ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ. ₹300 ಕೋಟಿ ಹೂಡಿಕೆಯ ಈ ಮಹತ್ವಾಕಾಂಕ್ಷಿ ಯೋಜನೆಯ ಕೆಲಸಗಳು ತಿಂಗಳೊಳಗೇ ಆರಂಭ.
ತಿರುಪತಿ ಮಾದರಿಯ’ ಅದ್ಭುತ ರೂಪಾಂತರಕ್ಕೆ ಹಸಿರು ನಿಶಾನೆ.
ಯಲ್ಲಮ್ಮನ ಗುಡ್ಡವೇ ನಮ್ಮ ಹೊಸ ತಿರುಪತಿಯಾಗಲಿದೆ!
ಬೆಳಗಾವಿ: ಸವದತ್ತಿಯ ಪವಿತ್ರ ರೇಣುಕಾ ಯಲ್ಲಮ್ಮ ದೇವಾಲಯವನ್ನು ರಾಷ್ಟ್ರಮಟ್ಟದ ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವರ್ತಿಸುವ ಭವ್ಯ ಯೋಜನೆಗೆ ಅಂತಿಮ ಅನುಮೋದನೆ ದೊರಕಿದೆ. ₹300 ಕೋಟಿ ಹೂಡಿಕೆಯ ಈ ಮಹತ್ವಾಕಾಂಕ್ಷಿ ಯೋಜನೆಯ ಕೆಲಸಗಳು ತಿಂಗಳೊಳಗೇ ಆರಂಭವಾಗಲಿವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಕಟಿಸಿದ್ದಾರೆ.

“ಯಲ್ಲಮ್ಮನ ಗುಡ್ಡವೇ ನಮ್ಮ ಹೊಸ ತಿರುಪತಿಯಾಗಲಿದೆ!”
ಬೆಳಗಾವಿ ವಾರ್ತಾ ಭವನದಲ್ಲಿ ಪತ್ರಕರ್ತರ ಸಂಘ ಆಯೋಜನೆ ಮಾಡಿದ ಸಂವಾದ ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿದರು.

“ಪ್ರತಿವರ್ಷ 3 ಕೋಟಿಗೂ ಹೆಚ್ಚು ಭಕ್ತರು ಸಂದರ್ಶಿಸುವ ಈ ಪುಣ್ಯಕ್ಷೇತ್ರಕ್ಕೆ ಇದುವರೆಗೆ ಸಮರ್ಪಕ ಮೂಲಸೌಕರ್ಯಗಳಿಲ್ಲದಿದ್ದರೂ, ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಡಿ ಎಲ್ಲಾ ಅಭಾವಗಳನ್ನು ಪೂರೈಸಲಾಗುವುದು” ಎಂದು ಹೇಳಿದರು.

ಭಕ್ತರ ಅನುಭವವನ್ನು ಪರಿವರ್ತಿಸುವ ಮೂಲಸೌಕರ್ಯಗಳು:
- ತಿರುಪತಿ ಸ್ಟೈಲ್ ಕ್ಯೂ ಸಿಸ್ಟಮ್: 16 ವಿಶಾಲ ಸಭಾಂಗಣಗಳು, ವಿಶ್ರಾಂತಿ ಕೋಣೆಗಳು, ಊಟ ಮತ್ತು ಶೌಚಾಲಯ ಸೌಲಭ್ಯಗಳೊಂದಿಗೆ 10-15 ಲಕ್ಷ ಭಕ್ತರನ್ನು ನಿರ್ವಹಿಸುವ ಸಾಮರ್ಥ್ಯ.
- ಧರ್ಮಸ್ಥಳದಂಥ ದಾಸೋಹ ಭವನ: ಏಕಕಾಲದಲ್ಲಿ 5,000 ಭಕ್ತರಿಗೆ ಊಟದ ವ್ಯವಸ್ಥೆ, ಲಕ್ಷಗಟ್ಟಲೆ ಜನರನ್ನು ಒಂದೇ ದಿನದಲ್ಲಿ ಆದರಿಸುವ ಸಾಮರ್ಥ್ಯ.
- ಭಕ್ತಿ ವಲಯ: ದೇವಾಲಯದ ಸುತ್ತ 200 ಮೀಟರ್ ವೃತ್ತಾಕಾರದಲ್ಲಿ ‘ಶಾಂತಿ ಮತ್ತು ಭಕ್ತಿಗೆ ಮೀಸಲಾದ ಪ್ರದೇಶ’.
- ವಾಸ್ತು ನಿಯಮಗಳಿಗೆ ಅನುಗುಣವಾದ ವಿನ್ಯಾಸ: ಈಶಾನ್ಯ ದಿಕ್ಕಿನಲ್ಲಿ ಯಾವುದೇ ಕಟ್ಟಡಗಳಿಲ್ಲದೆ, ಅಲ್ಲಿ ಪಾರ್ಕಿಂಗ್ ಮತ್ತು ಸಮುದಾಯ ಊಟದ ವ್ಯವಸ್ಥೆ.
ಸ್ಥಳೀಯರಿಗೆ ಆದ್ಯತೆ, ಆಧುನಿಕ ತಂತ್ರಜ್ಞಾನದ ಸಮ್ಮಿಳನ:
- ವಾಣಿಜ್ಯ ಮಳಿಗೆಗಳಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಮೊದಲ ಅವಕಾಶ.
- ಸಾಮಾನ್ಯ ಶೌಚಾಲಯಗಳ ಬದಲು ‘ಗೌರವ ಘಟಕಗಳು’ – ಸ್ನಾನ, ಅಲಂಕರಣ ಮತ್ತು ಸ್ವಚ್ಛತೆಯ ಸುಗಮ ವ್ಯವಸ್ಥೆ.
- ಡಿಜಿಟಲ್ ಅಪ್ಗ್ರೇಡ್: ಇ-ದರ್ಶನ, ಇ-ಹುಂಡಿ ಮತ್ತು ರೋಪ್ವೇ ಯೋಜನೆಗಳು ಭಕ್ತರಿಗೆ ಅನುಕೂಲಕ್ಕಾಗಿ.
“2 ವರ್ಷಗಳೊಳಗೆ ಸಾವಿರಾರು ವರ್ಷಗಳ ಇತಿಹಾಸವುಳ್ಳ ಯಲ್ಲಮ್ಮ ಗುಡ್ಡಕ್ಕೆ ಹೊಸದೊಂದು ಚೇತನ ಬರಲಿದೆ!”
ಈ ಅಭಿವೃದ್ಧಿಯೊಂದಿಗೆ, ಸವದತ್ತಿಯು ದಕ್ಷಿಣ ಭಾರತದ ಪ್ರಮುಖ ಆಧ್ಯಾತ್ಮಿಕ-ಪ್ರವಾಸಿ ಕೇಂದ್ರವಾಗಿ ಉಜ್ಜ್ವಲ ಭವಿಷ್ಯವನ್ನು ರೂಪಿಸಲಿದೆ!