ಬೆಳಗಾವಿ: ತಾಲೂಕಿನ ಸುಕ್ಷೇತ್ರ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಪ್ರಚಾರಾರ್ಥವಾಗಿ ರವಿವಾರ ನಡೆದ ಬೃಹತ್ ಮೆಗಾ ಬೈಕ್ ರ‍್ಯಾಲಿ ಗಮನಸೆಳೆಯಿತು.
ಮಾ. 18ರಿಂದ 26ರ ವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಬೃಹತ್ ಬೈಕ್ ರ‍್ಯಾಲಿ ಆಕರ್ಷಕವಾಗಿತ್ತು. ಸುಳೇಭಾವಿ ಶ್ರೀ ಮಹಾಲಕ್ಷ್ಮೀ ಮಾತಾ ಕೀ ಜೈ, ಉಧೋ ಉಧೋ ಎಂಬ ಘೋಷಣೆ ಮೊಳಗಿಸುತ್ತ ಭಕ್ತರು ರ‍್ಯಾಲಿಯಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು. ತೆರೆದ ವಾಹನದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಭಾವಚಿತ್ರದ ಮೆರವಣಿಗೆ ಸಾಗಿತು.

ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನ ಆವರಣದಿಂದ ಬೈಕ್ ರ‍್ಯಾಲಿ ಆರಂಭಗೊಂಡಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ರ‍್ಯಾಲಿ ಖನಗಾಂವ ಬಿ.ಕೆ., ಅಷ್ಟೇ, ಕಣಬರ್ಗಿ ಗ್ರಾಮದ ರಸ್ತೆ ಮಾರ್ಗದ ಮೂಲಕ ಬೆಳಗಾವಿ ನಗರ ಪ್ರವೇಶಿಸಿತು. ರಾಣಿ ಚನ್ನಮ್ಮ ವೃತ್ತದಿಂದ ಸಾಗಿ ಧರ್ಮವೀರ ಸಂಭಾಜಿ ಮಹಾರಾಜ ವೃತ್ತ(ಬೋಗಾರವೇಸ್) ವರೆಗೆ ಬೈಕ್ ರ‍್ಯಾಲಿ ನಡೆಯಿತು. ನಂತರ ಅಲ್ಲಿಂದ ವಾಪಸ್ ಇದೇ ಮಾರ್ಗವಾಗಿ ವಾಪಸ್ ಚನ್ನಮ್ಮ ವೃತ್ತದ ಮೂಲಕ ಗಾಂಧಿ ನಗರದಿಂದ ಸಾಂಬ್ರಾ ರಸ್ತೆ ಮಾರ್ಗವಾಗಿ ಸುಳೇಭಾವಿ ಗ್ರಾಮಕ್ಕೆ ಬಂದು ತಲುಪಿತು.

ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಮತ್ತು ಅರ್ಚಕರು, ಗ್ರಾಮ ಪಂಚಾಯತ್ ಹಾಗೂ ಸಮಸ್ತ ಗ್ರಾಮಸ್ಥರು ಅತ್ಯಂತ ಸಡಗರ-ಸಂಭ್ರಮದಿಂದ ಪಾಲ್ಗೊಂಡಿದ್ದರು. ಸುಳೇಭಾವಿ, ಯದ್ದಲಬಾವಿಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ದ್ವಿಚಕ್ರ ವಾಹನ ಸವಾರರು ರ‍್ಯಾಲಿಯಲ್ಲಿ ಭಾಗವಹಿಸಿ ಮೆರುಗು ತಂದರು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಚೇರಮನ್ ದೇವಣ್ಣ ಬಂಗೇನ್ನವರ ಮಾತನಾಡಿ, ಪ್ರತಿ ಐದು ವರ್ಷಕ್ಕೊಮ್ಮೆ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಅತ್ಯಂತ ವೈಭವಯುತವಾಗಿ ನಡೆಯುತ್ತದೆ. ಮಾ. 18ರಿಂದ ಜಾತ್ರೆ ನಡೆಯಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು. ಈ ಹಿನ್ನೆಲೆಯಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಸದಸ್ಯ ಬಸನಗೌಡ ಹುಂಕರಿಪಾಟೀಲ ಮಾತನಾಡಿ, ಸುಳೇಭಾವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಕ್ತರಿಗಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಾ. 18ರಿಂದ 26ರ ವರೆಗೆ ಜಾತ್ರೆ ಅತ್ಯಂತ ಸಂಭ್ರಮದಿಂದ ನೆರವೇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ಕೃತಾರ್ಥರಾಗಬೇಕು ಎಂದು ಹೇಳಿದರು.