ಹರಿದ ಬಟ್ಟೆಯಲ್ಲೇ ಠಾಣೆಗೆ ಹೋದ್ರೂ ಸಿಗದ ನ್ಯಾಯ?
ಜಮೀನು ವಿವಾದ- ವಿಧವೆ ಬೆತ್ತಲುಗೊಳಿಸಿ ಕ್ರೌರ್ಯ.
ದೂರು ದಾಖಲಿಸಿ ಎಂದರೆ ಸಾಕ್ಷಿ ತಗೊಂಡು ಬಾ ಎಂದ ಪೊಲೀಸರು
ಛೀ ಥೂ ಇವರೆಂಥ ಪೊಲೀಸರು.
ಬೆಳಗಾವಿ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸವದತ್ತಿ ತಾಲುಕಿನ ಉಗರಗೋಳ ಸಮೀಪದ ಹರ್ಲಾಪುರದಲ್ಲಿ ವಿಧವೆಯೊಬ್ಬಳನ್ನು ಬೆತ್ತಲೆಗೊಳಿಸಿ ಕ್ರೌರ್ಯ ಮೆರೆಯಲಾಗಿದೆ.
ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಕೂಡ ಮಹಿಳೆಯನ್ನು ಬೆತ್ತಲು ಮಾಡಿ ಕ್ರೌರ್ಯ ಮೆರೆಯಲಾಗಿತ್ತು, ಆಗ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿತ್ತು, ವಿರೋಧ ಪಕ್ಷದವರು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದವು,
ಆದರೆ ಇಲ್ಲಿ ಸವದತ್ತಿ ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ, ಹರಿದ ಬಟ್ಟೆಯಲ್ಲಿ ಠಾಣೆಗೆ ವಿಧವೆ ಹೋಗಿದ್ದರೂ ಕೂಡ ಪೊಲೀಸರು ಇಲ್ಲಿಯವರೆಗೆ ಪ್ರಕರಣ ದಾಖಲು ಮಾಡಿಕೊಳ್ಳದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಲಾಗುತ್ತಿದೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ, ಇಲ್ಲಿ ಖುದ್ದು ಪೊಲೀಸರೇ ಸಂತ್ರಸ್ತೆಗೆ ನಿನ್ನ ಮಗ ಇದ್ದಾನೆ, ನಿನಗೆ ಜೀವಕ್ಕೆ ಧಕ್ಕೆ ಯಾದರೆ ಎನ್ನುವ ಹೆದರಿಕೆ ಮಾತುಗಳನ್ನು ಹೇಳುತ್ತಿರುವುದು ಬೆಳಗಾವಿ ಜಿಲ್ಲೆಯ ಪೊಲೀಸ್ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಎಲ್ಲಿದೆ ನ್ಯಾಯ?
ಈ ಘಟನೆಯ ಬಗ್ಗೆ ಸಂತ್ರಸ್ತೆ ಹೇಳುವ ಕಥೆ ಅತ್ಯಂತ ಭಯಾನಕವಾಗಿದೆ.
ಆದರೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಸವದತ್ತಿ ಪೊಲೀಸರು ನೊಂದವಳಿಗೆ ನ್ಯಾಯ ಕೊಡಿಸುವ ಬದಲು `ಸಾಕ್ಷಿ ತೆಗೆದುಕೊಂಡು ಬನ್ನಿ’ ಎಂದು ಹೇಳಿ ಪ್ರಕರಣಕ್ಕೆ ತಿಲಾಂಜಲಿ ನೀಡುತ್ತಿರುವುದು ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ.

ಏನಿದು ಘಟನೆ?
ಸವದತ್ತಿ ತಾಲೂಕಿನ ಉಗರಗೋಳದ ಹರ್ಲಾಪುರದಲ್ಲಿ ನಡೆದ ಘಟನೆ ಬಗ್ಗೆ ಸಂತ್ರಸ್ತೆ ಹೇಳಿದ್ದಿಷ್ಟು.
ಅಷ್ಟೇ ಅಲ್ಲ ಅವಳು ಕೆಲವೊಂದು ವಿಡಿಯೋ ತುಣುಕು, ಆಡಿಯೋ ಸಂಭಾಷಣೆ, ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಪೊಲೀಸರು ಇದ್ದ ವಿಡಿಯೋ ಎಲ್ಲವನ್ನು ಸಾಕ್ಷಿಯಾಗಿಟ್ಟುಕೊಂಡು ಈಗ ನ್ಯಾಯ ಕೋರಿ ಮಾಧ್ಯಮದ ಮೊರೆ ಹೋಗಿದ್ದಾಳೆ.
ಸವದತ್ತಿ ತಾಲೂಕಿನ ಉಗರಗೋಳದ ಹರ್ಲಾಪುರದ ಹತ್ತು ಎಕರೆ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಇದು.
ಈ ಜಮೀನು ವಿವಾದ ಕೋರ್ಟ ಮೆಟ್ಟಿಲು ಹತ್ತಿತ್ತು . ಕೋರ್ಟನಿಂದ ತಡೆಯಾಜ್ಞೆ ಕೂಡ ಇತ್ತು. ಆ ಜಮೀನಿನಲ್ಲಿ ಹುರುಳಿಯನ್ನು ಬಿತ್ತಿದ್ದೇವು, ಅದನ್ನು ಒಂದೆಡೆ ಕೂಡಿ ಹಾಕಿ ಚೀಲ ತುಂಬಬೇಕು ಎನ್ನುವಾಗ ರೈತ ಸಂಘದ ಹೆಸರಿನಲ್ಲಿ ಸುಮಾರು 15 ಕ್ಕೂ ಹೆಚ್ಚು ಜನ ಬಂದು ನಮ್ಮೊಂದಿಗೆ ವಾದ ಮಾಡತೊಡಗಿದರು
ಈ ಸಂದರ್ಭದಲ್ಲಿ ನಾನು ಕೋರ್ಟ ತಡೆಯಾಜ್ಞೆ ಇದೆ ಎಂದು ಹೇಳಿದರೂ ಕೇಳಲಿಲ್ಲ. ಬದಲಾಗಿ ಅವರು ನನಗೆ ಬಾಂಡ್ ಬರೆದುಕೊಟ್ಟಿದ್ದಾರೆ ಎಂದು ಹೇಳಿ ಅಲ್ಲಿದ್ದ ಹುರುಳಿಯನ್ನು ತುಂಬಿಕೊಂಡು ತೆಗೆದುಕೊಂಡು ಹೋಗುವ ಕೆಲಸ ನಡೆಸಿದರು.
ಆಗ ವಾದವಿವಾದ ನಡೆಯಿತು, ಈ ಸಂದರ್ಭದಲ್ಲಿ ಕೆಲವರು ನನ್ನ ಫೊನ್ನ್ನು ಕಸಿದುಕೊಂಡು ನೆಲಕ್ಕೆ ಬೀಳಿಸಿ ದನಕ್ಕೆ ಬಡಿದಂತೆ ಹೊಡೆದರು. ಕಂಡ ಕಂಡಲ್ಲಿ ಒದ್ದರು. ಇದರಿಂದ ಗರ್ಭಕೋಶಕ್ಕೂ ಪೆಟ್ಟಾಯಿತು, ರಕ್ತಸ್ರಾವವಾಯಿತು. ಅಷ್ಟಕ್ಕೆ ಬಿಡದ ನನ್ನ ಮೈಮೇಲಿನ ಬಟ್ಟೆ ಹರಿದು ಬೆತ್ತಲೆಗೊಳಿಸಿದರು ಎಂದು ಸಂತ್ರಸ್ತೆ ಹೇಳಿದಳು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ 112 ವೆಹಿಕಲ್ ಬಂದಿತು. ಅವರ ಸಮ್ಮುಖದಲ್ಲಿಯೂ ಕೂಡ ಆ ಗುಂಪು ನನ್ನನ್ನು ನಿಂದಿಸಿತು, ಕೊನೆಗೆ ನಾನು ಹರಿದ ಬಟ್ಟೆಯನ್ನೇ ಸುತ್ತಿಕೊಂಡು ಅದೇ ವಾಹನದಲ್ಲಿ ಠಾಣೆಗೆ ಹೋದೆ. ಠಾಣೆ ತಲುಪಿದ ತಕ್ಷಣ ಇಬ್ಬರು ಮಹಿಳಾ ಪೊಲೀಸರು ಬೆಡಶಿಟ್ ತಂದು ಕೊಟ್ಟರು. ಅದನ್ನು ಸುತ್ತಿಕೊಂಡು ಹೋಗಿ ದೂರು ಹೇಳಿದರೂ ಪೊಲೀಸರು ದಾಖಲಸಿಕೊಳ್ಳಲಿಲ್ಲ ಎಂದು ಸಂತ್ರಸ್ತೆ ವಿವರಿಸಿದಳು.
ಕೊನೆಗೆ ಅಲ್ಲಿಂದ ನಾನೇ ಬೇರೊಂದು ವಾಹನದಲ್ಲಿ ಸವದತ್ತಿ ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡೆನು. ಅಲ್ಲಿ ನನಗೆ ಆದ ತೀವೃಗಾಯವನ್ನು ಗಮನಿಸಿ ಅವರು ನನ್ನನ್ನು ಅಂಬ್ಯುಲೆನ್ಸದಲ್ಲಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು,
ನ್ಯಾಯ ಕೊಡಿಸ್ತೇನಿ ಅಂದವರು..!
ಈ ಸಂದರ್ಭದಲ್ಲಿ ನನಗೆ ಪರಿಚಯವಿಲ್ಲದವರು ಇದು ನಮ್ಮೂರಿನ ಗೌರವದ ಪ್ರಶ್ನೆ, ನ್ಯಾಯ ಕೊಡಿಸುವುದಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ಬಂದರು. ಅವರನ್ನು ನಂಬಿದೆ. ಆದರೆ ಅವರಿಂದಲೂ ನ್ಯಾಯ ಸಿಗಲಿಲ್ಲ ಎಂದು ಸಂತ್ರಸ್ತೆ ಹೇಳಿದರು .
ಸಾಕ್ಷಿ ಜೊತೆ ಬನ್ನಿ.!
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಬೇಕು ಎಂದು ಹೇಳಿದರೆ ಪೊಲೀಸರು ಸಾಕ್ಷಿ ತೆಗೆದುಕೊಂಡು ಬನ್ನಿ, ಆಮೇಲೆ ನೋಡೋಣ ಎಂದು ಹೇಳಿ ಕಳಿಸುತ್ತಿದ್ದಾರೆಂದು ಸಂತ್ರಸ್ತೆ ರತ್ನಾ ಕಣ್ಣಿರಿಟ್ಟಿದ್ದಾಳೆ.
ಧಾರವಾಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸವದತ್ತಿ ಠಾಣೆಗೆ ಹಲವು ಬಾರಿ ಹೋಗಿ ನಾಲ್ಕೈದು ತಾಸು ಕುಳಿತುಕೊಂಡರೂ ಕೂಡ ಪೊಲೀಸರು ಬರೀ ಸಾಕ್ಷಿ ಜೊತೆ ಬನ್ನಿ ಎಂದು ನೆಪ ಹೇಳಿ ಕಳಿಸುತ್ತಿದ್ದಾರೆಂದು ಹೇಳಿದರು.