Headlines

ಕಂಡಕ್ಟರ್ ಮೇಲಿನ‌ ಹಲ್ಲೆ..ತಪ್ಪಿತಸ್ಥರಿಗೆ ಪಾಠ ಆಗಲಿ

ಬೆಳಗಾವಿ.
ಕಂಡಕ್ಟರ್ ಮೇಲಿನ ಹಲ್ಲೆ ಮತ್ತು ನಂತರ ನಡೆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಬಾರದೇ ಇರದು.


ಸರ್ಕಾರ ಅದರಲ್ಲೂ ಗೃಹ ಇಲಾಖೆ ಎನ್ನುವುದು ಜೀವಂತ ಇದ್ದಿದ್ದರೆ ಹಲ್ಲೆಗೊಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಕಂಡಕ್ಟರ್ ಮೇಲೆ ಪೋಸ್ಕೋ ದಾಖಲಿಸಿದ ಸಿಪಿಐ ಅವರನ್ನು ಮುಲಾಜಿಲ್ಲದೇ ಮನೆಗಟ್ಡುವ ಕೆಲಸ ಮಾಡುತ್ತಿತ್ತು.

ಆದರೆ ಈಗ ಎಲ್ಲವೂ ನೀ ಅತ್ತಂಗ ಮಾಡು.. ನಾನು ಕರೆದಂಗ್ ಮಾಡ್ತೇನಿ ಎನ್ನುವ ಹಾಗೆ ನಡೆದಿದೆ. ಅಂದರೆ ಮೂಗಿಗೆ ತುಪ್ಪ ಸವರಿದಂತೆ.!
ಇಲ್ಲಿ ಪೋಸ್ಕೋ ಕೇಸ್ ದಾಖಲಿಸುವ ಮುನ್ನ ಸಾಮಾನ್ಯ ಜ್ಞಾನ ಆ ಸಿಪಿಐ ಉಪಯೋಗಿಸಿದ್ದರೆ ಖಂಡಿತ ಈ ಪ್ರಕರಣ ಇಷ್ಟೊಂದು ಬೆಳೆಯುತ್ತಿರಲೇ ಇಲ್ಲ.

ಭರ್ತಿ ತುಂಬಿದ ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ವಾಗಿದೆ ಎಂದು ಸುಳ್ಳು ಕೇಸ್ ಕೊಡಲು ಬಂದಿದ್ದಾರೆ ಎನ್ನುವುದು ಗೊತ್ತಿದ್ದರೂ ಕೂಡ ಯಾರ ಗಮನಕ್ಕೂ ತಾರದೇ FIR ಮಾಡುತ್ತಾರೆ ಅಂದರೆ ಇದರ ಹಿಂದಿರುವ ಉದ್ದೇಶದ ಬಗ್ಗೆ ತನಿಖೆ ಮಾಡಬೇಕಾದ ಅನಿವಾರ್ಯತೆ ಇದೆ.

ಅಷ್ಟೇ ಅಲ್ಲ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಕೂಡ ಪೊಲೀಸರು ಇದನ್ನು ಲಘುವಾಗಿ ಪರಿಗಣಿಸಿದ್ದರು. ಅಂತದ್ದೇನಿಲ್ಲರಿ, ಸಣ್ಣ ಟಿಕೆಟ್ ಜಗಳ, ವಿನಾಕಾರಣ ಇದನ್ನು ಕನ್ನಡ ಸಂಘಟನೆಗಳು ದೊಡ್ಡದಾಗಿ ಮಾಡುತ್ತಿವೆ ಎನ್ನುವ ಭಂಡತನದ ಮಾತುಗಳು ಪೊಲೀಸ್ ಇಲಾಖೆಯಿಂದಲೇ ಬಂದಿದ್ದವು.

ಇದರ ಜೊತೆಗೆ ಪ್ರಕರಣವನ್ನು ಹತ್ತಿಕ್ಕುವ ಕೆಲಸವೂ ತೆರೆಮರೆಯಲ್ಲಿ ವ್ಯವಸ್ಥಿತವಾಗಿ ನಡೆದಿತ್ತು.
ಆದರೆ ಕನ್ನಡ ಸಙಘಟನೆಗಳು ಯಾವಾಗ ಕಂಡಕ್ಟರ್ ನನ್ನು ಆಸ್ಪತ್ರೆಯಲ್ಲಿ ಭೆಟ್ಟಿ ನೀಡಿ ಬೀದಿಗಿಳಿದ ನಂತರ ಪೊಲೀಸ ಇಲಾಖೆ ಎಚ್ಚರವಾಗತೊಡಗಿತು. ಆಗ ಹಲ್ಲೆಕೋರ ಪುಂಡರು 20 ಜನರಿದ್ದರೂ ಕೇವಲ 5 ಜನರನ್ನು ಬಂಧಿಸಿ ಜೈಲಿಗಟ್ಟಿದರು.

ಕನ್ನಡಿಗರ ರಕ್ಷಣೆಗೆ ಹೋರಾಟ…!
ಕನ್ನಡ ನಾಡು ನುಡಿಗಾಗಿ ಸರ್ಕಾರ ಕಟಿಬದ್ಧ ಎನ್ನುವ ಹೇಳಿಕೆಗಳು ಭರ್ಜರಿಯಾಗಿ ಬರುತ್ತಲೇ ಇವೆ.
ಆದರೆ ಅಸಲಿಗೆ ಆ ಮಾತುಗಳಿಗೆ ತಕ್ಕಂತೆ ಕನ್ನಡಿಗರಿಗೆ ಸುರಕ್ಷತೆ ಇದೆಯೇ ಎನ್ನುವುದನ್ನು ನೋಡ ಹೊರಟರೆ ಉತ್ತರ ಶೂನ್ಯ.!

ಇಲ್ಲಿ ಕನ್ನಡಿಗರೇ ಕನ್ನಡ ಉಳಿವಿಗಾಗಿ, ತಮ್ಮ ಮೇಲಾಗುತ್ತಿರುವ ದೌರ್ಜನ್ಯ ತಡೆಗಾಗಿ ಹೋರಾಟ ಮಾಡಬೇಕಾದ ದಯನೀಯ ಪರಿಸ್ಥಿತಿ ಇದೆ. ಇದಕ್ಕಿಂತ ದುರ್ದೈವ ಸಂಗತಿ ಮತ್ತೊಂದಿಲ್ಲ.

ಇವರೆಲ್ಲ ಎಲ್ಲಿಯವರು..?
ಬೆಳಗಾವಿ ರಾಜಕಾರಣಿಗಳಿಗೆ ಏನಾಗಿದೆ ಎನ್ನುವುದೇ ಗೊತ್ತಾಗುತ್ತಿಲ್ಲ.
ಚುನಾವಣೆ ಸಂದರ್ಭದಲ್ಲಿ ಮರಾಠಿಗರು ಕೈ ಕೊಡ್ತಾರೆ, ಕೊಟ್ಟಿದ್ದಾರೆ ಎನ್ನುವುದು ಗೊತ್ತಿದ್ದರೂ ಅವರನ್ನು ಮುದ್ದು ಮಾಡುವುದು ಬಿಟ್ಟಿಲ್ಲ.


ಇಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಬೇಕೆಂದರೆ, ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ನಡೆದಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ. ಇದು ರಾಜ್ಯದ ಪ್ರಭಾವಿ ಸಚಿವೆ ಹೆಬ್ಬಾಳಕರ ಅವರ ತವರು ಕ್ಷೇತ್ರ ಕೂಡ ಹೌದು.
ಘಟನೆ ನಡೆದ ತಕ್ಷಣ ಗಾಯಾಳು ಕಂಡಕ್ಟರ್ ನನ್ನ ಸೌಜನ್ಯಕ್ಕಾದರೂ ಭೆಟ್ಟಿ ಮಾಡಿ ಸಾಂತ್ವನ ಹೇಳಲಿಲ್ಲ. ಖುದ್ದು ತಾವೇ ಮಾಧ್ಯಮದವರ ಮುಂದೆ ಬಂದು ಹೇಳಿಕೆನೂ ಕೊಡಲಿಲ್ಲ. ಕಂಡಕ್ಟರ್ ಮೇಲೆ ಪೋಸ್ಕೋ ಹಾಕಿದಾಗಲೂ ತಡವಾಗಿ ಪೊಲೀಸರದ್ದೇ ತಪ್ಪು ಎಂದು ಹೇಳಿಕೆ ನೀಡಿದರು. ಅಷ್ಟೇ ಅಲ್ಲ ಹಲ್ಲೆ ಘಟನೆ ನಡೆದ ಊರಲ್ಲಿಯೇ ಹೋಗಿ ಮರಾಠಿ ಭಾಷಣ ಮಾಡಿ ಕನ್ನಡಿಗರ ಹೊಟ್ಟೆ ಉರಿಯುವಂತೆ ಮಾಡಿದರು.
ಇಲ್ಲಿ ಇವರಷ್ಟೇ ಅಲ್ಲ ಜಿಲ್ಲೆಯ ಯಾವೊಬ್ಬ ಬಿಜೆಪಿ ನಾಯಕನೂ ಕೂಡ ಹೋಗಿ ಕಂಡಕ್ಟರ್ ನಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿಲ್ಕ. ಹಲ್ಲೆಕೋರ ಮರಾಠಿ ಪುಂಡರ ಮೇಲೆ ಕ್ರಮವಾಗಲಿ ಎಂದು ಬೀದಿಗಿಳಿಯಲಿಲ್ಲ.
ಆದರೆ ಇಲ್ಲಿ ಕಂಡಕ್ಟರ್ ಪರವಾಗಿ ನಿಂತಿದ್ದು ಮಾಧ್ಯಮಗಳು ಮತ್ತು ಕನ್ನಡ ಪರ ಸಂಘಟನೆಗಳು.
ಈ ಪ್ರಕರಣದಲ್ಲಿ ವಿಶೇಷವಾಗಿ ಕನ್ನಡ ಮುದ್ರಣ, ಟಿವಿ ಮಾಧ್ಯಮಗಳು ಧ್ವನಿ ಎತ್ತದಿದ್ದರೆ ಬಡಪಾಯಿ ಕಂಡಕ್ಟರ್ ನನ್ನು ಪೋಸ್ಕೋ ದಲ್ಲಿ ಜೈಲಿಗೆ ಅಟ್ಟುತ್ತಿದ್ದರು.


ಇದು ಕರವೇ ತಾಕತ್ತು..!

oplus_0

ಯಾರು ಏನೂ ಬೇಕಾದ್ದು ಹೇಳಲಿ, ಗಡಿನಾಡ ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳು ಗಟ್ಟಿ ಧ್ವನಿಯನ್ನು ಎಬ್ಬಿಸದಿದ್ದರೆ ಕನ್ನಡಿಗರ ಮೇಲೆ ದೌರ್ಜನ್ಯಗಳು ನಿತ್ಯ ನಿರಂತರವಾಗಿರುತ್ತಿದ್ದವು.
ಆದರೆ ಕರ್ನಾಟಕ ರಕ್ಷಣಾ ವೇದಿಕೆಯಂತಹ ಕನ್ನಡ ಸಂಘಟನೆಗಳು ಪೊಲೀಸ್ ಲಾಠಿ ರುಚಿ ಮತ್ತು ಕೇಸ್ ಗ ಳನ್ನು ಲೆಕ್ಕಿಸದೇ ಮುನ್ನುಗ್ಗುತ್ತಿರುವುದರಿಂದ ಪುಂಡರು ಅಷ್ಟೇ ಅಲ್ಲ ಖುದ್ದು ಸರ್ಕಾರ ಹತ್ತಾರು ಬಾರಿ ವಿಚಾರ ಮಾಡಿ ಹೆಜ್ಜೆ ಇಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಬಾಳೇಕುಂದ್ರಿ ಘಟನೆಯನ್ನು ಕನ್ನಡಿಗರು, ಕನ್ನಡ ಪರ ಸಂಘಟನೆಗಳು , ಕನ್ನಡ ಮುದ್ರಣ ಮತ್ತು ಟಿವಿ ಮಾಧ್ಯಮದವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರು. ಟಿವಿಯವರಂತೂ ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಪ್ರತಿನಿಧಿಗಳನ್ನು ಕಳುಹಿಸಿದ್ದರು.

ಎಲ್ಲರೂ ಸುಳ್ಳು ಕೇಸ್ ಜಡಿದ ಪೊಲೀಸರನ್ನು ರುಬ್ಬಿದ್ದೇ ರುಬ್ಬಿದ್ದು. ಯಾವೊಬ್ಬ ರಾಜಕಾರಣಿಗಳನ್ನೂ ಸಹ ಬಿಟ್ಟಿಲ್ಲ. ಇದೆಲ್ಲದರ ಜತೆಗೆ ಕರವೇ ನಾರಾಯಣಗೌಡರ ಎಚ್ಚರಿಕೆಗೆ ಪೊಲೀಸ್ ಇಲಾಖೆ ಥಂಡಾ ಹೊಡೆಯಿತು. ಗೌಡರು ಬೆಳಗಾವಿ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಬರುವಷ್ಟರಲ್ಲಿ ಪೋಸ್ಕೋ ಕೇಸ್ ವಾಪಸ್ ಪಡೆದಿದ್ದರು. ಸಿಪಿಐರನ್ನು ಬೇರೆಡೆಗೆ ನಿಯೋಜನೆ ಮಾಡಲಾಗಿತ್ತು. ಆದರೆ ಸಿಪಿಐ ಅವರನ್ನು ವರ್ಗಾವಣೆ ಅಲ್ಲ ಸಸ್ಪೆಂಡ ಮಾಡಬೇಕು ಎನ್ನುವುದು ಕನ್ನಡಿಗರ ಹಕ್ಕೊತ್ತಾಯ ಆಗಿತ್ತು.

*ಶಿಕ್ಷೆ ಇತರರಿಗೆ ಪಾಠ ಆಗಲಿ,.!


ಅಸಲಿಗೆ ಇಂತಹ ಪ್ರಕರಣಗಳು ನಡೆದಾಗ ಜಿಲ್ಲಾ ಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು, ತಪ್ಪು ಯಾರೇ ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗುವ ರೀತಿಯಲ್ಲಿ ನಿರ್ದೇಶನ ನೀಡುವ ಕೆಲಸವನ್ನು ಜಿಲ್ಲಾ ಮಂತ್ರಿಗಳು ಮಾಡಬೇಕು.
ಈಗ ಕಂಡಕ್ಟರ್ ಪ್ರಕರಣದಲ್ಲಿ ಮಹಾ ತಪ್ಪು ಎಸಗಿದ ಸಿಪಿಐ ಅವರ ಮೇಲೆ ತೆಗೆದುಕೊಂಡ ಕ್ರಮ ಇನ್ನುಳಿದವರಿಗೆ ಪಾಠ ಆಗಬೇಕು, ಅದನ್ನು ಬಿಟ್ಟು ಪ್ರಕರಣದ ಕಾವು ಆರುವವರಿಗೆ ಅವರನ್ನು ನಿಯೋಜನೆ ಮೇರೆಗೆ ವರ್ಗ ಮಾಡಿ ಕೈತೊಳೆದುಕೊಂಡರೆ ಸರ್ಕಾರಕ್ಕೆ ಕಪ್ಪು ಚುಕ್ಕೆ,. ಈ ನಿಟ್ಟಿನಲ್ಲಿ ಜಿಲ್ಲಾ ಮಂತ್ರಿ ಸತೀಶ್ ಜಾರಕಿಹೊಳಿ ಅವರು ಗಂಭೀರ ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ಕಾದು ನೋಡೋಣ.

Leave a Reply

Your email address will not be published. Required fields are marked *

error: Content is protected !!