ಪಾಲಿಕೆ ನೂತನ ಸಾರಥಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸ ಯುಗ ಈಗ ಆರಂಭವಾಗಿದೆ. ಮೇಯರ್ ಮಂಗೇಶ ಪವಾರ್ ಮತ್ತು ಉಪಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಅಧಿಕಾರ ಸ್ವೀಕರಿಸಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ, ಈ ಇಬ್ಬರೂ ಪಾಲಿಕೆಯ ಪ್ರವೇಶಕ್ಕೂ ಮುನ್ನ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ಅಧಿಕಾರ ಸ್ವೀಕರಿಸಿದರು. ಈಗ ಬೆಳಗಾವಿಯ ಸಾಮಾನ್ಯ ನಾಗರಿಕರಿಂದ ಹಿಡಿದು ಉದ್ಯಮಿಗಳವರೆಗೆ, ಕೂಲಿ ಕಾರ್ಮಿಕರಿಂದ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಈ ಹೊಸ ಆಡಳಿತದ ಮೇಲೆ ಅಪಾರ ನಿರೀಕ್ಷೆಯಿದೆ.
ಆದರೆ, ಈ ಹಾದಿ ಸುಗಮವಲ್ಲ. ಒಮ್ಮೆಲೆ ಬದಲಾಗುವ ಕುರುಹುಗಳಿಲ್ಲ. ಎದುರಿಸಬೇಕಾದ ಅನೇಕ ಸಮಸ್ಯೆಗಳಿವೆ. ಅಭಿವೃದ್ಧಿಗಳಿಗೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಅಂತಹುದರಲ್ಲಿ ಪಾಲಿಕೆಯೇ ತನ್ನ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವೂ ಆಗಬೇಕಿದೆ.
ಸಮಾಧಾನಕರ ಸಂಗತಿ ಎಂದರೆ, ಅಭಿವೃದ್ಧಿ ವಿಷಯದಲ್ಲಿ ಹಠವಾದಿ ಎಂದೇ ಹೆಸರಾದ ಶಾಸಕ ಅಭಯ ಪಾಟೀಲರ `ಅಭಯ ಹಸ್ತ’ ಈ ಆಡಳಿತದ ಮೇಲಿದೆ. ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿ ಅನುದಾನ ತರುವ ಶಕ್ತಿ ಅವರಿಗೆ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಅಂತಹ ಶಾಸಕರ ಶಕ್ತಿಯನ್ನು ನೂತನ ಆಡಳಿತ ಮಂಡಳಿ ಎಷ್ಟರ ಮಟ್ಟಿಗೆ ಸದುಪಯೋಗ ಮಾಡಿಕೊಳ್ಳುತ್ತದೆ ಎನ್ನುವುದನ್ನು ನೋಡಬೇಕಿದೆ.
ಮುಗಿಯದ ಕಥೆ ಇಲ್ಲಿ ಸಮಸ್ಯೆಗಳನ್ನು ಪಟ್ಟಿ ಮಾಡುತ್ತ ಹೋದರೆ ಅದು ಮುಗಿಯದ ಅಧ್ಯಾಯ, ಆದರೂ ಸಧ್ಯಕ್ಕೆ ಕಾಡುತ್ತಿರುವ ಮೊಟ್ಟ ಮೊದಲ ಪ್ರಶ್ನೆ ಎಂದರೆ, ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ ದುರಸ್ತಿ ಮುಂತಾದವುಗಳು ಸೇರಿವೆ. ಶಾಸಕ ಅಭಯ ಪಾಟೀಲರು ಸೈಕಲ್ ಫೇರಿ ನಡೆಸಿದ ಸಂದರ್ಭದಲ್ಲಿ ಕೂಡ ಜನ ಇದೇ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಇದಕ್ಕೆ ಪರಿಹಾರ ಹುಡುಕುತ್ತ ಹೋದರೆ ಮೊದಲು ಪಾಲಿಕೆ ಆರ್ಥಿಕವಾಗಿ ಗಟ್ಟಿಯಾಗಬೇಕು, ಅದಕ್ಕೆ ಕಂದಾಯ ಶಾಖೆಗೆ ಬಿಸಿ ಮುಟ್ಟಿಸಬೇಕಾದ ಅನಿವಾರ್ಯತೆ ಇದೆ.
ಇಲ್ಲಿ ಆಯುಕ್ತರು ಕಂದಾಯ ಶಾಖೆಯಲ್ಲಿಯೇ ಸೋರಿ ಹೋಗುತ್ತಿರುವ ತೆರಿಗೆಯನ್ನು ತಡೆಗಟ್ಟುವ ಕೆಲಸವನ್ನು ಮಾಡಬೇಕಿದೆ. ಅಲ್ಲಿ ತಪ್ಪು ಮಾಡುವವರನ್ನು ಹುಡುಕಿ ಕ್ರಮ ತೆಗೆದುಕೊಳ್ಳುವ ಕೆಲಸವನ್ನು ಆಯುಕ್ತರು ಮಾಡಬೇಕು. ಇದಕ್ಕಾಗಿ ಮೇಯರ್, ಉಪಮೇಯರ್ ಸಹಕಾರ ನೀಡಬೇಕು.
ಕನ್ನಡ ಮರಾಠಿ ದೂರವಾಗಬೇಕು…! ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊದಲು ಕನ್ನಡ,ಮರಾಠಿ ಜಗಳ ದೂರವಾಗಬೇಕು, ಕೆಲವರು ಬರೀ ಜಗಳ ತೆಗೆಯುವ ನೆಪದಲ್ಲಿ ಮರಾಠಿ ದಾಖಲೆ ಕೇಳುವ ಕೆಲಸ ನಡೆಸಿದ್ದಾರೆ, ಆದರೆ ಮರಾಠಿ ದಾಖಲೆ ಕೇಳುವ ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಮತ್ತು ಮರಾಠಿ ಸಮುದಾಯಗಳ ನಡುವಿನ ಸಂಬಂಧವನ್ನು ಸಮತೋಲನ ದಲ್ಲಿಟ್ಟುಕೊಳ್ಳುವ ಜವಾಬ್ದಾರಿ ನೂತನ ಮೇಯರ್-ಉಪಮೇಯರ್ ಅವರ ಮೇಲಿದೆ.
ಇದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮತೋಲನ, ಎರಡೂ ಭಾಷೆಯ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸುವ ಮೂಲಕ ಬಾಂಧವ್ಯ ಬೆಳೆಸುವ ಕೆಲಸ ಆಗಬೇಕು,
ಆರ್ಥಿಕ ಅಭಿವೃದ್ಧಿ
ಬೆಳಗಾವಿ ಪಾಲಿಕೆಯ ಆದಾಯದ ಹರಿವು ಕುಂದಿದಂತಾಗಿದೆ. ಸಣ್ಣಮುಟ್ಟ ಕಾಮಗಾರಿಗೂ ಅನುದಾನದ ಕೊರತೆ ಇದೆ, ಈ ನಿಟ್ಟಿನಲ್ಲಿ ಇದೆಲ್ಲ ಪಾಲಿಕೆಗೆ ದೊಡ್ಡ ತಲೆನೋವು ಎಂದರೆ ತಪ್ಪಾಗಲಾರದು,
ಹೀಗಾಗಿ ಅವುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯ ಕಂದಾಯ, ಪಿಡದ್ಲುಡಿ ಶಾಖೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ತರಬೇಕಾದ ಅವಶ್ಯಕತೆ ಇದೆ, ಉದ್ಭವಿಸಬಹುದಾದ ಹೊಸ ಆದಾಯ ಮೂಲಗಳು, ಆಸ್ತಿಯ ತೆರಿಗೆ, ವಾಣಿಜ್ಯ ಅನುಮತಿಗಳಲ್ಲಿ ಪಾರದರ್ಶಕತೆ ಹಾಗೂ ನ್ಯಾಯಸಮ್ಮತ ಬದಲಾವಣೆ ಮಾಡಬೇಕು. ಮೊದಲು ಖಾಸಗಿ ಕಂಪನಿಗಳಿಂದ ಬರಬೇಕಾದ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿದರೆ ಪಾಲಿಕೆಗೆ ಆಥರ್ಿಕ ಕೊರತೆ ಎದುರಾಗಲ್ಲ ಎನ್ನುವ ಮಾತಿದೆ,
ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತೆ ಶುಭ ಬಿ ಅವರು ಒಂದಿಷ್ಟು ಪ್ರಯತ್ನ ಮಾಡಿದ್ದಾರೆ, ಆದರೆ ಕಂದಾಯ ಮತ್ತುಟಿಪಿಓ ಶಾಖೆಯಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ ಎನ್ನುವ ಮಾತಿದೆ,
ಜನರ ವಿಶ್ವಾಸ ಅಗತ್ಯ..!
ನೊಂದವರು ಪಾಲಿಕೆಯಮೆಟ್ಟಿಲು ಹತ್ತಿದರೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸ ಜನರಲ್ಲಿ ಬರುವ ಹಾಗೆ ಆಡಳಿತ ವ್ಯವಸ್ಥೆ ಸುಧಾರಿಸಬೇಕಾದ ಅಗತ್ಯತೆ ಇದೆ. ತಕ್ಷಣವೇ ಈ ನಿಟ್ಟಿನಲ್ಲಿ ಮೇಯರ್ ಮತ್ತು ಉಪಮೇಯರ್ ಅವರು ಕ್ರಮ ಕೈಗೊಳ್ಳುವುದು ಮುಖ್ಯ.
ಮನೆ ಬಾಗಿಲಿಗೆ ಸಾರಥಿಗಳು…! ಶಾಸಕ ಅಭಯ ಪಾಟೀಲರು ಸೈಕಲ್ ಫೇರಿ ಮೂಲಕ ಜನರ ಮನಸ್ಸು ಗೆದ್ದವರು, ಅದೇ ರೀತಿ ಪಾಲಿಕೆಯಲ್ಲೂ ಜನಸಂಪರ್ಕ ವ್ಯವಸ್ಥೆ ಇನ್ನೂ ಸುಧಾರಿಸಬೇಕು, “ಮೇಯರ್, ಉಪಮೇಯರ್ ನಿಮ್ಮ ಮನೆಬಾಗಿಲಿಗೆ” ಎನ್ನುವ ವಿನೂತನ ನೇರ ಸಂವಾದ ಕಾರ್ಯಕ್ರಮಗಳ ಮೂಲಕ ನಾಗರಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಬೇಕಾದ ಅವಶ್ಯಕತೆ ಇದೆ,
ಜನರಲ್ಲಿ ನಂಬಿಕೆ ಮೂಡಿಸುವ ಪಾರದರ್ಶಕ ಆರ್ಥಿಕ ನೀತಿ ಜಾರಿಗೆ ತರಬೇಕಾಗಿದೆ.
ಬೆಳಗಾವಿಯ ಪರಿಸರವು ಈಗ ಮಾಲಿನ್ಯ ಮತ್ತು ಪ್ಲಾಸ್ಟಿಕ್ ಸಮಸ್ಯೆ ನಗರದ ಭವಿಷ್ಯಕ್ಕೆ ಅಪಾಯಕಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಪಾಲಿಕೆಯು ಪ್ಲಾಸ್ಟಿಕ್ ಮುಕ್ತ ಬೆಳಗಾವಿ ಚಳವಳಿ, ಕಡ್ಡಾಯ ಪ್ಲಾಸ್ಟಿಕ್ ನಿಬರ್ಂಧ ಜಾರಿ ಮಾಡಬೇಕು. ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕೆಲಸ ಆಗಬೇಕಿದೆ.
ಪಾಲಿಕೆ ಮೆಟ್ಟಿಲುಗಳಿಗೆ ನಮಸ್ಕಾರ..! ಅಧಿಕಾರ ಸಿಕ್ಕ ತಕ್ಷಣ ಎದೆಯುಬ್ಬಿಸಿಕೊಂಡು ಹೋಗುವವರೇ ಹೆಚ್ಚು, ಆದರೆ ಪಾಲಿಕೆಯ ನೂತನ ಮೇಯರ್ ಮಂಗೇಶ ಪವಾರ ಮತ್ತು ಉಪಮೇಯರ್ ವಾಣಿ ಜೋಶಿ ಅವರು ಪಾಲಿಕೆ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಧಿಕಾರ ಸ್ವೀಕರಿಸಿದ್ದು ವಿಶೇಷ ಎನ್ನಬಹುದು,
ಆಯ್ಕೆಯಾದ ದಿನದಿಂದಲೇ ಇವರಿಬ್ವರೂ ತಮ್ಮ ಆಯ್ಕೆಗೆ ಸಹಕರಿಸಿದವರನ್ನು ಖುದ್ದು ಭೆಟ್ಟಿ ಮಾಡಿ ಕೃತಜ್ಞತೆ ಹೇಳುವ ಕೆಲಸ ಮಾಡಿದರು. ಇಂದೂ ಬೆಳಿಗ್ಗೆ ಸಹ ಪಕ್ಷದ ಹಲವು ಗಣ್ಯರನ್ನು ಭೆಟ್ಟಿ ಯಾದ ಮೇಯರ್ ಮತ್ತು ಉಪಮೇಯರ ಅವರು ಮಹಾನಗರ ಪಾಲಿಕೆ ಪ್ರವೇಶ ಮಾಡಿದರು. ನಂತರ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಹೇಳಿ ತಮ್ನ ಕೊಠಡಿಯೊಳಗೆಬಪ್ರವೇಶ ಮಾಡಿದರು.
ಪಕ್ಷದ ಕಚೇರಿಯಲ್ಲಿ ಸನ್ಮಾನ ನೂತನವಾಗಿ ಆಯ್ಕೆಗೊಂಡ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಅವರನ್ನು ಬಿಜೆಪಿ ಮಹಾನಗರ ಕಚೇರಿಯಲ್ಲಿ ಸನ್ಮಾನಿಸಲಾಯಿತು, ಗೀತಾ ಸುತಾರ, ಸೇರಿದಂತೆ ನಗರಸೇವಕ ಹನುಮಂತ ಕೊಂಗಾಲಿ ಮತ್ತಿತರರು ಉಪಸ್ಥಿತರಿದ್ದರು.