ಸಾಯುವ ತನಕ ಜೈಲು

ಕಂದಮ್ಮನ ಮೇಲೆ ಅತ್ಯಾಚಾರ ಎಸಗಿದವನಿಗೆ ಸಾಯುವ ತನಕ ಜೈಲು
ಬೆಳಗಾವಿ: ಎರಡೂವರೆ ವರ್ಷದ ಪುಟ್ಟ ಕಂದಮ್ಮನ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ
ಕೊಲೆ ಮಾಡುವುದಕ್ಕೆ ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯ ಸಾಯುವ ತನಕವೂ ಕಠಿಣ ಜೈಲು ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.


ನೇಸರಗಿ ಠಾಣಾ ವ್ಯಾಪ್ತಿಯಲ್ಲಿ ೨೦೧೭ರಲ್ಲಿ ಈ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಎರಡು ವರ್ಷ ಆರು ತಿಂಗಳು ವಯಸ್ಸಿನ ಬಾಲಕಿಯ ಮೇಲೆ
ಬೈಲಹೊಂಗಲ ತಾಲ್ಲೂಕು ವಣ್ಣೂರಿನ ಸುಭಾಷ ಮಹಾದೇವ ನಾಯಕ(೨೧) ಎಂಬಾತ ಅತ್ಯಾಚಾರವನ್ನು
ಎಸಗಿ ಕತ್ತು ಹಿಸುಕಿ ಕೊಲ್ಲಲು ಪ್ರಯತ್ನಿಸಿ ಮಣ್ಣಿನಲ್ಲಿ ಮುಚ್ಚಿಹಾಕುವುದಕ್ಕೆ
ಯತ್ನಿಸುವ ವೇಳೆ ಸಿಕ್ಕಿ ಬಿದ್ದಿದ್ದಾನೆ.
ನೇಸರಗಿ ಠಾಣೆಯ ತನಿಖಾಧಿಕಾರಿ ಎಚ್ ಸಂಗನಗೌಡರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ
ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪೋಕ್ಸೋ ನ್ಯಾಯಾಲಯದ
ನ್ಯಾಯಾಧೀಶರಾದ ಶ್ರೀಮತಿ ಸಿ ಎಂ. ಪುಷ್ಪಲತಾ ಅವರು ಪ್ರಕರಣವನ್ನು ವಿಚಾರಣೆ ನಡೆಸಿ ೩೩
ಸಾಕ್ಷಿಗಳ ವಿಚಾರಣೆ ನಡೆಸಲಾಯಿತು. ೪೬ ದಾಖಲೆ, ೧೩ ಮುದ್ದೆಮಾಲುಗಳ ಆಧಾರದ ಮೇಲೆ
ಆರೋಪಿ ಸುಭಾಷ ನಾಯ್ಕನಿಗೆ ಸಾಯುವ ತನಕವೂ ಜೈಲು ಹಾಗೂ ೩೦,೦೦೦ ರೂಪಾಯಿ ದಂಡ ವಿಧಿಸಿ
ತೀರ್ಪು ನೀಡಿದೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ೧ ಲಕ್ಷ ರೂ. ಪರಿಹಾರಧನವನ್ನು
ಪಡೆಯಲು ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ
ಅಭಿಯೋಜಕರಾದ ಎಲ್. ವಿ ಪಾಟೀಲ ಅವರು ಮಂಡಿಸಿದರು.

Leave a Reply

Your email address will not be published. Required fields are marked *

error: Content is protected !!