Headlines

ಕಿತ್ತೂರು ಉತ್ಸವದಲ್ಲಿ ಬೌನ್ಸರ್ ಗಳಿಂದಲೇ ಕಿರಿಕ್– ಜನ ದೂರ ದೂರ

ಬೆಳಗಾವಿ:

ಬ್ರಿಟೀಷರ ವಿರುದ್ಧ ಸೆಣಸಾಡಿ ಹೋರಾಟ ಮಾಡಿದ ಕೆಚ್ಚೆದೆಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮಳ 200 ವರ್ಷದ ಉತ್ಸವಕ್ಕೆ ಏನಾದರೂ ಆತಂಕವಿದೆಯೇ?

ಅಥವಾ ರಾಣಿ ಚನ್ನಮ್ಮಳಿಂದ ಒದೆತಿಂದು ಭಾರತ ಬಿಟ್ಡು ತೊಲಗಿದ ಬ್ರಿಟೀಷರು ಮತ್ತೇ ಉತ್ಸವಕ್ಕೆ ಬರ್ತಿದ್ದಾರಾ?

ಇದೊಂದು ಕಪೋಲಕಲ್ಪಿತ ಪ್ರಶ್ನೆ ಎನಿಸಿದರೂ ಉತ್ಸವದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ಹೊರತುಪಡಿಸಿ ಖಾಸಗಿ ಬೌನ್ಸರಗಳನ್ನು ನೇಮಕ‌ ಮಾಡಿದ್ದನ್ನು ಗಮನಿಸಿದರೆ ಸಹಜವಾಗಿ ಇಂತಹ ಹತ್ತಾರು ಪ್ರಶ್ನೆಗಳು ಕೇಳಿ ಬರುತ್ತವೆ.

ಕಿತ್ತೂರಿನ ಇತಿಹಾಸದಲ್ಲಿ ಎಂದಿಗೂ ಪೊಲೀಸರನ್ನು ಹೊರತುಪಡಿಸಿ ಲಕ್ಷಾಂತರ ರೂ ವೆಚ್ಚ ಮಾಡಿ ಖಾಸಗಿ ಬೌನ್ಸರ್ ಗಳನ್ನು ನೇಮಕ ಮಾಡಿದ ಉದಾಹರಣೆಯಿಲ್ಲ. ಇದೊಂದು ರೀತಿಯಲ್ಲಿ ಉತ್ಸವಕ್ಕೆ ಕಪ್ಪು ಚುಕ್ಕೆ ಎಂದೇ ಹೇಳಬಹುದು.

ಹೋಗಲಿ.ಬೌನ್ಸರ್ ಗಳು ಬಂದು ತಮ್ಮ ಕೆಲಸ ಮಾಡಿದ್ದರೆ ಕಿತ್ತೂರಿನ ಚನ್ನಮ್ಮನ ಅಭಿಮಾನಿಗಳು ಯಾವುದೇ ರೀತಿಯ ಪ್ರಶ್ನೆ ಮಾಡುತ್ತಿರಲಿಲ್ಲ.

ಆದರೆ ಕಪ್ಪು ಬಣ್ಣದ ಬಟ್ಟೆ ತೊಟ್ಟು ಬಂದ ಬೌನ್ಸರ್ ಗಳು ಉತ್ಸವಕ್ಕೆ ಬಂದ ಜನರೊಂದಿಗೆ ಅನಗತ್ಯವಾಗಿ ಕಿರಿಕ್ ಶುರು ಹಚ್ಚಿಕೊಂಡರು ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಕಿತ್ತೂರಿನ ಬಹುತೇಕ ಜನ ವೇದಿಕೆಯತ್ತ ಬರಲೇ ಇಲ್ಲ. ಇದೇ ಕಾರಣದಿಂದ ಮುಖ್ಯ ಕಾರ್ಯಕ್ರಮ ದಲ್ಲಿ‌ಆಸನಗಳು ಖಾಲಿ ಖಾಲಿ ಕಂಡವು. ಇದು ಒಂದು ರೀತಿಯ ಮುಜುಗುರಕ್ಕೂ ಕಾರಣವಾಯಿತು.

ಪೊಲೀಸ್ ಇಲಾಖೆಯಿಂದ ಕಿತ್ತೂರು ಉತ್ಸವಕ್ಕೆ 9 ಡಿವೈಎಸ್ಪಿ, 26 ಸಿಪಿಐ, 56. ಎಎಸ್ಐ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿತ್ತು.
ಪೊಲೀಸರು ಕಿತ್ತೂರು ಉತ್ಸವಕ್ಕೆ ಬರುವ ಜನರಿಗೆ ಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಆದರೆ ಖಾಸಗಿ ಬೌನ್ಸರ್ ಗಳು ಸಾರ್ವಜನಿಕರೊಂದಿಗೆ ಜೋರಾಗಿ, ಕೆಟ್ಟ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ.

ನಮ್ಮದು ಗುಲಾಮ ಮನಸ್ಥಿತಿಯಲ್ಲ. ಅವರ ದರ್ಪದ ಮಾತು ಕೇಳಿ ಸಭಾಂಗಣದ ಒಳಗಡೆ ಬರಲು ಮನಸ್ಸಾಗುತ್ತಿಲ್ಲ.‌ ಇಲ್ಲಿಯವರೆಗೆ ನಡೆದ ಕಿತ್ತೂರು ಉತ್ಸವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಮರ್ಥವಾಗಿ ಮಾಡಿಕೊಂಡು ಬಂದಿದೆ. ಆದರೆ 200ನೇ ವರ್ಷದ ಕಿತ್ತೂರು ಉತ್ಸವದಲ್ಲಿ ಪೊಲೀಸರಿಗಿಂತ ಖಾಸಗಿ ಬಾನ್ಸರ್ ಗಳೇ ಹೆಚ್ಚಾಗಿ ಕಂಡು ಬಂದಿದ್ದು ಪೊಲೀಸ್ ಇಲಾಖೆಯ ಮೇಲೆಯೇ ಕಿತ್ತೂರಿನ ಜನ ಅನುಮಾನ ಪಡುತ್ತಿದ್ದಾರೆ‌.


ಮಾಧ್ಯಮದವರು ವೇದಿಕೆಯಿಂದ ದೂರ;
ಕಿತ್ತೂರು ಉತ್ಸವದಲ್ಲಿ ಈ ಬಾರಿ ಮಾಧ್ಯಮದವರನ್ನು ವೇದಿಕೆಯಿಂದ ದೂರ ಕುಳ್ಳಿರಿಸಿರುವುದು ಕೂಡಾ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರತೀ ಉತ್ಸವದಲ್ಲಿ ಮುಂಭಾಗದಲ್ಲಿ ಮಾಧ್ಯಮ ದವರಿಗೆ ಸ್ಥಳಾವಕಾಶ ಮಾಡಲಾಗುತ್ತಿತ್ತು. ಈ ಬಾರಿ ಅದ್ಯಾಕೋ ಏನೋ ವೇದಿಕೆಯೇ ಕಾಣದಂತೆ ಕಣ್ಣು ಕುಕ್ಕುವ LED ಸ್ಕ್ರೀನ್ ನಲ್ಲಿ ಕಾರ್ಯಕ್ರಮ ನೋಡಬೇಕಾದ ದಯನೀಯ ಪರಿಸ್ಥಿತಿ ಬಂದಿತು.

Leave a Reply

Your email address will not be published. Required fields are marked *

error: Content is protected !!