ಗಡಿನಾಡ ಬೆಳಗಾವಿ ರಾಜಕಾರಣವೇ ವಿಚಿತ್ರ. ಇಲ್ಲಿ ಯಾರು ಯಾರಿಗೂ ಶತ್ರುನೂ ಅಲ್ಲ..ಮಿತ್ರನೂ ಅಲ್ಲ. ಅಂದರೆ ಕಾಲಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗುವುದು.
ಇದರ ಜೊತೆಗೆ ಇಲ್ಲಿನಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆಗೆ ಹೆಚ್ಚಿನ ಮಹತ್ವ ಇದೆ. ಹೀಗಾಗಿ ಕೆಲವೊಂದು ಸಂದರ್ಭದಲ್ಲಿ ಹೈಕಮಾಂಡ ಮಾತುಗಳು ನಗಣ್ಯವಾಗುತ್ತವೆ. ಅವರೂ ಅಸಹಾಯಕರಾಗಿ ಬಿಡುತ್ತಾರೆ.
ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ರಾಜಕಾರಣದಲ್ಲಿ ಸೇಡಿಗೆ ಸೇಡು ಎನ್ನುವುದು ನಡೆದಿದೆ.
ಸಿಂಪಲ್ ಆಗಿ ಹೇಳಬೇಕೆಂದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೊಡಿಯಿಂದ ಸ್ಪರ್ಧಿಸಿದ್ದ ಅಣ್ಣಾಸಾಹೇಬ ಜೊಲ್ಲೆ ಪರಾಭವಗೊಳ್ಳಲು ಮಾಜಿ ಸಂಸದ ರಮೇಶ ಕತ್ತಿ ಪ್ರಮುಖ ಕಾರಣ ಎನ್ನುವ ಮಾತಿದೆ. ಸ್ವ ಪಕ್ಷ ದಲ್ಲಿದ್ದುಕೊಂಡೇ ರಮೇಶ ಕತ್ತಿ ಬಿಜೆಪಿಗೆ ಮತ ಬೇಡೆ ಎನ್ನುವ ಸಂದೇಶ ರವಾನಿಸಿದ್ದರಂತೆ.
ಈಗ ರಮೇಶ ಕತ್ತಿ ವಿರುದ್ಧ ಆ ಲೋಕಸಭೆ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಕೆಲಸವನ್ನು ಅಣ್ಣಾಸಾಹೇಬ ಜೊಲ್ಲೆ ಮಾಡಿದ್ದಾರೆ ಅಂದರೆ ಯಾವುದೇ ಸದ್ದು ಗದ್ದಲವಿಲ್ಲದೇ ರಮೇಶ ಕತ್ತಿಯನ್ನು ಡಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಣ ನಡೆಯತ್ತ ಬಾಲಚಂದ್ರ
ಆದರೆ ಇಂತಹ ಜಟಿಲ ವಿಷಯದಲ್ಲಿಯೂ ಕೂಡ ರಾಜಕೀಯ ಜಾಣ್ಮೆ ಮೆರೆದವರು ಎಂದರೆ ಬಾಲಚಂದ್ರ ಜಾರಕಿಹೊಳಿ, ರಾಜಕೀಯದಲ್ಲಿ ಯಾರೂ ವೈರಿನೂ ಅಲ್ಲ, ಮಿತ್ರನೂ ಅಲ್ಲ ಎನ್ನುವುದನ್ನು ಅರಿತಿರುವ ಅವರು, ಮುಂದಿನ ಅಧ್ಯಕ್ಷರ ಆಯ್ಕೆಯನ್ನು ಎಲ್ಲ ನಿರ್ದೇಶಕರ ಜೊತೆಗೆ ಲಕ್ಷ್ಮಣ ಸವದಿ, ಪ್ರಭಾಕರ ಕೋರೆ, ಸಚಿವ ಸತೀಶ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವುದಾಗಿ ಹೇಳಿದರು, ಅದೇನೇ ಇರಲಿ, ಡಿಸಿಸಿ ಬ್ಯಾಂಕ ಅಧಿಕಾರ ಕಳೆದುಕೊಂಡಿರುವ ರಮೇಶ ಕತ್ತಿ ಅವರ ಮುಂದಿನ ನಡೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕು.