ಬೆಳಗಾವಿ ಚಳಿಗಾಲ ಅಧಿವೇಶನವೇ
ಸಿಎಂ ಸಿದ್ಧರಾಮಯ್ಯರ ಕೊನೆ ಅಧಿವೇಶನ
ಬೆಳಗಾವಿ:
ಡಿಸೆಂಬರ್ ನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊನೆಯ ಅಧಿವೇಶನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದನೇ ಆರೋಪಿ ಸ್ಥಾನದಲ್ಲಿದ್ದಾರೆ. ಹೀಗಾಗಿ, ಬೆಳಗಾವಿ ಅಧಿವೇಶನವೇ ಕೊನೆಯಾಗಲಿದೆ.ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಹರಾಜಿಗಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಹೆಣಗಾಡುತ್ತಿರುವ ಸರ್ಕಾರದಲ್ಲಿ ಹಣವೇ ಇಲ್ಲ. ಶಾಸಕರಿಗೆ ಅನುದಾನದ ಕೊಡಲೂ ಸಹ ಸಿದ್ದರಾಮಯ್ಯನವರಿಗೆ ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಬಳಿ 66 ಶಾಸಕರಿದ್ದಾರೆ. ಆದರೆ, ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಖರೀಸಲು 50 ಕೋಟಿ, 100 ಕೋಟಿ ರೂ.ಗಳ ಆಫರ್ ನೀಡುತ್ತಿದ್ದಾರೆ ಎಂದು ಸುಳ್ಳು ಹೇಳತೊಡಗಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಭೀತಿ ಎದುರಾಗಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ವಿರುದ್ಧ ಇಂತಹ ತಳಬುಡವಿಲ್ಲದ ಅಪಪ್ರಚಾರ ನಡೆಸಿದ್ದಾರೆ. ರಾಜ್ಯದ ಕಾಂಗ್ರೆಸ್ ಶಾಸಕರನ್ನು ನಾವು ಯಾರೂ ಕೂಡ ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ್, ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.