ಅನಿಷ್ಟ ಪದ್ಧತಿಗಳ ನಿರ್ಮೂಲನೆಯಿಂದಲೇ ವಿವೇಕಾನಂದರ ಕನಸು ಸಾಕಾರ”

ಸಮಾಜ ಸುಧಾರಣೆಗಾಗಿ ವಿವೇಕಾನಂದರ ಸಂದೇಶಗಳ ಜಾಗೃತಿ ಅಗತ್ಯ

ರಾಮಕೃಷ್ಣ ಮಿಷನ್ ಆಶ್ರಮದ ಸೇವಾ ಕಾರ್ಯಗಳಿಗೆ ಸರಕಾರದಿಂದ ಭರವಸೆಯ ಸಹಕಾರ

ಗೌತಮಾನಂದಜಿ ಮಹಾರಾಜರ ನೇತೃತ್ವದಲ್ಲಿ ಆಶ್ರಮದ ಶ್ರೇಷ್ಠ ಸಾಧನೆ

ಬೆಳಗಾವಿ:
“ಆಸ್ಪೃಶ್ಯತೆ ಮತ್ತು ಇತರ ಅನಿಷ್ಟ ಪದ್ದತಿಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿದಾಗ ಮಾತ್ರ, ಸ್ವಾಮಿ ವಿವೇಕಾನಂದರು ಕನಸುಗೊಂಡ ಸಮಾನತೆಯ ಸಮಾಜ ಸಾಧ್ಯವಾಗುತ್ತದೆ,” ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಭಾನುವಾರ ನಡೆದ ರಜತೋತ್ಸವ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲಕ್ರಮೇಣ ಅನಿಷ್ಟ ಪದ್ಧತಿಗಳ ಪ್ರಮಾಣ ಕಡಿಮೆಯಾದರೂ, ಇಂದಿಗೂ ಕೆಲವೊಂದು ಪ್ರದೇಶಗಳಲ್ಲಿ ಇವು ಜೀವಂತವಾಗಿವೆ. ಸ್ವಾಮೀ ವಿವೇಕಾನಂದರ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ,” ಎಂದರು.

ಸಮಾಜ ಸುಧಾರಣೆಗೆ ಸರ್ಕಾರದ ಬದ್ಧತೆ
“ಬಡತನ
ನಿವಾರಣೆಗೆ ಹಾಗೂ ಸಮಾನತೆಯ ಭಾವನೆ ಬೆಳೆಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರೂ ವಿದ್ಯೆ ಹೊಂದಿದಾಗ, ಅಭಿವೃದ್ದ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ,” ಎಂದು ಪಾಟೀಲ ಅಭಿಪ್ರಾಯಪಟ್ಟರು.

ಆಶ್ರಮದ ಕಾರ್ಯಪ್ರವೃತ್ತಿಗೆ ಮೆಚ್ಚುಗೆ
ರಾಮಕೃಷ್ಣ ಮಿಷನ್ ಆಶ್ರಮವು ಸ್ವಾಮೀ ವಿವೇಕಾನಂದರ ತತ್ತ್ವ, ಸಂದೇಶಗಳನ್ನು ಸಮುದಾಯಕ್ಕೆ ತಲುಪಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ.
“ಈ ಸೇವಾ ಪ್ರಯತ್ನಗಳು ಹೀಗೇ ಮುಂದುವರಿಯಲಿ. ಸರ್ಕಾರದಿಂದ ಅಗತ್ಯ ಸಹಕಾರವನ್ನು ನೀಡಲಾಗುವುದು” ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು, “ರಾಮಕೃಷ್ಣ ಆಶ್ರಮವು ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಭಗೀರಥ ಶ್ರಮ ಮಾಡುತ್ತಿದೆ. ಈ ಆಶ್ರಮದ ಬೆನ್ನೆಲುಬಾಗಿ ನಿಂತಿರುವ ಗೌತಮಾನಂದಜಿ ಮಹಾರಾಜ್ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧ” ಎಂದು ಹೇಳಿದರು.

ಅಪರೂಪದ ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್ ಪರಮಾಧ್ಯಕ್ಷ ಗೌತಮಾನಂದಜಿ ಮಹಾರಾಜ್, ಮೈಸೂರಿನ ಮಠದ ಅಧ್ಯಕ್ಷ ಮುಕ್ತಿದಾನಂದಜಿ ಮಹಾರಾಜ್, ನಿವೃತ್ತ ಪೊಲೀಸ್ ಅಧಿಕಾರಿಯ ವಿ.ವಿ. ಭಾಸ್ಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!