ಆಹಾರ ಸುರಕ್ಷಾ & ಗುಣಮಟ್ಟ ಇಲಾಖೆ ಭ್ರಷ್ಟಾಚಾರ!?
ಭತ್ಯೆಗಳ ಹೆಸರಲ್ಲಿ 350 ಲಕ್ಷ ರೂ. ನಷ್ಟ!
ಸರ್ಕಾರಕ್ಕೆ ಟೋಪಿ ಹಾಕಿದ ವೈದ್ಯರು – ಕ್ರಿಮಿನಲ್ ಮೊಕದ್ದಮೆ ದಾಖಲಿಸದ ಅಧಿಕಾರಿಗಳು
P.I.L ಕುರಿತು ಉಚ್ಚ ನ್ಯಾಯಾಲಯದಲ್ಲಿ ಚಿಂತನೆ – ಸರ್ಕಾರಕ್ಕೆ ಪತ್ರ
ಬೆಳಗಾವಿ,
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಭ್ರಷ್ಟಾಚಾರದ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಂಕಿತಾಧಿಕಾರಿ ಮತ್ತು ಆಹಾರ ಸುರಕ್ಷಾಧಿಕಾರಿಗಳ ಹುದ್ದೆಗಳಿಗೆ ನಿಯೋಜನೆಯಾದ 36 ಮಂದಿ ವೈದ್ಯರು, ಸರ್ಕಾರದ ಖಜಾನೆಯಿಂದ ₹3,50,18,800 (ಮೂರು ಕೋಟಿ ಐವತ್ತು ಲಕ್ಷ ಹದಿನೆಂಟು ಸಾವಿರ ಎಂಟುಶೀ) ರೂಪಾಯಿ ಹಣವನ್ನು ವಿವಿಧ ಭತ್ಯೆಗಳ ಹೆಸರಿನಲ್ಲಿ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಈ ಆರೋಪ ಮಾಡಿದ್ದಾರೆ.

ಭ್ರಷ್ಟಾಚಾರದ ಅನಾವರಣ – ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗ
ಈ ಭ್ರಷ್ಟಾಚಾರದ ಪ್ರಕರಣ ಮಾಹಿತಿ ಹಕ್ಕು (RTI) ಮೂಲಕ ಬೆಳಕಿಗೆ ಬಂದಿದೆ. ಕಾನೂನು ಪ್ರಕಾರ ಈ ವೈದ್ಯರು ಭತ್ಯೆ ಮತ್ತು ವಿಶೇಷ ಭತ್ಯೆ ಪಡೆಯಲು ಅರ್ಹರಾಗಿಲ್ಲ. ಆದರೂ, ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ನ ಸುವ್ಯವಸ್ಥೆಯನ್ನು ಉಲ್ಲಂಘಿಸಿ, ಅಧಿಕಾರ ದುರುಪಯೋಗ ಪಡಿಸಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರಕ್ಕೆ ಪತ್ರ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರಕ್ಕೆ ಪತ್ರ ಬರೆದಿದ್ದು, ಅಕ್ರಮ ಹಣ ವಾಪಸ್ ಪಡೆಯಲು ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆಗಡಾದ್ ಒತ್ತಾಯಿಸಿದ್ದಾರೆ.
ಸರ್ಕಾರದ ಪತ್ರ ಸಂಖ್ಯೆ – ಆ.ಕು.ಕ.166.ಎಚ್.ಎಸ್,ಎಚ್ 2023, ದಿನಾಂಕ:12-05-2023ರ ಪ್ರಕಾರ, ಆಹಾರ ಸುರಕ್ಷತೆ & ಗುಣಮಟ್ಟ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ವೈದ್ಯರು, ತಾವು ಸೇವೆ ಸಲ್ಲಿಸುತ್ತಿರುವ ಹುದ್ದೆಗೆ ಸಂಬಂಧಿಸಿದಂತೆ ವೈದ್ಯಕೀಯ ಭತ್ಯೆ ಹಾಗೂ ವಿಶೇಷ ಭತ್ಯೆಗೆ ಅರ್ಹರಲ್ಲ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಆರೋಪಿಗಳ ವಿರುದ್ಧ ಕ್ರಮ – ಆದರೆ ಕ್ರಿಮಿನಲ್ ಮೊಕದ್ದಮೆ ಇಲ್ಲ!
ಈ ವೈದ್ಯರು ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆ ಎಂಬುದು ದೃಢಪಟ್ಟಿದ್ದರೂ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲ.
ಆಡಳಿತಕ್ಕೆ ತೊಂದರೆಯುಂಟು ಮಾಡಿದರೂ, ಕಾನೂನು ಕ್ರಮ ಕೈಗೊಳ್ಳದೆ ಕೇವಲ ಹಣ ವಾಪಸ್ ಪಡೆಯಲು ಆದೇಶಿತವಾಗಿದೆ.
ಅವರ ವೇತನ ಮತ್ತು ಪಿಂಚಣಿಯಿಂದ ಹಣ ಕಡಿತಗೊಳಿಸಿ ಸರ್ಕಾರಕ್ಕೆ ಜಮೆ ಮಾಡುವಂತೆಯೇ ನಿರ್ಧಾರ.
ಜೈಲು ಶಿಕ್ಷೆಗೆ ಅರ್ಹರಾದ ಇವರನ್ನು ಹಿರಿಯ ಅಧಿಕಾರಿಗಳು ರಕ್ಷಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಸರ್ಕಾರದ ಮೋಸ – ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ
ಈ ಭ್ರಷ್ಟಾಚಾರ ಪ್ರಕರಣದಿಂದ ಸಾರ್ವಜನಿಕ ಹಣದ ದುರುಪಯೋಗವಾಗಿದ್ದು, ನ್ಯಾಯಪ್ರಿಯ ಅಭ್ಯರ್ಥಿಗಳು ಕೂಡಾ ನ್ಯಾಯಕ್ಕೆ ವಂಚಿತರಾಗಿದ್ದಾರೆ. ಈ ಕುರಿತು P.I.L (Public Interest Litigation) ದಾಖಲಿಸಲು ಚಿಂತನೆಮಾಡಲಾಗಿದೆ ಎಂದು ಗಡಾದ್ ಹೇಳಿದ್ದಾರೆ

ಈ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟ ವೈದ್ಯರ ಹೆಸರು ಹಾಗೂ ಅವರು ಪಡೆದ ಹಣದ ವಿವರಗಳನ್ನು ಶೀಘ್ರವೇ ಬಹಿರಂಗಪಡಿಸುವ ಸಾಧ್ಯತೆ ಇದೆ. ಸರ್ಕಾರ ಈ ಪ್ರಕರಣದಲ್ಲಿ ಕಾನೂನು ಪ್ರಕಾರ ಗಂಭೀರ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಅಧಿಕಾರಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.