ಬೆಳಗಾವಿ.
ಗಡಿನಾಡ ಬೆಳಗಾವಿ ಪೊಲೀಸರಿಗೆ ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳದಿದ್ದರೆ ತಿಂದಿದ್ದು ಕರಗುವುದಿಲ್ಲ.
ಸುವರ್ಣ ವಿಧಾನ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ನಡುವೆ ನಡೆದ ಮಾತಿನ ಕಾಳಗದಲ್ಲಿ ಬೆಳಗಾವಿ ಪೊಲೀಸ್ ಅಧಿಕಾರಿಗಳು ಯಾರನ್ನೋ ಓಲೈಸಲು ಹೋಗಿ ಎಂತೆಂತಹ ವಿವಾದಗಳನ್ನು ಎಳೆದುಕೊಂಡರು ಎನ್ನುವುದು ಗೊತ್ತಿರುವ ಸಂಗತಿ.
ಹಾಗೇ ನೋಡಿದರೆ ಅದರಿಂದ ಪಾಠ ಕಲಿತು ಮುಂದೆ ಯಡವಟ್ಟು ಆಗದಂತೆ ಎಚ್ಚರಿಕೆ ಹೆಜ್ಜೆ ಇಡುವ ಕೆಲಸವನ್ನು ಬೆಳಗಾವಿ ಪೊಲೀಸರು ಮಾಡಬೇಕಿತ್ತು.
ಆದರೆ, ಈಗ ಮತ್ಯಾರನ್ನೋ ಓಲೈಸುವ ಭರದಲ್ಲಿ ಪೊಲೀಸರು ಮತ್ತೊಂದು ದೊಡ್ಡಮಟ್ಟದ ಯಡವಟ್ಟು ಮಾಡಿಕೊಂಡಿದ್ದಾರೆ.
ಆದರೆ ಇದು ಪೊಲೀಸ್ ಆಯುಕ್ತರಿಗೆ ಮುಜುಗುರ ತಂದಿದೆ.

ಇದು ಈಗ ಸರ್ಕಾರಕ್ಕೆ ದೊಡ್ಡ ಮುಜುಗುರ ತಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
125 ಜನರಿದ್ದ ಬಸ್ಸನಲ್ಲಿ ಪೋಕ್ಸೋ ಕೇಸ್..!
ಭರ್ತಿ ತುಂಬಿದ ಬಸ್‌ನಲ್ಲಿ ವಯಸ್ಸಾದ ಕಂಡಕ್ಟರ್ ಪೋಕ್ಸೋ ಕೇಸ್ ಆಗುವ ರೀತಿಯಲ್ಲಿ ನಡೆದುಕೊಳ್ಳಬಹುದಾ?
ಇಂತಹ ಸಾಮಾನ್ಯ ಪ್ರಶ್ನೆಯನ್ನು ಎಷ್ಟೇ ಹಸೀ ದಡ್ಡನನ್ನು ಕೇಳಿದರೂ ಸಾಧ್ಯವೇ ಇಲ್ಲ ಎನ್ನುವ ಉತ್ತರ ಕೊಡುತ್ತಾನೆ.

ಆದರೆ ಕಾನೂನು ರಕ್ಷಕರು, ನ್ಯಾಯ, ಅನ್ಯಾಯ ವನ್ನು ಅರ್ಥೈಸಿಕೊಳ್ಳುವ ಪೊಲೀಸರಿಗೆ ಇದು ಅರ್ಥವಾಗಲಿಲ್ಲ ಅಂದರೆ ನಂಬಲು ಸಾಧ್ಯವೇ ಎನ್ನುವ ಪ್ರಶ್ನೆ ಮಾಡಲಾಗುತ್ತದೆ.
ಮರಾಠಿಗರ ಓಲೈಕೆ..
ಸಾರಿಗೆ ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆ ಆರೋಪಿಗಳಿಂದಲೇ ಪೋಕ್ಸೋ ಕೇಸ್ ದಾಖಲಿಸಿಕೊಂಡಿದ್ದನ್ನು ಗಮನಿಸಿದರೆ ಇದರ ಹಿಂದೆ – ಕಾಣದ ಕೈ ಕೆಲಸ ಮಾಡಿದೆ ಎನ್ನುವ ಅನುಮಾನ ಬಾರದೇ ಇರದು.
ಈ ಘಟನೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದಿದೆ.ಈಗ ಇದು ಎರಡು ರಾಜ್ಯಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಿದೆ.

ಆದರೆ ಇಲ್ಲಿಯವರೆಗೆ ಆ ಕ್ಷೇತ್ರದ ಶಾಸಕಿಯಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಇದುವರೆಗೂ ಘಟನೆಯನ್ನು ಖಂಡಿಸುವ ಗೋಜಿಗೆ ಹೋಗಿಲ್ಲ.
ಇಲ್ಲಿ ಅದರ ಬಗ್ಗೆ ಮಾತಾಡಿದರೆ ಮರಾಠಿಗರು ಮುನಿಸಿಕೊಳ್ಳಬಹುದು. ಮತ್ತು ತಮ್ಮ ಮತ ಬ್ಯಾಂಕ್ ತಪ್ಪಬಹುದು ಎನ್ನುವ ಅಳಕು ಇದಕ್ಕೆ ಕಾರಣ ಎನ್ಮಬಹುದು.
ಅಚ್ಚರಿ ಸಂಗತಿ ಎಂದರೆ ಬೆಳಗಾವಿಯ ಯಾವೊಬ್ಬ ಬಿಜೆಪಿ ನಾಯಕರೂ ಸಹ ಇದರ ಬಗ್ಗೆ ಮಾತಾಡಿಲ್ಲ. ಇದು ಕನ್ನಡಿಗರ ಪಿತ್ತ ನೆತ್ತಿಗೇರುವಂತೆ ಮಾಡಿದೆ..
ಇವತ್ತು ಆಗಿದ್ದೇನು?

ಹಲ್ಲೆಗೊಳಗಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದ ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆ ಮಾರಿಹಾಳ ಪೊಲೀಸರು ಪೋಕ್ಸೋ ಕೇಸ್ ಹಾಕಿದ್ದಾರೆ.
ಇದನ್ನು ತೀವ್ರವಾಗಿ ಖಂಡಿಸಿದ ಕರವೇ ಮತ್ತು ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಅಷ್ಟೇ ಅಲ್ಲ ಮಾರಿಹಾಳ ಠಾಣೆಗೆ ಮುತ್ತಿಗೆ ಸಹ ಹಾಕಿ ಪ್ರತಿಭಟಿಸಿದರು.