“ನಗು ನೀಡಿದವರು ನಾಡಿಗೆ ಬೆಳಕು ನೀಡಿದ್ದಾರೆ” – ರವಿಚಂದ್ರನ್
ಅಂಕಲಿಯಲ್ಲಿ ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮದಲ್ಲಿ ನಟನ ಭಾವನಾತ್ಮಕ ಹೇಳಿಕೆ
ಅಂಕಲಿ (ಬೆಳಗಾವಿ): “ಸಂತೋಷ ಎಂದರೆ ಇನ್ನೊಬ್ಬರ ಮುಖದಲ್ಲಿ ನಗು ಕಾಣುವುದು. ಹಾಗೆ ನಗಿಸಲು ಕಲಿತವರು ಡಾ. ಪ್ರಭಾಕರ ಕೋರೆ. ಅವರು ನಗು ನೀಡಿದವರು, ನಾಡಿಗೆ ಬೆಳಕು ನೀಡಿದ್ದಾರೆ” ಎಂದು ಹಿರಿಯ ನಟ ರವಿಚಂದ್ರನ್ ಭಾವನಾತ್ಮಕವಾಗಿ ಹೇಳಿದರು.

ಅವರು ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ ಮತ್ತು ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಮಾದ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

“ಶಿಕ್ಷಣದ ಜೊತೆಗೆ ಬದುಕು ನೀಡಿದ ಕೋರೆ ಅವರ ಸೇವೆ ವಿಶಿಷ್ಟ. ತಮ್ಮ ಬದುಕು ಬದಲಾಯಿಸಿದವರು, ಇತರರ ಬದುಕಿಗೆ ದಾರಿದೀಪವಾಗಿದ್ದಾರೆ” ಎಂದು ರವಿಚಂದ್ರನ್ ವರ್ಣಿಸಿದರು.

“ನಮ್ಮ ಮನೆಯ ಪಕ್ಕವೇ ಕೆಎಲ್‌ಇ ಕಾಲೇಜು ಇತ್ತು. ಅತಿಥಿಗಳಿಗೆ ಪ್ರೀತಿ ಎಂದರೆ ಕೋರೆ ಅವರನ್ನು ನೋಡಿ ಕಲಿಯಬೇಕು. ಕನ್ನಡಕ್ಕಾಗಿ ಹೋರಾಟಕ್ಕೆ ಸದಾ ಸಿದ್ದ. ಮನಸ್ಸು ಶುದ್ಧವಾಗಿದ್ದರೆ ಸಾಧನೆ ಶಾಶ್ವತವಾಗುತ್ತದೆ” ಎಂದೂ ಅವರು ಹೇಳಿದರು. ಡಾ. ಕೋರೆ ಅವರನ್ನು “ತಂದೆ ಸಮಾನ ವ್ಯಕ್ತಿ” ಎಂದೂ ಕರೆದು, ಅವರ ಪ್ರೀತಿ-ವಾತ್ಸಲ್ಯ ಹೃದಯ ಸ್ಪರ್ಶಿಸಿದೆ ಎಂದು ಹೇಳಿದರು.

ಕೋರೆ ಸಾಧನೆಗೆ ಧನ್ಯವಾದ – ಧನಂಜಯ, ನಾಗತಿಹಳ್ಳಿ
ನಟ ಡಾಲಿ ಧನಂಜಯ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಕೋರೆ ಅವರ ಸೇವೆಗೆ ಶ್ಲಾಘನೆ ಸಲ್ಲಿಸಿದರು. ಡಾ. ಕೋರೆ ತಮ್ಮ ಭಾಷಣದಲ್ಲಿ, ಕೆಎಲ್‌ಇ ಸಂಸ್ಥೆಯ ಪ್ರಗತಿ ಹಾಗೂ ಕನ್ನಡದ ಉಳಿವಿಗಾಗಿ ಕೈಗೊಂಡ ಕ್ರಮಗಳ ವಿವರ ನೀಡಿದರು.