Headlines

ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ

ಏ. 27,28 ರಂದು ಕೇಂದ್ರದ ವಿರುದ್ಧ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ:

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್‌ ವತಿಯಿಂದ ಏ. 27, 28 ರಂದು ಬೃಹತ್‌ ಪ್ರತಿಭಟನೆಯನ್ನು ಸಿಪಿಎಡ್‌ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅದರಂತೆ, ಬೆಳಗಾವಿಯಲ್ಲೂ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ. ಈ ಧರಣಿಯಲ್ಲಿ ಅಂದಾಜು 30 ಸಾವಿರ ಕಾಂಗ್ರೆಸ್‌ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಕಳೆದ 11 ವರ್ಷದಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಭಾರೀ ಬೆಲೆ ಏರಿಕೆ ಮಾಡಿದೆ. ಬೆಲೆ ಏರಿಕೆ ಮಾಡಿರುವ ಈ ಕುರಿತು ನಮ್ಮ ಬಳಿ ದಾಖಲೆ ಇವೆ. ಈಗ ತಮ್ಮ ತಪ್ಪನ್ನು ಮುಚ್ಚಿ ಹಾಕಲು ಬಿಜೆಪಿಯ ಜನಾಕ್ರೋಶ ಪ್ರತಿಭಟನೆ ಮಾಡಿದೆ. ಜನರಿಗೆ ನಿಜಾಂಶ ತಿಳಿಸುವ ಉದ್ದೇಶದಿಂದ ಕಾಂಗ್ರೆಸ್​​ನಿಂದ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಒಂದೇ ಕೆಲಸವಾಗಿದೆ. ತಮ್ಮ ತಪ್ಪನ್ನು ಮರೆಮಾಚಲು ಬೆಲೆ ಏರಿಕೆ ಹಾಗೂ ಸಂವಿಧಾನದ ಮೇಲೆ ಅಪಾದನೆ ನಿರಂತರ ನಡೆಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಬೆಳಗಾವಿ, ಚಿಕ್ಕೋಡಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಪ್ರತಿಭಟನೆಗೆ ಭಾಗವಹಿಸಲು ಈಗಾಗಲೇ ಕರೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಮಾತನಾಡಿ, ಕೇಂದ್ರ ಸರ್ಕಾರ ವಿರುದ್ಧ ಬೆಲೆ ಏರಿಕೆ, ಸಂವಿಧಾನ ಬಚ್ಚಾವೋ ಆಂದೋಲನ ಕುರಿತು ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಗ್ಯಾಸ್‌ ಸಿಲಿಂಡರ್‌ , ತೈಲ, ದಿನಸಿ, ಸಿಮೆಂಟ್‌, ಗೊಬ್ಬರ, ಔಷದಿ ಬೆಲೆ ಏರಿಕೆ ಸೇರಿದಂತೆ ಸಾಕಷ್ಟು ಬೆಲೆಗಳನ್ನು ಏರಿಕೆ ಮಾಡಿದೆ. ಈ ಬೆಲೆ ಏರಿಕೆ ಸಮಸ್ಯೆಗಳನ್ನು ನಿಗಿಸಲು ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜನ್ಮ ತಾಳಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ನೀತಿಯಿಂದ ಎಲ್ಲಾ ಬೆಲೆಗಳು ಏರಿಕೆ ಕಂಡಿವೆ. ಇದನ್ನು ಮರೆಮಾಚಲು ಬಿಜೆಪಿಯವರು ಜನಾಕ್ರೋಶ ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಬಿಜೆಪಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಬಿಜೆಪಿಯ ಸುಳ್ಳಿನ ಸತ್ಯಾಂಶವನ್ನು ಜನರಿಗೆ ತಿಳಿಸಲು ಕೈ ಪಕ್ಷದಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ರಾಜು ಸೇಠ, ಮಾಜಿ ಸಚಿವ ಬಾಬಾಸಾಹೇಬ ಪಾಟೀಲ , ರಾಜ್ಯಸಭಾ ಸದಸ್ಯರಾದ ಜಿ ಸಿ ಚಂದ್ರಶೇಖರ, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ ದತ್ತಾ, ಪಳನಿಯಪ್ಪನ್ನ, ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಸುನೀಲ ಹನ್ನಣ್ಣನವರ ಹಾಗೂ ಇತರರು ಇದ್ದರು.

0

Leave a Reply

Your email address will not be published. Required fields are marked *

error: Content is protected !!