗಿ ಎಚ್ಚರ ಇರುವಾಗಲೇ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು ಇಡೀ ಏಷಿಯಾದಲ್ಲೇ ಪ್ರಥಮ. ಅಂಥ ವಿಶಿಷ್ಟ ದಾಖಲೆಗೆ ನಮ್ಮ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಪಾತ್ರವಾಗಿದೆ. ರೋಗಿಯ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಕೊಳಲು ಊದುವಾಗ, ಐಸ್ ಕ್ರೀಮ್ ತಿನ್ನುವಾಗ ಆಪರೇಶನ್ ಮಾಡಲಾಗಿದೆ. ಇನ್ನು ಕೂಲಿ ನಾಲಿ ಮಾಡಿ ಬದುಕು ಸಾಗಿಸುವ ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ 1.25 ಲಕ್ಷ ರೂಪಾಯಿಗೆ ಕಡಿಮೆಗೊಳಿಸಿ, ನಮ್ಮ ನಿಧಿಯಿಂದ ಹಣ ಹೊಂದಿಸಿ, ಶೇ.50ರಷ್ಟು ಮಾತ್ರ ಬಿಲ್ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.