Headlines

ರುದ್ರೇಶ ಆತ್ಮಹತ್ಯೆ ಕೇಸ್..ಮತ್ತೊಂದು ಪತ್ರ ಬಹಿರಂಗ..!?

2 ನೇ ಅನಾಮಧೇಯ ಪತ್ರದಲ್ಲೇನಿದೆ?
ರಾಷ್ಟ್ರಪತಿ ಪ್ರಧಾನಿ ಕಚೇರಿ ಮೆಟ್ಟಿಲು ಹತ್ತಿದ
ರುದ್ರೇಶ ಆತ್ಮಹತ್ಯೆ ಪ್ರಕರಣ..!

ತಹಶೀಲ್ದಾರಗೆ ಜಾಮೀನು ಸಿಕ್ಕಾಗ ಸಿಹಿ ಹಂಚಿದ್ರಾ?

ಆ ಪತ್ರದಲ್ಲಿ ಕಚೇರಿ ಸಿಬ್ಬಂದಿಗಳ ಯಾರ ಯಾರ ಹೆಸರಿದೆ ಗೊತ್ತೆ?

ಅವರನ್ನೆಲ್ಲಾ ಕರೆದು ವಿಚಾರಣೆ ಮಾಡ್ತಾರಾ ಪೊಲೀಸರು?

ಈ ಹಿಂದೆ ಮತ್ತೊಂದು ಆತ್ಮಹತ್ಯೆ ನಡೆದಿತ್ತಾ? ತಹಶೀಲ್ದಾರ ಕಚೇರಿಯಲ್ಲಿ ಮಾನಸಿಕ ಹಿಂಸೆ ನಿತಗಯ ನಿರಂತರವಾ?.

ಕಚೇರಿ ಜವಾನರೊಬ್ಬರ ಸಾವು ಮುಚ್ಚಿ ಹಾಕಿದ್ರಾ?

ಬೆಳಗಾವಿ.
ಇಲ್ಲಿನ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ ಯಡವಣ್ಣವರ ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣ ಈಗ ರಾಷ್ಟ್ರಪತಿ ಕಚೇರಿ ಮೆಟ್ಟಿಲು ತುಳಿದಿದೆ.
ಕಳೆದ ಕೆಲ ದಿನಗಳ ಹಿಂದೆ ಇದೇ ರುದ್ರೇಶ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಧೇಯ ಪತ್ರ ಸದ್ದು ಮಾಡಿತ್ತು.

ಆದರೆ ಅದನ್ನು ಪೊಲೀಸರು ಗಂಭಿರವಾಗಿ ಪರಿಗಣಿಸಲೇ ಇಲ್ಲ. ಈಗ ಎರಡುವರೆ ಪುಟದ ಮತ್ತೊಂದು ಅನಾಮಧೇಯ ಪತ್ರ ಎಲ್ಲ ಮಾಧ್ಯಮ ಕಚೇರಿಗಳಿಗೆ ಅಷ್ಟೇ ಅಲ್ಲ ರಾಷ್ಟ್ರಪತಿ ಸೇರಿದಂತೆ ಪ್ರಧಾನಿ ಕಚೇರಿ, ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ರವಾನೆಯಾಗಿದೆ.

ಈ ಪತ್ರದಲ್ಲಿ ಉಲ್ಲೇಖ ಮಾಡಿರುವ ಸಂಗತಿಗಳು ಅತ್ಯಂತ ಗಂಭೀರವಾಗಿವೆ. ಅದರಲ್ಲಿ ಯಾರು ಈ ಪ್ರಕರಣವನ್ನು ಮುಚ್ಚಿಹಾಕುತ್ತಿದ್ದಾರೆ ಎನ್ನುವುದು ಸೇರಿದಂತೆ ಎಲ್ಲರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.
ಆದರೆ ಪೊಲೀಸರು ಮಾತ್ರ ಸರ್ಕಾರದ ಸುತ್ತೋಲೆ ಉಲ್ಲೇಖಿಸಿ ಅನಾಮಧೇಯ ಪತ್ರಕ್ಕೆ ಮಾನ್ಯತೆ ಇಲ್ಲ ಎಂದು ಹೇಳುತ್ತ ಕುಳಿತು ಬಿಟ್ಟಿದ್ದಾರೆ.

ಹೀಗಾಗಿ ಇಲ್ಲಿ ಸತ್ಯ ಮರೆಮಾಚುವ ಕೆಲಸವೂ ಕೂಡ ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಮೂಲಗಳ ಪ್ರಕಾರ ಬರುವ ದಿ. 9 ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿಈ ವಿಷಯ ಪ್ರತಿಧ್ವನಿಸುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿ ಕಾಣಸಿಗುತ್ತಿವೆ.
ಈ ಪತ್ರದಲ್ಲಿನ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಹಶೀಲ್ದಾರ ಕಚೇರಿಯಲ್ಲಿ ನಡೆದ ಎಲ್ಲ ಘಟನೆ ಗೊತ್ತಿದ್ದವರೇ ಈ ಅನಾಮಧೇಯ ಪತ್ರ ಬರೆದಿರಬಹುದು ಎನ್ನಲಾಗುತ್ತಿದೆ. ಈ ರೀತಿ ಪತ್ರ ಬರೆಯಲು ಕಾರಣ ಏನು ಎನ್ನುಚ ಅಂಶವನ್ನು ಇಲ್ಲಿ ಉಲ್ಲೇಖ ಮಾಡಲಾಗಿದೆ
ಆದರೆ ಈ ಪ್ರಕರಣದಲ್ಲಿ ತಹಶೀಲ್ದಾರರೇ ಮುಖ್ಯ ಆರೋಪಿಯಾಗಿದ್ದರಿಂದ ಯಾರೂ ಬಹಿರಂಗವಾಗಿ ಬಂದು ಹೇಳುತ್ತಿಲ್ಲ ಎನ್ನಲಾಗುತ್ತಿದೆ.

ಅನಾಮಧೇಯ ಪತ್ರದಲ್ಲಿ ಏನಿದೆ ಗೊತ್ತೆ?
ರುದ್ರೇಶ ಯಡವಣ್ಣವರ ಸಾವಿಗೆ ಕಾರಣವಾದ ತಹಶೀಲ್ದಾರ ಹಾಗೂ ಇತರರಿಗೆ ಕೆಲವು ಸಿಬ್ಬಂದಿಗಳು ಸಹಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಸಿಬ್ಬಂದಿಗಳ ತಲೆತುಂಬಿ ವಿಚಾರಣೆಯ ದಿಕ್ಕು ತಪ್ಪಿಸುತ್ತಿರುವುದರಿಂದ ಪ್ರಕರಣವನ್ನು CBI ಗೆ ಒಪ್ಪಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿ ಕೊಳ್ಳಲಾಗಿದೆ.

ರುದ್ರೇಶ ಸಾವಿನ ಕುರಿತು ಸಾಕಷ್ಟು ಅನುಮಾನಗಳಿವೆ. ಈ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ತಹಶೀಲ್ದಾರ ಕಛೇರಿಯ ಸಿಬ್ಬಂದಿಗಳು ಆರೋಪ ಸ್ಥಾನದಲ್ಲಿರುವ ತಹಶೀಲ್ದಾರರಿಗೆ ಬೆನ್ನೆಲುಬಾಗಿ ನಿಂತಿದ್ದಾರೆಂದು ಉಲ್ಲೇಖ ಮಾಡಲಾಗಿದೆ.
ಕಚೇರಿಯ ಕೆಲ ಸಿಬ್ಬಂದಿಗಳಿಗೆ ಏನು ತಿಳಿದಿಲ್ಲಾ ಎನ್ನುವಂತೆ ಹೇಳಿಕೆ ಕೊಡಬೇಕೆಂದು ಅಲ್ಲಿನ ಗ್ರಾಮ ಆಡಳಿತಾಧಿಕಾರಿಗಳು ಸೂಚನೆ ಕೊಡುತ್ತಿದ್ದಾರೆಂದು
ಓರ್ವ ಮಹಿಳೆ ಸೇರಿದಂತೆ ನಾಲ್ವರ ಹೆಸರನ್ನು ಪತ್ರದಲ್ಲಿ ಪ್ರಸ್ತಾಪ ಮಾಡಲಾಗಿದೆ

ಘಟನೆ ನಡೆದ ದಿನ ಖಾಡೇಬಜಾರ ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲು ರುದ್ರೇಶನ ಪತ್ನಿ ಗಿರಿಜಾ ಅಂಕಲಗಿ ಜೊತೆಗೆ ಹೋಗಿದ್ದ ತಹಶೀಲ್ದಾರ ಕಚೇರಿಯ ಮಹಿಳಾ ಸಿಬ್ಬಂದಿ ಪ್ರಕರಣ ದಾಖಲಾಗದಂತೆ ಒತ್ತಡ ಹೇರಿದ್ದರು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ ಈಗ `ಸತ್ತವನು ಸತ್ತಿದ್ದಾನೆ. ಮುಂದೆ ಏನು ಆಗಬೇಕು’ ಎಂದು ಗಮನ ಹರಿಸುವಂತೆ ತಿಳಿಸಿ ದೂರುದಾರರ ದಿಕ್ಕು ತಪ್ಪಿಸಲು ಪ್ರಯತ್ನ ನಡೆಸಿದ್ದರು ಎನ್ನುವ ಆಘಾತಕಾರಿ ಸಂಗತಿ ಕೂಡ ಪತ್ರದಲ್ಲಿ ಉಲ್ಲೇಖವಾಗಿದೆ.

ಹಿಂದೆನೂ ಆತ್ಮಹತ್ಯೆ ಆಗಿತ್ತಾ?
ಈ ಹಿಂದೆ ತಹಶೀಲ್ದಾರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜವಾನನ ಆತ್ಮಹತ್ಯೆಗೂ ಮಹಿಳಾ ಸಿಬ್ಬಂದಿಯೊಬ್ಬರೇ ಕಾರಣ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ,
ಆ ಸಂದರ್ಭದಲ್ಲಿ ಚಾಲಕ ಮತ್ತು ಇನ್ನೊಬ್ಬ ಪ್ರಭಾವಿ ಸಿಬ್ಬಂದಿ ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದು ಅನಾಮಧೇಯ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.

ಅನಾಮಧೇಯ ಪತ್ರ.

ಕಳೆದ ದಿ. 14 ರಂದು ಅಪಾದಿತ ತಹಶೀಲ್ದಾರರಿಗೆ ಜಾಮೀನು ಮಂಜೂರು ಆದ ದಿನ ಕೆಲ ಸಿಬ್ಬಂದಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ, ಅಷ್ಟೇ ಅಲ್ಲ ಸಿಬ್ಬಂದಿಗಳಿಗೆ ತಹಶೀಲ್ದಾರರ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ತಾಕೀತು ಸಹ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ಪ್ರಕರಣದಲ್ಲಿ ತಾಲುಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಿಬ್ಬಂದಿಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುತ್ತಿದೆ ಎಂದು ದೂರಲಾಗಿದೆ.

ಮಾನಸಿಕ ಹಿಂಸೆ?
ಈ ಹಿಂದೆ ತಹಶೀಲ್ದಾರ ವಿರುದ್ಧ ಮಾತನಾಡುವ ಸಿಬ್ಬಂದಿಗಳಿಗೆ ಮಾನಸಿಕ ಹಿಂಸೆಯನ್ನು ತಹಶೀಲ್ದಾರರ ಮುಖಾಂತರ ಕೊಟ್ಟಿರುವ ಉದಾಹರಣೆಗಳು ಇವೆ. ಆದ್ದರಿಂದ ಈಗ ಅವರ ವಿರುದ್ಧ ಮಾತನಾಡುವ ಸಾಹಸವನ್ನು ಯಾವ ಸಿಬ್ಬಂದಿಗಳೂ ಸಹ ಮಾಡುತ್ತಿಲ್ಲ ಎಂದು ಅನಾಮಧೇಯ ಪತ್ರ ಬರೆಯಲು ಕಾರಣವನ್ನು ನೀಡಲಾಗಿದೆ.
ಅವರೆಲ್ಲಿ?
ಈ ಘಟನೆ ನಡೆದ ದಿನದಿಂದ ಸಿಬ್ಬಂದಿಯೊಬ್ಬರು ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದರೆ ಕೇಸ್ ಸಲುವಾಗಿ ಹೋಗುತ್ತಿದ್ದಾರೆ ಎಂದು ಗೊತ್ತಾಗಿದೆ. ಆದ್ದರಿಂದ ಅವರನ್ನೂ ಕೂಡ ವಿಚಾರಣೆಗೊಳಪಡಿಸಿದರೆ ಸತ್ಯಾಸತ್ಯತೆ ಗೊತ್ತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೆಲ ದಿನಗಳ ಹಿಂದೆ ಬೆಳಗಾವಿ ತಾಲೂಕಿನ ಅಷ್ಟೇ ಗ್ರಾಮದ ಜಮೀನು ಮಾಲಿಕ ಆತ್ಮಹತ್ಯೆಗೆ ಯಾರು ಕಾರಣ ಎನ್ನುವುದನ್ನು ಪತ್ರದಲ್ಲಿ ವಿವರಿಸಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ಒತ್ತಡಕ್ಕೊಳಗಾಗಿ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!